ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಆದಿಕೇಶವಲು ಮನೆಯಲ್ಲಿ ಕಳವು:1.50 ಕೋಟಿ ಮೌಲ್ಯದ ಆಭರಣ ವಶ

Last Updated 20 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ಕೋಲಾರ: ಆಂಧ್ರಪ್ರದೇಶದ ಚಿತ್ತೂರು ಸಂಸದ ಆದಿಕೇಶವಲು ಅವರ ಬೆಂಗಳೂರಿನ ಮನೆಯಲ್ಲಿ ಕಳವು ಮಾಡಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ನಗರ ಠಾಣೆ ಪೊಲೀಸರು ತನಿಖೆ ನಡೆಸಿ ಅವರಿಂದ ಸುಮಾರು ರೂ.1.50 ಕೋಟಿ ಮೌಲ್ಯದ ಬೆಳ್ಳಿ, ವಜ್ರದ ಆಭರಣಗಳನ್ನು ಪತ್ತೆ ಹಚ್ಚಿದ್ದಾರೆ. ಜಿಲ್ಲೆಯ ಪೊಲೀಸ್ ಇತಿಹಾಸದಲ್ಲಿ ಇದೊಂದು ಅಂತರ ರಾಜ್ಯ ಮಟ್ಟದ ದೊಡ್ಡ ಪ್ರಕರಣ ಎಂದು ಕೇಂದ್ರ ವಲಯ ಐಜಿಪಿ ಅಮರಕುಮಾರ್ ಪಾಂಡೆ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ವಜ್ರ, ಮುತ್ತು, ಹವಳ ಅಳವಡಿಸಿದ ಕೋಟ್ಯಂತರ ಮೌಲ್ಯದ ಚಿನ್ನದ ಸರಗಳು, ಬೆಳ್ಳಿ ಪಾತ್ರೆ, ವಿದೇಶಿ ವಾಚ್, ಜರ್ಮನ್ ಕಂಪೆನಿಯೊಂದರ ಪುಟ್ಟ ಪಿಸ್ತೂಲ್, 5 ಗುಂಡು ಸೇರಿದಂತೆ 44 ವಸ್ತುಗಳನ್ನು ಕರ್ನಾಟಕ, ಆಂಧ್ರಪ್ರದೇಶ, ರಾಜಾಸ್ತಾನ, ಮುಂಬಯಿ ಮೊದಲಾದೆಡೆ ಪತ್ತೆ ಹಚ್ಚಲಾಗಿದೆ ಎಂದರು.

ಆದಿಕೇಶವಲು ಅವರ ಮನೆಯಲ್ಲಿ ನೌಕರನಾಗಿದ್ದ ಮದನಪಲ್ಲಿಯ ವಾಸಿ ಅಕ್ರಂ ಮೂರು ವರ್ಷಗಳ ಅವಧಿಯಲ್ಲಿ ಆಭರಣಗಳನ್ನು ಕಳವು ಮಾಡಿ ನಗರದ ಮಿಲ್ಲತ್ ನಗರದ ವಾಸಿ ಬಾಬಾಜಾನ್ ಮೂಲಕ ಮಾರಾಟ ಮಾಡುತ್ತಿದ್ದ ಅ.8ರಂದು ನಗರದ ಕೀರ್ತಿಕುಮಾರ್ ಗಿರವಿ ಅಂಗಡಿ ಬಳಿ ಈ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು 10 ದಿನಗಳಷ್ಟು ಕಡಿಮೆ ಅವಧಿಯಲ್ಲಿ ಕ್ಷಿಪ್ರ ತನಿಖೆ ನಡೆಸಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತಂದಿದ್ದಾರೆ ಎಂದರು.

ಕಳವಿನ ಕುರಿತು ಆದಿಕೇಶವಲು ಇದುವರೆಗೆ ಯಾವುದೇ ದೂರನ್ನು ದಾಖಲಿಸಿಲ್ಲ. ಆದರೆ ಅವರ ಮಗ ಶ್ರೀನಿವಾಸ್ ಎಂಬುವರು ತಮ್ಮ ಹೆಸರಿನಲ್ಲಿದ್ದ ಪಿಸ್ತೂಲ್ ಕಳವಾಗಿರುವ ಬಗ್ಗೆ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಕಳೆದ ಏ.3ರಂದು ದೂರು ದಾಖಲಿಸಿದ್ದರು ಎಂದು ಮಾಹಿತಿ ನೀಡಿದರು.

ಏನೇನು?: ಪತ್ತೆ ಹಚ್ಚಲಾಗಿರುವ ವಸ್ತುಗಳಲ್ಲಿ ರೂ.7.80 ಲಕ್ಷ ಮೌಲ್ಯದ ನವರತ್ನ ಹಾರ, 4 ಲಕ್ಷ ಮೌಲ್ಯದ ವಜ್ರ ಖಚಿತ ಕೈಗಡಿಯಾರ, 140 ವಜ್ರಗಳಿರುವ ರೂ.8.40 ಲಕ್ಷ ಮೌಲ್ಯದ ಸರ, 108 ವಜ್ರಗಳಿರುವ 10.30 ಲಕ್ಷ ಮೌಲ್ಯದ ಸರ, 38 ವಜ್ರ, ನವರತ್ನ, ಪದಕ ಅಳವಡಿಸಿರುವ 35 ಲಕ್ಷ ಮೌಲ್ಯದ ಮುತ್ತಿನ ಹಾರ, 86 ವಜ್ರಗಳಿರುವ ರೂ.4.50 ಲಕ್ಷ ಮೌಲ್ಯದ ಬಂಗಾರದ ಓಲೆಗಳು, 20 ವಜ್ರಗಳಿರುವ 5.50 ಲಕ್ಷ ಮೌಲ್ಯದ ವೆಂಕಟೇಶ್ವರ ಸ್ವಾಮಿಯ ಪದಕದ ಸರ, ರೂ.18 ಲಕ್ಷ ಮೌಲ್ಯದ 7 ಕ್ಯಾರೆಟ್‌ನ 4 ದೊಡ್ಡ ವಜ್ರಗಳು, ರೂ.6 ಲಕ್ಷ ಮೌಲ್ಯದ 4 ಕ್ಯಾರೆಟ್‌ನ 4 ದೊಡ್ಡ ವಜ್ರಗಳಿವೆ ಎಂದು ವಿವರಿಸಿದರು.

ಪ್ರಕರಣ ಪತ್ತೆ ಹಚ್ಚಿದ ನಗರ ಸರ್ಕಲ್  ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದ ತಂಡಕ್ಕೆ 25 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು. ಕಾರ್ಯಾಚರಣೆಯಲ್ಲಿ ಗಲ್‌ಪೇಟೆ ಪಿಎಸ್‌ಐ ಸಾದಿಕ್‌ಪಾಶಾ, ನಗರಠಾಣೆ ಪಿಎಸ್‌ಐಗಳಾದ ಎಂ.ಅಂಬರೀಶ್ ಚಂದ್ರಪ್ಪ, ಹೆಡ್‌ಕಾನ್ಸ್‌ಟೆಬಲ್‌ಗಳಾದ ಹಮೀದ್‌ಖಾನ್, ಎಂ.ಆನಂದ, ಬೀರೇಗೌಡ, ಮೆಹಬೂಬ್ ಪಾಷಾ, ಕಾನ್ಸ್‌ಟೆಬಲ್‌ಗಳಾದ ಎಂ.ಡಿ.ನಾರಾಯಣಪ್ಪ, ಮಂಜುನಾಥ, ಮುನಿವೆಂಕಟಸ್ವಾಮಿ, ಚಾಲಕ ಅನಿಲ್‌ಕುಮಾರ್, ಮುನಿರತ್ನಂ, ಚಂದ್ರಶೇಖರರಾವ್, ಸೋಮಶೇಖರ್, ಎಂ.ಕೃಷ್ಣೇಗೌಡ, ವಿ.ಕೃಷ್ಣೇಗೌಡ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಭಗವಾನ್‌ದಾಸ್, ಡಿವೈಎಸ್‌ಪಿ ಶ್ರೀಹರಿ ಬರಗೂರು ಉಪಸ್ಥಿತರಿದ್ದರು.

ಮಿತ್ರ ವಾಹನಕ್ಕೆ ಚಾಲನೆ: ಸಾರ್ವಜನಿಕರಿಗೆ ತುರ್ತು ಪೊಲೀಸ್ ಸೇವೆ ನೀಡುವ `ಮಿತ್ರ~ ಹೆಸರಿನ ವಾಹನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಐಜಿಪಿ ಅಮರಕುಮಾರ್ ಪಾಂಡೆ ಹಸಿರು ನಿಶಾನೆ ತೋರಿಸಿದರು. ವಜ್ರ ಎಂಬ ಹೆಸರನ್ನು ಮಿತ್ರ ಎಂದು ಬದಲಿಸಲಾಗಿದ್ದು, 24 ಗಂಟೆಯೂ ಈ ಸೇವೆ ಲಭ್ಯವಿರುತ್ತದೆ. ಮುಂದಿನ ವರ್ಷದ ಹೊತ್ತಿಗೆ ಇನ್ನೆರಡು ವಾಹನಗಳನ್ನು ಜಿಲ್ಲೆ ನೀಡಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT