ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತ ವಿ.ವಿಗೆ ಸರ್ಕಾರದ ಅಸಡ್ಡೆ - ರಾಜ್ಯಪಾಲ ಆಕ್ರೋಶ

ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಆಕ್ರೋಶ
Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಎಲ್ಲ ಭಾಷೆಗಳ ತಾಯಿ ಎನಿಸಿದ ಸಂಸ್ಕೃತದ ಅಧ್ಯಯನಕ್ಕಾಗಿ ರಾಜ್ಯದಲ್ಲಿ ವಿಶ್ವವಿದ್ಯಾಲಯ ತೆರೆಯಲಾಗಿದ್ದರೂ, ಅದಕ್ಕೆ ಯಾವ ಸಹಾಯವೂ ಸಿಗುತ್ತಿಲ್ಲ. ಒಳ್ಳೆಯ ಕೆಲಸಕ್ಕೆ ಸರ್ಕಾರ ಬೆಂಬಲ ನೀಡುವುದಿಲ್ಲ ಎನ್ನುವುದಕ್ಕೆ ಇದು ನಿದರ್ಶನವಾಗಿದೆ' ಎಂದು ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಅಸಮಾಧಾನ ಹೊರಹಾಕಿದರು.

ಭಾರತೀಯ ವಿದ್ಯಾಭವನ ಮತ್ತು ಇಸ್ಕಾನ್ ಸಂಸ್ಥೆಗಳು ಜತೆಯಾಗಿ ಸಂಘಟಿಸಿರುವ ಎಂಟು ದಿನಗಳ ರಾಷ್ಟ್ರೀಯ ವೇದ ಸಂವಾದ ಸಮ್ಮೇಳನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. `ಸರ್ಕಾರದ ಸೂಕ್ತ ಬೆಂಬಲವಿಲ್ಲದ ಕಾರಣ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಇನ್ನೂ ಸ್ಪಷ್ಟ ರೂಪವೇ ಸಿಕ್ಕಿಲ್ಲ. ವಿಶ್ವವಿದ್ಯಾಲಯದಿಂದ ಯಾವ ಸಂಶೋಧನಾ ಕಾರ್ಯಗಳು ನಡೆದಿಲ್ಲ' ಎಂದೂ ಅತೃಪ್ತಿ ವ್ಯಕ್ತಪಡಿಸಿದರು.

`ಭಾರತ ಮತ್ತು ಚೀನಾ ಅತ್ಯಂತ ಪುರಾತನ ನಾಗರಿಕತೆ ಹೊಂದಿದ ದೇಶಗಳಾಗಿವೆ. ಭಾರತದ ವೇದ-ವಿಜ್ಞಾನದಿಂದ ಚೀನಾ ಸಾಕಷ್ಟು ಪ್ರಭಾವಿತವಾಗಿದೆ. ಆರ್ಯ ಮತ್ತು ದ್ರಾವಿಡ ಸಮುದಾಯ ಇಲ್ಲಿಯ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿವೆ. ಆದರೆ, ಈ ವಿವರ ಇತಿಹಾಸದಲ್ಲಿ ಸರಿಯಾಗಿ ದಾಖಲಾಗಿಲ್ಲ' ಎಂದರು.

ಪ್ರಧಾನ ಭಾಷಣ ಮಾಡಿದ ಹೈದರಾಬಾದ್ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಪ್ರೊ. ವಿ.ಕಣ್ಣನ್, `ಜಗತ್ತಿನ ಅತ್ಯಂತ ಪುರಾತನ ಸಾಹಿತ್ಯವೆಂದರೆ ಅದು ವೇದ ಪ್ರಪಂಚ. ಮನುಕುಲಕ್ಕೆ ಸಿಕ್ಕ ಮೊದಲ ಜ್ಞಾನದ ದೀವಿಗೆ ಅದಾಗಿದ್ದು, ಇಂದಿಗೂ ತನ್ನ ಪರಿಶುದ್ಧಿಯನ್ನು ಉಳಿಸಿಕೊಂಡು ಬಂದಿದೆ' ಎಂದರು.

`ವೇದ ವಾಙ್ಮಯದಲ್ಲಿ ಇಲ್ಲದ ವಿಷಯವೇ ಇಲ್ಲ. ವಿಜ್ಞಾನ, ತಂತ್ರಜ್ಞಾನ, ರಾಜನೀತಿ, ಧರ್ಮಶಾಸ್ತ್ರ, ಭೂಗೋಳ ಶಾಸ್ತ್ರ, ಖಗೋಳಶಾಸ್ತ್ರ, ಗಣಿತಶಾಸ್ತ್ರ ಸೇರಿದಂತೆ ಎಲ್ಲ ವಿಷಯಗಳೂ ಅದರಲ್ಲಿ ಹಾಸುಹೊಕ್ಕಾಗಿವೆ' ಎಂದರು.

`ವೇದದಲ್ಲಿ ಹೇಳಿದಂತೆ ನಡೆದರೆ ಅದೊಂದು ಪರಿಪೂರ್ಣ ಜೀವನವಾಗಿರುತ್ತದೆ' ಎಂದು ಇಸ್ಕಾನ್ ಅಧ್ಯಕ್ಷ ಮಧುಪಂಡಿತ ದಾಸ ಹೇಳಿದರು.

ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್. ರಾಮಾನುಜ, ಕೆ.ಎಂ. ಮುನ್ಶಿ ಪ್ರದರ್ಶನ ಕಲೆಗಳ ಸಂಸ್ಥೆ ನಿರ್ದೇಶಕ ಶತಾವಧಾನಿ ಗಣೇಶ, ನಿರ್ದೇಶಕ ಎಚ್.ಎನ್. ಸುರೇಶ್, ಕಾರ್ಯದರ್ಶಿ ಕೆ.ಜಿ. ರಾಘವನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT