ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ರಕ್ಷಣೆಯಲ್ಲಿ ಮಹಿಳೆಯ ಪಾತ್ರ ದೊಡ್ಡದು

Last Updated 19 ಅಕ್ಟೋಬರ್ 2011, 11:00 IST
ಅಕ್ಷರ ಗಾತ್ರ

ಶಿರಸಿ: ಮಹಿಳೆಯರ ಜಾನಪದ ಜ್ಞಾನವನ್ನು ಪುನರ್ ಸಂಘಟಿಸುವ ಕೆಲಸ ಆಗಬೇಕು, ಸಂಸ್ಕೃತಿ ಚಲನೆಯ ಹಾದಿಯಲ್ಲಿ ಮಹಿಳೆಯ ಪ್ರಧಾನ ಪಾತ್ರವಿದೆ. ಸಂಸ್ಕೃತಿ ಸಂರಕ್ಷಕಿ ಮಹಿಳೆಯ ಭಾವನೆಗೆ ಮನ್ನಣೆ ದೊರಕಬೇಕು ಎಂಬ ಅಭಿಪ್ರಾಯ ಇತ್ತೀಚೆಗೆ ತಾಲ್ಲೂಕಿನ ಕಲ್ಲಿಯಲ್ಲಿ ನಡೆದ ಮಹಿಳೆ ಮತ್ತು ಸಂಸ್ಕೃತಿ ಶಿಬಿರದಲ್ಲಿ ವ್ಯಕ್ತವಾಯಿತು.
ಐದು ದಿನಗಳ ಶಿಬಿರದಲ್ಲಿ ರಾಜ್ಯದ ವಿವಿಧ ಭಾಗಗಳ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಉಪನ್ಯಾಸ ನೀಡಿದರು.

ಸಂಪನ್ಮೂಲ ವ್ಯಕ್ತಿ ಸಬೀಹಾ ಭೂಮಿ ಗೌಡ, ಪರಿಸರ, ಸಂಸ್ಕೃತಿ ಮತ್ತು ಮಹಿಳೆ ಕುರಿತು ಮಾತನಾಡಿ `ಸಂದಿಗ್ಧತೆ ಒಡೆದು ಸಂವೇದನೆ ಕಟ್ಟಿಕೊಳ್ಳದಿದ್ದರೆ ಭಾವ ಹೀನವಾಗಿ ನಿಲ್ಲುತ್ತೇವೆ~ ಎಂದರು. ಪ್ರತಿಕೂಲ ವಾತಾವರಣ ಪೂರಕವಾಗಿ ಮಾಡಿಕೊಳ್ಳುವ ಕಲೆ ಮಹಿಳೆಗೆ ಇದೆ. ಆದರೆ ಮಹಿಳೆಯ ಜ್ಞಾನ ಮರುಬಳಕೆ ಮಾಡುವ ಜಾಣತನ, ಜೀವ ಉಳಿಸುವ ಜಾನಪದ ವೈದ್ಯ, ಹಾಡು ಜ್ಞಾನದ ಪರಿಧಿಗೆ ಸೇರದೇ ಇರುವುದು ವಿಷಾದ ಸಂಗತಿ. ಕಳೆದು ಹೋಗಿರುವ, ಹೋಗುತ್ತಿರುವ ಮಹಿಳೆಯ ಜ್ಞಾನ ಪುನರ್ ಸಂಘಟಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.

ಬರಹಗಾರ್ತಿ ಡಾ. ಅನುಪಮಾ ಎಚ್.ಎಸ್. ಅವರು ಜಾಗತೀಕರಣ, ದೇಶಿ ಸಂಸ್ಕೃತಿ ಶಿಬಿರ ಮತ್ತು ಮಹಿಳೆ ಕುರಿತು ಮಾತನಾಡಿ ಜಾಗತೀಕರಣ ನೈತಿಕೀಕರಣವಾಗಲಿಲ್ಲ, ಅದರ ಬದಲು ನೈತಿಕತೆಯನ್ನು ಬುಡಮಟ್ಟದಿಂದ ನಾಶ ಗೊಳಿಸಿತು ಎಂದರು.

ಸರಕು ಸಂಸ್ಕೃತಿ ಜಾಗತೀಕರಣದ ದೊಡ್ಡ ಶಾಪ. ಹೊಟ್ಟೆ ತುಂಬು ವಷ್ಟಿದ್ದರೂ ನೆಮ್ಮದಿ ದೂರಮಾಡುವ, ಬಡತನದ ಛಾಯೆಯಲ್ಲಿ ಬದುಕುವಂತೆ ಮಾಡುವ ಕೊಳ್ಳುಬಾಕ ಸಂಸ್ಕೃತಿ ಅದು. ಇದರ ದೊಡ್ಡ ಬಲಿಪಶು ಮಹಿಳೆ. ಸರಕು ತಯಾರಿಸುವ, ಪ್ರಚಾರ ಮಾಡುವ, ಕೊಳ್ಳುವ ಮಾರುವ ವ್ಯಕ್ತಿ ಮಹಿಳೆಯೇ ಆಗಿದ್ದರೂ ತಾನು ಬಲಿ ಪಶು ಎಂದು ಅವಳಿಗೇ ತಿಳಿದಿಲ್ಲ ಎಂದು ಹೇಳಿದರು.

ಕೆ.ಎಸ್. ವಿಮಲಾ ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮವಿರಲಿ, ಮಹಿಳಾ ಸಮಾನತೆ ಹೋರಾಟವಿರಲಿ, ದೈನಂದಿನ ಬದುಕಿನ ಜಂಜಾಟದ ವಿರುದ್ಧದ ಪ್ರತಿಭಟನೆಯಿರಲಿ ಅಲ್ಲಿ ಮಹಿಳೆ ಇದ್ದಾಳೆ. ತನ್ನ ಸುತ್ತಲಿನ ಪ್ರಪಂಚಕ್ಕೆ ತೆರೆದುಕೊಳ್ಳುತ್ತಲೇ ಅಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸುತ್ತಲೇ ತನ್ನ ಇರುವಿಕೆ ಸ್ಥಾಪಿಸುವತ್ತ ಮಹಿಳೆಯ ಪ್ರಯತ್ನ ನಡೆದೇ ಇದೆ ಎಂದರು.

ಸಂಸ್ಕೃತಿ ಸದಾ ಹರಿಯುವ ನದಿ, ಅದರ ಪ್ರತಿ ಹನಿಯಲ್ಲೂ ಮಹಿಳೆ ಇದ್ದಾಳೆ. ತನ್ನ ಚಲನೆಯ ಹಾದಿಯಲ್ಲಿ ಸಿಗುವ ಎಲ್ಲ ಅನುಭವಗಳ ಸಾರವೇ ಸಂಸ್ಕೃತಿ.  ಆ ಎಲ್ಲ ಚಲನೆಯ ದಾರಿಯಲ್ಲಿ ಮಹಿಳೆಯದೇ ಪ್ರಧಾನ ಪಾತ್ರವಿರುತ್ತದೆ. ಹಾಗಾಗಿಯೇ ಮಹಿಳೆ ಈ ಎಲ್ಲ ಸಾರಗಳು ಮೇಳೈಸಿದ ಅಘೋಷಿತ ಸಾಂಸ್ಕೃತಿಕ ನಾಯಕಿ ಎಂದು ಹೇಳಿದರು. .
ಪ್ರೊ. ಸಿದ್ಧಲಿಂಗ ಸ್ವಾಮಿ ವಸ್ತ್ರದ, ಧರಣಿದೇವಿ ಮಾಲಗತ್ತಿ, ಜಾನಪದ ತಜ್ಞೆ ಶಾಂತಿ ನಾಯಕ, ಡಾ. ಎಂ. ಜಿ. ಹೆಗಡೆ ವಿವಿಧ ಗೋಷ್ಠಿಗಳಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ. ಶ್ರೀಪಾದ ಭಟ್ಟ ನಿರ್ದೇಶನದಲ್ಲಿ ಹಾಡು, ನಾಟಕ, ಆಟೋಟಗಳನ್ನು ಹೇಳಿಕೊಡಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಜಾನಪದ ತಜ್ಞೆ ಸುಕ್ರಿ ಗೌಡ, ವಾರ್ತಾ ಇಲಾಖೆ ನಿರ್ದೇಶಕ ಮುದ್ದು ಮೋಹನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕಾ.ತ.ಚಿಕ್ಕಣ್ಣ, ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT