ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸಾರ ಸಾಗರದಲ್ಲೂ ಚಿನ್ನದ ಬೇಟೆ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ವಿಜಾಪುರ: ಸಂಸಾರ ಎಂಬ ಸಾಗರ ಸೇರಿದರೂ ಅಲ್ಲಿ `ಮುಳುಗದೆ~ ಚಿನ್ನದ ಬೇಟೆಯಾಡಿದ ಸಾಧಕಿಯರ ಕಥೆ ಇದು.

`ಒಂದು ಸರ್ಕಾರಿ ನೌಕರಿ ದೊರೆತು, ಮದುವೆಯಾದರೆ ತಮ್ಮ ಬದುಕು ಸಾರ್ಥಕ~ ಎಂಬುದು ಬಹುತೇಕ ಯುವತಿಯರ ಬಯಕೆ. ಆದರೆ ಇದಕ್ಕೆ ಅಪವಾದವಾಗಿ ನಿಂತಿದ್ದಾರೆ ಸ್ಥಳೀಯ ಶಬಾನಾ ತಬಸ್ಸುಮ್ ಬಾಬಾಲಾಲ್ ಜಗದಾಳೆ. ಸರ್ಕಾರಿ ನೌಕರಿಗೆ ವೇತನ ರಹಿತ ರಜೆ ಹಾಕಿ, `ಸಂಸಾರದ ಬಿರುಕಿನ~ ನೋವು ನುಂಗಿ ಉನ್ನತ ವ್ಯಾಸಂಗ ಪೂರೈಸಿದ್ದಾರೆ.

ಭಾನುವಾರ ಇಲ್ಲಿ ನಡೆದ ಮಹಿಳಾ ವಿಶ್ವವಿದ್ಯಾಲಯದ 3ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ  ಶಬಾನಾ ತಬಸ್ಸುಮ್, `ಇದು ನನ್ನ ಬದುಕಿನ ಅತ್ಯಂತ ಸಂತಸದ ಕ್ಷಣ~ ಎಂದು ಹೇಳುತ್ತ ನಿಟ್ಟುಸಿರು ಬಿಟ್ಟರು.

ಈಕೆ ಹಾವೇರಿ ಜಿಲ್ಲೆ ಹಂಸಭಾವಿಯ ಪ್ರೌಢ ಶಾಲೆಯ ಶಿಕ್ಷಕಿ. ಆರೋಗ್ಯ ಇಲಾಖೆಯಲ್ಲಿ ಇರುವಂತೆ ಪ್ರೌಢ ಶಾಲೆಯ ಶಿಕ್ಷಕರು ಉನ್ನತ ವ್ಯಾಸಂಗ ಪೂರೈಸಲು ಯಾವುದೇ ಯೋಜನೆ ಇಲ್ಲ.

ಆದರೂ ಈಕೆ ಎರಡು ವರ್ಷ ವೇತನ ರಹಿತ ರಜೆ ಪಡೆದು ವಿಜಾಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಎಂ.ಎಸ್‌ಸಿ. ಎಲೆಕ್ಟ್ರಾನಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಅತಿ ಹೆಚ್ಚು ಅಂಕ ಗಳಿಸಿ ಚಿನ್ನದ ಪದಕವನ್ನೂ ತನ್ನದಾಗಿಸಿ ಕೊಂಡಿದ್ದಾರೆ.

ವಿವಾಹ ವಿಚ್ಛೇದನವಾದರೂ ಈಕೆ ವಿಚಲಿತಳಾಗಿಲ್ಲ. ಚಿನ್ನದ ಪದಕದೊಂದಿಗೆ ಉನ್ನತ ವ್ಯಾಸಂಗ ಪೂರೈಸಿ ತನ್ನ ಆಸೆಯನ್ನು ಈಡೇರಿಸಿಕೊಂಡ ಧೀರೆ ಈಕೆ.

`ಈ ಚಿನ್ನದ ಪದಕ ನನ್ನ ಬದುಕಿಗೆ ಮತ್ತಷ್ಟು ಬಲ ನೀಡಿದೆ. ಪಿಎಚ್.ಡಿ ಯನ್ನೂ ಪೂರೈಸುವ ಆಸೆ ಇದೆ~ ಎಂದು ತಮ್ಮ ಉನ್ನತ ಅಧ್ಯಯನದ ಹಂಬಲವನ್ನು ವಿವರಿಸಿದರು.

`ನೌಕರಿಯಲ್ಲಿರುವ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಸರ್ಕಾರ ಯೋಜನೆ ರೂಪಿಸಬೇಕು. ವೇತನ ನೀಡದಿದ್ದರೂ ಪರವಾಗಿಲ್ಲ. ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರು ಉನ್ನತ ವ್ಯಾಸಂಗ ಕೈಗೊಂಡರೆ ಅವರ ಉನ್ನತ ವ್ಯಾಸಂಗದ ಅವಧಿಯನ್ನು ಅವರ ಸೇವಾ ಅವಧಿ ಎಂದು ಪರಿಗಣಿಸಬೇಕು~ ಎಂಬುದು ಶಬಾನಾಳ ತಂದೆ, ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿ ಬಾಬುಲಾಲ್ ಜಗದಾಳೆ ಅವರ ಮನವಿ. ತಮ್ಮ ಮಗಳಂತೆ ಇತರ ಯುವತಿಯರೂ ಉನ್ನತ ವ್ಯಾಸಂಗ ಕೈಗೊಳ್ಳಲಿ ಎಂಬುದು ಅವರ ಕಳಕಳಿ.

ವಿವಾಹಿತೆ ಸಾಧನೆ: ಉಡುಪಿಯಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದ ಸುಪ್ರಭಾ ಎನ್. ಅವರದ್ದು ಇನ್ನೊಂದು ಬಗೆಯ ಸಾಧನೆ. ಇವರಿಗೆ ಮದುವೆಯಾಗಿದೆ. ರಜತ ಕೃಷ್ಣ ಎಂಬ ಐದು ವರ್ಷದ ಮಗನಿದ್ದಾನೆ. ಪತಿ ಖಾಸಗಿ ಬ್ಯಾಂಕ್‌ನಲ್ಲಿ ಅಧಿಕಾರಿ. ಸುಂದರ ಸಂಸಾರದಲ್ಲಿ ಈಕೆ ಮೈಮರೆಯಲಿಲ್ಲ. ಓದುವ ಉಮೇದು ಕಡಿಮೆಯಾಗಲಿಲ್ಲ.

ಮದುವೆಯಾದ ನಂತರವೇ ಇವರು ಬಿ.ಪಿ.ಎಡ್., ಎಂ.ಪಿ.ಎಡ್. ಪೂರೈಸಿದರು. ಸಂಸಾರದ ಬಂಡಿ ಎಳೆಯುತ್ತ, ಮಗುವಿನ ಪಾಲನೆ ಮಾಡುತ್ತ ಎಂ.ಪಿ.ಎಡ್‌ನಲ್ಲಿ ಡಬಲ್ ಚಿನ್ನದ ಪದಕ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.

`ಯುವತಿಯರಿಗೆ ಉನ್ನತ ಅಧ್ಯಯನಕ್ಕೆ ಬಹುಪಾಲು ಪಾಲಕರು ಅವಕಾಶ ನೀಡುತ್ತಿಲ್ಲ. ಅದರಲ್ಲೂ ದೇಹ ದಂಡಿಸುವ ದೈಹಿಕ ಶಿಕ್ಷಣಕ್ಕೆ ಅವಕಾಶವೇ ಇಲ್ಲ~ ಎಂಬುದು ಎಲ್ಲೆಡೆ ಕೇಳಿ ಬರುತ್ತಿರುವ ಮಾತು. `ತಾಯಿ~ ಆದ ಮೇಲೂ ಸ್ನಾತಕೋತ್ತರ ದೈಹಿಕ ಶಿಕ್ಷಣ ಕೋರ್ಸ್ ಪೂರೈಸಿದ್ದು ಸುಪ್ರಭಾ ಅವರ ಹೆಮ್ಮೆ.

`ನೀವು ಹೇಳುತ್ತಿರುವುದು ನಿಜ. ಮದುವೆಯಾದ ನಂತರವೂ ಸ್ನಾತಕೋತ್ತರ ದೈಹಿಕ ಶಿಕ್ಷಣ ಪಡೆಯಲು ನನ್ನ ಆಸಕ್ತಿ ಮತ್ತು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿರುವ ತಂದೆ ವಾಸುದೇವ ಭಟ್, ತಾಯಿ ಸುಮಂಗಲಾ, ಎಕ್ಸಿಸ್ ಬ್ಯಾಂಕ್‌ನ ವಿಜಾಪುರ ಶಾಖೆಯ ವ್ಯವಸ್ಥಾಪಕರಾಗಿರುವ ಪತಿ ವಾದಿರಾಜ್ ಭಟ್, ಅತ್ತೆ ಅವರ  ಸ್ಫೂರ್ತಿಯೇ ಕಾರಣ~ ಎಂದು ನಸು ನಕ್ಕರು ಸುಪ್ರಭಾ.

ನೆಟ್ ಪರೀಕ್ಷೆಯಲ್ಲಿಯೂ ಪಾಸಾಗಿರುವ ಈಕೆ, ಸದ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರಾಜೆಕ್ಟ್ ಫೆಲೊ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT