ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ನಲ್ಲಿ ಶಾಶ್ವತ ನೀರಾವರಿಗೆ ಹೋರಾಟ

Last Updated 22 ಡಿಸೆಂಬರ್ 2012, 9:58 IST
ಅಕ್ಷರ ಗಾತ್ರ

ತುಮಕೂರು: ನೇತ್ರಾವತಿ ತಿರುವು ಯೋಜನೆ ಜಾರಿಗಾಗಿ ಸಂಸತ್ತಿನಲ್ಲಿ ಹೋರಾಟ ನಡೆಸುವುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅನಂತಕುಮಾರ್ ಇಲ್ಲಿ ಶುಕ್ರವಾರ ಹೇಳಿದರು.

ಬಿಜೆಪಿ ಜಿಲ್ಲಾಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ನದಿ ಜೋಡಣೆ ಯೋಜನೆಗಳಿಗೆ ಬಿಜೆಪಿ ಬದ್ಧತೆ ಪ್ರದರ್ಶಿಸಿದೆ. ನೇತ್ರಾವತಿ ತಿರುವು ಯೋಜನೆಗಾಗಿ ಸಹ ಹೋರಾಟ ಅಗತ್ಯ ಎಂದರು.

ಗುಜರಾತ್‌ನಲ್ಲಿ ಬಿಜೆಪಿ ಕಳೆದ ಬಾರಿಗಿಂತ ಶೇ 3ರಷ್ಟು ಹೆಚ್ಚು ಮತ ಗಳಿಸಿದೆ. ಅಭಿವೃದ್ಧಿಗೆ ಜನತೆ ಒಲಿಯುತ್ತಾರೆ ಎಂಬುದು ಸಾಬೀತಾಗಿದೆ. ರಾಜ್ಯದಲ್ಲಿ ಸಹ ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸಲಿದ್ದು, ಗುಜರಾತ್ ಫಲಿತಾಂಶ ಮರುಕಳಿಸಲಿದೆ. ಕಾಂಗ್ರೆಸ್ ವಿನಾಶದತ್ತ, ಬಿಜೆಪಿ ವಿಕಾಸದತ್ತ ಹೆಜ್ಜೆ ಹಾಕುತ್ತಿವೆ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಆಗಿದೆ. ರಸಗೊಬ್ಬರ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿದ್ದು, ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ಬಿಜೆಪಿ ಯಾರೋ ಒಬ್ಬರು ಶ್ರಮಿಸಿ ಕಟ್ಟಿದ ಪಕ್ಷವಲ್ಲ. ಅನೇಕ ಮುಖಂಡರು 40 ವರ್ಷದಿಂದ ಪಕ್ಷ ಕಟ್ಟಿದ್ದಾರೆ. ನಾನು ಎಂಬ ಅಹಂನಿಂದ ಪಕ್ಷ ಬಿಟ್ಟು ಹೋದವರ ಬಗ್ಗೆ ಚರ್ಚೆ ಬೇಡ ಎಂದು ಯಡಿಯೂರಪ್ಪ ಹೆಸರು ಹೇಳದೆ ಟೀಕಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ ಮಾತನಾಡಿ, ಬಿಜೆಪಿ ತೊರೆದವರ ಬಗ್ಗೆ ತಲೆಬಿಸಿ ಬೇಡ. ಕೊಬ್ಬರಿ ಹಾಗೇ ಇದೆ, ಚಿಪ್ಪು ಮಾತ್ರ ಹೊರಹೋಗಿದೆ. ಇಲ್ಲಿನ ಸಂಸದರು ಸೋತು ಬಿಜೆಪಿಗೆ ಬಂದಿದ್ದರು, ನಾವು ಅವರನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿದೆವು. ಈಗ ಪಕ್ಷದ ಬಗ್ಗೆ ಅಗೌರವವಾಗಿ ಮಾತನಾಡುತ್ತಾರೆ ಎಂದು ಟೀಕಿಸಿದರು.

ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ಪಕ್ಷದ ನಾಯಕರಲ್ಲಿ ಕೆಲವು ಗೊಂದಲಗಳಿರಬಹುದು. ಆದರೆ ಕಾರ್ಯಕರ್ತರಲ್ಲಿ ಗೊಂದಲವಿಲ್ಲ. ಪಕ್ಷ ವ್ಯಕ್ತಿ ಆಧಾರಿತ ಅಲ್ಲ. ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರ ಪಡೆ ಬಿಜೆಪಿಯಲ್ಲಿದೆ ಎಂದರು.

ಸರ್ಕಾರದ ಮುಖ್ಯ ಸಚೇತಕ ಡಾ.ಶಿವಯೋಗಿಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಶಿವಪ್ರಸಾದ್, ಜಿಲ್ಲಾ ಉಸ್ತುವಾರಿ ಅಶ್ವತ್ಥ ನಾರಾಯಣ, ಮಾಜಿ ಶಾಸಕರಾದ ಸೋಮ್ಲಾನಾಯಕ್, ಗಂಗಾಧರಯ್ಯ, ಮುಖಂಡರಾದ ಎಂ.ಬಿ.ನಂದೀಶ್, ಪೂರ್ಣಿಮಾ ಪ್ರಕಾಶ್, ಮಹಾದೇವಯ್ಯ, ಕೃಷ್ಣಪ್ಪ, ಶ್ರೀಧರ್, ಕೃಷ್ಣಕುಮಾರ್ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT