ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರಿಂದ ಅಧಿಕಾರಿಗಳ ತರಾಟೆ

ಜಿಲ್ಲೆಗೆ ಕಡಿಮೆಯಾದ ಕೇಂದ್ರ ಸರ್ಕಾರದ ಅನುದಾನ
Last Updated 9 ಜುಲೈ 2013, 10:44 IST
ಅಕ್ಷರ ಗಾತ್ರ

ಬೆಳಗಾವಿ: `ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸರಿಯಾಗಿ ಕೆಲಸ ಮಾಡಿರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಮರ್ಪಕವಾಗಿ ಮಾಹಿತಿ ನೀಡದೇ ಇರುವುದರಿಂದ ಪ್ರಸಕ್ತ ಸಾಲಿಗೆ ಜಿಲ್ಲೆಗೆ ಕೇವಲ 112 ಕೋಟಿ ರೂಪಾಯಿ ಅನುದಾನ ಬಂದಿದೆ.

ಜಿಲ್ಲೆಗೆ ಹೆಚ್ಚಿನ ಅನುದಾನ ತರುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ' ಎಂದು ಸಂಸದ ಸುರೇಶ ಅಂಗಡಿ ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದರು, `ಕಳೆದ ವರ್ಷ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿತ್ತು. ಪ್ರಸಕ್ತ ವರ್ಷ ಜಿಲ್ಲೆಯಿಂದ 382 ಕೋಟಿ ರೂಪಾಯಿ ಕ್ರಿಯಾಯೋಜನೆ ಸಲ್ಲಿಸಿದರೂ, ಕೇವಲ 112 ಕೋಟಿ ರೂಪಾಯಿ ಅನುದಾನ ಲಭಿಸಿದೆ. ಧಾರವಾಡ ಜಿಲ್ಲೆಗೆ 80 ಕೋಟಿ ರೂಪಾಯಿ ಅನುದಾನ ಸಿಕ್ಕಿದೆ. ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಗೆ ಅವಿಭಜಿತ ಧಾರವಾಡ ಜಿಲ್ಲೆಗೆ ಸಿಕ್ಕಷ್ಟು ಅನುದಾನ ಲಭಿಸಬೇಕಿತ್ತು. ಹೆಚ್ಚುವರಿ ಅನುದಾನ ತರುವ ಜವಾಬ್ದಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಎಂಎನ್‌ಆರ್‌ಇಜಿ ಯೋಜನಾ ನಿರ್ದೇಶಕರೇ ತೆಗೆದುಕೊಳ್ಳಬೇಕು' ಎಂದು ಸೂಚಿಸಿದರು. 

ಜಿಲ್ಲೆಯಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಅನುಷ್ಠಾನ ನಿಗದಿತ ಪ್ರಮಾಣದಲ್ಲಿ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅಂಗಡಿ, ಈ ನಿಟ್ಟಿನಲ್ಲಿ ಅಧಿಕಾರಿಗಳು ಇನ್ನೂ ಹೆಚ್ಚು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಇಂದಿರಾ ಆವಾಸ್ ಯೋಜನೆ,  ಗ್ರಾಮೀಣ ನೈರ್ಮಲ್ಯ ಸೇರಿದಂತೆ ಹಲವಾರು ಯೋಜನೆಗಳಲ್ಲಿ ನಿಗದಿತ ಗುರಿ ಸಾಧನೆ ಮಾಡಿಲ್ಲ. ಇದರಿಂದ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆಯಲ್ಲಿ ಕಡಿತ ಉಂಟಾಗಿ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಎಚ್ಚರಿಸಿದರು.

ಕೆಲವು ಬ್ಯಾಂಕ್‌ಗಳ ಅಧಿಕಾರಿಗಳು ಖಾತೆ ತೆರವುವಲ್ಲಿ ಅಸಹಕಾರ ತೋರುತ್ತಿರುವುದು ಈ ಯೋಜನೆಯ ಅನುಷ್ಠಾನದಲ್ಲಿ ಸ್ವಲ್ಪ ಕುಂಠಿತವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಾ ಚೋಳನ ಸಭೆಗೆ ತಿಳಿಸಿದರು. ಈ ಕುರಿತು ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

ಇಂದಿರಾ ಆವಾಸ್ ಯೋಜನೆಯ ಅಡಿ ಮನೆ ನಿರ್ಮಾಣ ಕಾರ್ಯವು ಸಹ ತಪ್ತಿಕರವಾಗಿಲ್ಲ. ಕಳೆದ ಹಣಕಾಸು ವರ್ಷದಲ್ಲಿ ಜಿಲ್ಲೆಗೆ ಒಟ್ಟು 19,077 ಮನೆಗಳನ್ನು ಮಂಜೂರು ಮಾಡಲಾಗಿತ್ತು. ಈ ಪೈಕಿ 4313 ಮನೆಗಳು ಪೂರ್ಣಗೊಂಡಿವೆ. ಇನ್ನೂ 14,764 ಮನೆಗಳ ನಿರ್ಮಾಣ ಕಾರ್ಯವು ಆಗಬೇಕಾಗಿದೆ. ಈ ಮನೆಗಳನ್ನು ತ್ವರಿತವಾಗಿ ಪೂರ್ಣಗೊಂಡಿಸುವಂತೆ ಅವರು ತಿಳಿಸಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಕಳೆದ ವರ್ಷ 124 ಕಾಮಗಾರಿಗಳನ್ನು ಕೈಗೆತ್ತಿಕೊಂಡು 710 ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗಿದೆ. ಅದರಂತೆ ನಿರ್ಮಲ ಭಾರತ ಅಭಿಯಾನದ ಯೋಜನೆಯಡಿಯಲ್ಲಿ ಕಳೆದ ಏಪ್ರಿಲ್‌ನಿಂದ ಜೂನ್ ಅಂತ್ಯದವರೆಗೆ 126 ಎಪಿಎಲ್ ಹಾಗೂ 2810 ಬಿಪಿಎಲ್ ಮನೆಗಳಿಗೆ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 75 ಶಾಲೆಗಳಿಗೆ ಹಾಗೂ 25 ಅಂಗನವಾಡಿ ಕೇಂದ್ರಗಳಿಗೆ ಸಹ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದುವರೆಗೆ ಒಟ್ಟು 43 ಗ್ರಾಮ ಪಂಚಾಯಿತಿಗಳು ನಿರ್ಮಲ ಗ್ರಾಮ ಪುರಸ್ಕಾರ ಪಡೆದಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

`ಪ್ರತಿ ತಾಲೂಕಿನಲ್ಲಿ 1 ಅಥವಾ 2 ಗ್ರಾಮಗಳನ್ನು ಆಯ್ಕೆ ಮಾಡಿ ಪ್ರತಿಯೊಂದು ಮನೆಗೆ ಶೌಚಾಲಯ ಇರುವ ಹಾಗೆ ಶೇ. 100 ಸಾಧನೆ ಮಾಡಿ ತೋರಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ 1359 ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕುಡಿಯುವ ನೀರನ್ನು ಪೂರೈಸಲಾಗಿದೆ. ಜಿಲ್ಲೆಯಲ್ಲಿ ಚಿಕ್ಕೋಡಿ ತಾಲ್ಲೂಕಿನ 28, ಅಥಣಿ ತಾಲ್ಲೂಕಿನ 19, ಹುಕ್ಕೇರಿ ತಾಲ್ಲೂಕಿನ 13 ಹಾಗೂ ರಾಯಬಾಗ ತಾಲ್ಲೂಕಿನ 23 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಮಲ್ಲೇಶ ಯಾದವಾಡ, ಪ್ರತಾಪ ಕೋಳಿ ಹಾಗೂ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT