ಗೋಣಿಕೊಪ್ಪಲು: ವರ್ಣರಂಜಿತ ಉಡುಗೆ ತೊಟ್ಟ ಹೆಣ್ಣುಮಕ್ಕಳು, ಕೊಡವ ಸಾಂಪ್ರದಾಯಕ ದಿರಸು ಧರಿಸಿದ ಹುಡುಗರು ಉಮ್ಮತ್ತಾಟ್, ಬೊಳಕಾಟ್, ಕೋಲಾಟ ನೃತ್ಯಗಳ ಮೂಲಕ ಈಚೆಗೆ ಸಾಯಿಶಂಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಊರ್ ನಮ್ಮೆಯಲ್ಲಿ ವಿಜೃಂಭಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಊರ್ ನಮ್ಮೆ ಸಮಾರಂಭದಲ್ಲಿ ನೃತ್ಯಮಾಡಿದ ವಿದ್ಯಾರ್ಥಿಗಳು ತಮ್ಮ ಸಹಜ ನೃತ್ಯದ ಮೂಲಕ ಗಮನ ಸೆಳೆದರು.
ಕೊಡಗಿನ ಸಾಂಪ್ರದಾಯಕ ಕಲೆಯಾದ ಉಮ್ಮತ್ತಾಟ್ ನೃತ್ಯ ಅದ್ಭುತವಾಗಿ ಮೂಡಿಬಂತು. ಕೊಡವ ಸಂಸ್ಕೃತಿಯ ವಸ್ತ್ರ ಧರಿಸಿದ ಯುವತಿಯರು `ಕಾವೇರಮ್ಮೆ ದೇವಿ ತಾಯಿ ಕಾಪಾಡೆಂಗಳ~ ಹಾಡಿಗೆ ಹೆಜ್ಜೆ ಇಡುತ್ತ, ಕೈಯಲ್ಲಿ ತಾಳ ಹಾಕುತ್ತ ನರ್ತಿಸಿದರು.
ಎಲ್ಲ ಒಂದೇ ವಯೋಮಾನದ ಬಾಲಕಿಯರು ಒಂದೇ ಬಗೆಯ ಹೆಜ್ಜೆಹಾಕಿ ನೃತ್ಯಕ್ಕೆ ಮೆರಗು ತುಂಬಿದರು. ಬಾಲಕರು ಕೂಡ ಪುರುಷರ ಕಲೆಯಾದ ಬೊಳಕಾಟ್ ನೃತ್ಯ ಮಾಡಿದರು. ಅವರು ತೊಟ್ಟಿದ್ದ ಕೊಡಗಿನ ವೀರಪುರುಷರ ಧಿರಿಸು ನೃತ್ಯಕ್ಕೆ ಕಳೆ ತಂದಿತು. ಇದರ ಜೊತೆಗೆ ಕೋಲಾಟ ಹಾಗೂ ಇತರ ನೃತ್ಯಗಳು ರಂಜನೀಯವಾಗಿ ಮೂಡಿ ಬಂದವು.