ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರ ಇಂಗಿತ ಬೆದರಿಕೆ ತಂತ್ರವೇ?

Last Updated 25 ಏಪ್ರಿಲ್ 2013, 7:51 IST
ಅಕ್ಷರ ಗಾತ್ರ

ಕಾರವಾರ: ಸಂಸದ ಅನಂತಕುಮಾರ ಹೆಗಡೆ ರಾಜ್ಯ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿರುವುದು ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಬೆದರಿಸುವ ತಂತ್ರವಾಗಿತ್ತೇ ಎನ್ನುವ ಅನುಮಾನ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.

ಕಳೆದ ಫೆಬ್ರುವರಿಯಲ್ಲಿ ಪಕ್ಷದ ರಾಜ್ಯ, ಜಿಲ್ಲಾ ಘಟಕದ ಅಧ್ಯಕ್ಷರಿಗೆ ಪತ್ರ ಬರೆದ ಸಂಸದರು ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು.

`ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದನಾಗಿ ಅಯ್ಕೆಯಾಗಿದ್ದು, ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಅನೇಕ ಜನಪರ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವು ದೇಶದಲ್ಲಿಯೇ ಅತ್ಯಂತ ವಿನೂತನ ಯೋಜನೆಗಳೆಂದು ಜನಜನಿತವಾಗಿದೆ'.

`ಕ್ಷೇತ್ರದ ಸಂಘಟನೆಯ ದೃಷ್ಟಿಯಿಂದಲೂ ಸಹ ಅತ್ಯಂತ ಕ್ರಿಯಾಶೀಲನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅದೆಲ್ಲವೂ ಈಗಾಗಲೇ ತಮಗೆ ತಿಳಿದಿರುವ ವಿಷಯವಾಗಿದೆ. ಆದರೆ, ಈ ಬಾರಿ ಉತ್ತರ ಕನ್ನಡ ಲೋಕಸಭೆ ಹೊರತಾಗಿ ರಾಜ್ಯ ವಿಧಾನಸಭೆಗೆ ಸ್ಪರ್ಧಿಸಲು ಬಯಸುತ್ತಿದ್ದೇನೆ' ಎಂದು ಪತ್ರದಲ್ಲಿ ವಿವರಿಸಿದ್ದರು.

ಸಂಸದರ ಈ ದಿಢೀರ್ ಬದಲಾವಣೆ ಬಿಜೆಪಿ ಪ್ರಮುಖರೂ ಸೇರಿದಂತೆ ಕಾರ್ಯಕರ್ತರಿಗೆ ಸಣ್ಣ ಶಾಖ್ ನೀಡಿತ್ತು. ಈ ಶಾಕ್ ನೀಡಿದ ಸಂಸದರು ಬಳಿಕ ತಣ್ಣಗಾಗಿದ್ದಾರೆ. ಆದರೆ ಅವರು ಏಕೆ ಈ ಇಂಗಿತ ವ್ಯಕ್ತಪಡಿಸಿದ್ದರು ಎನ್ನುವುದು ಮಾತ್ರ ರಹಸ್ಯವಾಗಿದೆ.

ಅಂಕೋಲಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಕಣಕ್ಕೆ ಇಳಿದು ಜಯಗಳಿಸಿದ ನಂತರ ಪಕ್ಷದ ಮುಖಂಡರು, ಹಿರಿಯರು ಸೇರಿದಂತೆ ಯಾರನ್ನೂ ಗಣನೆಗೆ ತೆಗೆದುಕೊಳ್ಳದೇ `ಆನೆ ಹಾಕಿದ್ದೇ ಹೆಜ್ಜೆ ನಡೆದದ್ದೇ ದಾರಿ' ಎನ್ನುವ ರೀತಿಯಲ್ಲಿ ನಡೆದುಕೊಂಡಿದ್ದರಿಂದ `ಬಿಸಿ' ಮುಟ್ಟಿಸಲು ಸಂಸದರು ಈ ತಂತ್ರ ಅನುಸರಿಸಿದ್ದರೂ ಎನ್ನುವುದು ಕೆಲವು ಕಾರ್ಯಕರ್ತರ ಅಭಿಪ್ರಾಯ.

ರಾಜ್ಯ ರಾಜಕೀಯ ಪ್ರವೇಶ ಮಾಡಬೇಕು ಎನ್ನುವ ಅತೀವ ಹಂಬಲ ಹೊಂದಿರುವ ಸಂಸದರು ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಟಿಕೆಟ್ ಸಿಗದೇ ಇದ್ದರೆ ಕುಮಟಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೇಳಲಿದ್ದಾರೆ ಎನ್ನುವ ಮಾತುಗಳೂ ಸಂಸದರ ಆಪ್ತ ವಲಯದಿಂದ ಕೇಳಿಬಂದಿತ್ತು. ಹೀಗೆ ಒಂದೇ ಏಟಿನಲ್ಲಿ ಎರಡು ಹಣ್ಣು ಉದುರಿಸುವ ಕೆಲಸವನ್ನು ಸಂಸದರು ಮಾಡಿದ್ದರೇ ಎನ್ನುವ ಅನುಮಾನಗಳೂ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.

ಶಿರಸಿ ನಗರಸಭೆ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಕಾಗೇರಿ ಹಾಗೂ ಸಂಸದರ ಮಧ್ಯೆ ಸಣ್ಣ ವೈಮನಸ್ಸು ಮೂಡಿತ್ತು. ಇದೂ ಕೂಡ ಸಂಸದರು ತಮ್ಮ ನಿಲುವು ಬದಲಿಸಲು ಕಾರಣವಾಗಿತ್ತು ಎನ್ನುವುದು ಗೊತ್ತಾಗಿದೆ.ಸಂಸದರು ಪತ್ರದಲ್ಲಿರುವ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ವರಿಷ್ಠರು ತಡಮಾಡದೆ ವಿವಾದವನ್ನು ಮೊಳಕೆಯಲ್ಲೇ ಚಿವುಟಿ ಹಾಕಿದರು.

`ಸಂಸದರು ಪತ್ರ ಬರೆದ ನಂತರ ಹಿರಿಯರು ಸಭೆ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ. ಈ ವಿಷಯವಾಗಿ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ' ಎಂದು ಪ್ರಸಾದ ಕಾರವಾರಕರ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT