ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕಾರದ ಮಾತು

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ನಡತೆಗೂ ಮಾತಿಗೂ ನೇರ ಸಂಬಂಧವಿದೆ. ನಡತೆಗೂ ಮೊದಲು ಬರುವುದು ಮಾತು. ಆ ಮಾತೇ ನಾವು ಪ್ರಕಟಗೊಳ್ಳುವ ಬಗೆಗೆ ಪ್ರಮಾಣಪತ್ರ! ನಡತೆ ಎಷ್ಟೇ ಒಳ್ಳೆಯದಿದ್ದರೂ ನಮಗೆ ಸಿಗುವ ಅಂಕ ಧನಾತ್ಮಕವೋ ಋಣಾತ್ಮಕವೋ ಎಂಬುದು ಆಡಿದ ಮಾತಿನ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಒಟ್ಟಿನಲ್ಲಿ ಮಾತು ನಮ್ಮದೇ ಬಿಂಬ. ನಾವೇನು ಎನ್ನುವುದರ ಫಲಿತಾಂಶ.

ಮಾತು ಸೂಕ್ಷ್ಮವಾಗಿರಬೇಕು. ಸಂಸ್ಕಾರದಿಂದ ಕೂಡಿರಬೇಕು. ನಾವೇ ಒಂದೊಂದು ಪ್ರಾಜೆಕ್ಟ್‌ನಲ್ಲೂ ಒಂದಷ್ಟು ಹೊಸಬರೊಂದಿಗೆ ವ್ಯವಹರಿಸಬೇಕಾಗುತ್ತದೆ. ನಿರ್ದೇಶಕರು, ಕಲಾವಿದರು, ತಂತ್ರಜ್ಞರಿಂದ ಹಿಡಿದು ಪ್ರತಿಯೊಬ್ಬರ ಜತೆಗೂ ಸಂಪರ್ಕ ಇರಬೇಕಾಗುತ್ತದೆ. ನಾವು ಪರಿಚಿತರು ಅಥವಾ ಹಳಬರಾದರೂ ವಿನಯದಿಂದಲೇ ಮಾತನಾಡಬೇಕಾಗುತ್ತದೆ.

‘ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ...’ ಅನ್ನುವ ಮಾತು ನನ್ನ ಬದುಕಿಗೆ ಅನ್ವರ್ಥದಂತಿದೆ. ಕಿರುತೆರೆ, ನ್ಯೂಸ್ ರೀಡಿಂಗ್, ಸಿನಿಮಾ, ಜಾಹೀರಾತು ಮತ್ತು ಕಂಠದಾನ ಕಲಾವಿದನಾಗಿ ಈಗ ನಾನು ಗುರುತಿಸಿಕೊಂಡಿರಬಹುದು. ಆದರೆ ಈ ಮಟ್ಟಕ್ಕಾದರೂ ಬೆಳೆಯಬಹುದು ಎಂದು ನಾನೆಂದೂ ಅಂದುಕೊಂಡಿರಲಿಲ್ಲ. ಯಾಕೆಂದರೆ ಪಿಯುಸಿವರೆಗೂ ನಾನು ಮೌನಿ.

ವೇದಿಕೆಯೇರುವ ಮಾತು ಬಿಡಿ, ಮೈಕ್‌ನ ಹತ್ತಿರಕ್ಕೂ ಸುಳಿದವನಲ್ಲ. ನಟನೆಯ ಗಂಧ ಗೊತ್ತಿರಲಿಲ್ಲ. ಸಹಪಾಠಿಗಳು ನಾಟಕದಲ್ಲಿ ಅಭಿನಯಿಸುವಾಗ ಕೆಲವೊಮ್ಮೆ ಆಸೆಯಾದರೂ ನಟನೆಯ ಬಗ್ಗೆ ತರಬೇತಿ ಪಡೆಯದೆ ತೊಡಗಿಸಿಕೊಳ್ಳಬಾರದು ಎಂದುಕೊಂಡು ಅದರಿಂದ ದೂರ ಉಳಿಯುತ್ತಿದ್ದೆ. ಕೆ.ಆರ್. ಮಾರುಕಟ್ಟೆ ಬಳಿಯಿರುವ ಎಸ್.ಎಲ್.ಎನ್. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿ ನರಸಿಂಹರಾಜ ಕಾಲೋನಿಯಲ್ಲಿರುವ ಎಪಿಎಸ್ ಕಾಲೇಜಿನಲ್ಲಿ ಪದವಿಗೆ ಸೇರಿಕೊಂಡೆ. ಆಗ ‘ಅಭಿನಯ ತರಂಗ’ದವರ 15 ದಿನಗಳ ಅಭಿನಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡೆ. ಮಾತ್ರವಲ್ಲ, ಅದೇ ಅವಧಿಯಲ್ಲಿ ನಾಟಕವೊಂದರಲ್ಲಿ ಅಭಿನಯಿಸಿದೆ. ಇದರಿಂದ ಧೈರ್ಯ ಬಂತು. ಪದವಿ ಮುಗಿಯುವುದರೊಳಗೆ ಅಭಿನಯ ತರಂಗದ ಒಂದು ವರ್ಷದ ತರಬೇತಿಯನ್ನೂ ಮುಗಿಸಿದೆ. ಆಮೇಲೆ ಸತತ ಒಂಬತ್ತು ವರ್ಷ ಬೆಂಗಳೂರಿನ ನಾಟಕ ತಂಡಗಳಲ್ಲಿ ಹಲವಾರು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದೆ.

ಅಷ್ಟರಲ್ಲಿ ದೂರದರ್ಶನದ ‘ಮಾಯಾಮೃಗ’ ಧಾರಾವಾಹಿಯಲ್ಲಿ ನಟಿಸಲು ಮೈನಾ ಚಂದ್ರು ಅವರ ಮೂಲಕ ಅವಕಾಶ ಸಿಕ್ಕಿತು. ಕಿರುತೆರೆಗೆ ಮೊದಲ ಮೊದಲ ಎಂಟ್ರಿ ಆದದ್ದು ಹಾಗೆ. ಉದಯ ವಾಹಿನಿಯಲ್ಲಿ ವಾರ್ತಾ ವಾಚಕರ ಹುದ್ದೆಗೆ ಆಯ್ಕೆಯಾದವನು ಮೂರು ವರ್ಷ ಕೆಲಸ ಮಾಡಿದೆ. ಇದರಿಂದಾಗಿ ರಂಗಭೂಮಿಯ ಸಂಪರ್ಕವೇ ಕಡಿದುಹೋಯಿತು. ಆದರೆ ತುಡಿತ ಮಾತ್ರ ಕಡಿಮೆಯಾಗಲಿಲ್ಲ. ವಾರ್ತಾ ವಾಚಕನಾಗಿ ಶಾಶ್ವತವಾಗಿ ಉಳಿದರೆ ನನ್ನಿಷ್ಟದ ನಟನೆಯಿಂದ ದೂರವಾದಂತಾಗುತ್ತದೆ ಎಂದು ಹುದ್ದೆಗೆ ರಾಜೀನಾಮೆ ನೀಡಿ, ಅದನ್ನು ಅರೆಕಾಲಿಕ ವೃತ್ತಿಯಾಗಿ ಮುಂದುವರಿಸಿದೆ. ಆದರೆ ಉದಯ ವಾಹಿನಿಯ ಧಾರಾವಾಹಿಗಳಲ್ಲಿ ನನಗೆ ಪಾತ್ರಗಳು ಸಿಗುತ್ತಲೇ ಇದ್ದವು.

ಇದೇ ಹೊತ್ತಿನಲ್ಲಿ ಕಂಠದಾನ ಮಾಡುವ ಅವಕಾಶಗಳು ಬರತೊಡಗಿದವು. ಅಭಿನಯದಲ್ಲಿ ಸೂಪರ್ ಎನ್ನುವಂತಿದ್ದರೂ ಕೆಲವರಿಗೆ ತಮ್ಮ ಪಾತ್ರಕ್ಕೆ ಸ್ವತಃ ಕಂಠದಾನ ಮಾಡಲು ಆಗದು. ಅಗ ನಮ್ಮಂಥವರನ್ನು ಡಬ್ಬಿಂಗ್‌ಗೆ ಕರೆಯುತ್ತಾರೆ. ಧಾರಾವಾಹಿಗಳಲ್ಲೂ ಹಾಗೆ ಕಂಠದಾನ ಮಾಡಿದ್ದುಂಟು. ಸಿನಿಮಾಗಳಿಗೂ ಕಂಠದಾನ ಮಾಡಿದ್ದೇನೆ. ನನ್ನ ಕಂಠದ ಬಗ್ಗೆ ಮೆಚ್ಚುಗೆಯ ಮಾತನ್ನು ಹೇಳುತ್ತಾರೆ. ಅದು ನನಗೆ ದೇವರ ಕೊಡುಗೆ.

ವಿಶಿಷ್ಟ ಕಂಠವೇ ನನಗೆ ಅವಕಾಶಗಳನ್ನು ಮೊಗೆದುಕೊಟ್ಟಿರುವುದು. ಹೆಚ್ಚು ಹೆಚ್ಚು ಕಡೆ ಸಲ್ಲುತ್ತಾ ಹೋದಂತೆ ನನ್ನ ಮಾತು ಮತ್ತು ನಡತೆಗೂ ಸಾಣೆ ಕೊಡುತ್ತಾ ಬಂದಿದ್ದೇನೆ. ಮಾತೇ ಅಲ್ಲವೇ ನಮ್ಮನ್ನು ಸಮಾಜದಲ್ಲಿ ಸಲ್ಲುವ ಅಥವಾ ಸಲ್ಲದ ವ್ಯಕ್ತಿಯನ್ನಾಗಿಸುವುದು?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT