ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲಜೀವಿಯ ಧ್ವನಿಯ ಪರಿಮಳ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹೊಸ ತಲೆಮಾರಿನ ಲೇಖಕಿ ಗೀತಾ ವಸಂತ `ಹೊಸಿಲಾಚೆ ಹೊಸ ಹೆಜ್ಜೆ~ ಎನ್ನುವ ಕವನ ಸಂಕಲನವನ್ನು ಈಗಾಗಲೆ ಪ್ರಕಟಿಸಿದ್ದಾರೆ. ಅವರ ಎರಡನೇ ಸಂಕಲನವು `ಪರಿಮಳದ ಬೀಜ~ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದೆ. ಇದರೊಂದಿಗೆ ಮಹಿಳಾ ಕಾವ್ಯಕ್ಕೆ ಮೂರನೇ ತಲೆಮಾರು ಪ್ರವೇಶಿಸುತ್ತಿದೆ. ಪರಿಮಳದ ಈ ಬೀಜ ಎಲ್ಲಿಗೆ ನೆಲೆಯೂರಲು ಹೊರಟಿದೆ. ಆ ನೆಲೆಯ ಸ್ವರೂಪ ಹೇಗಿದೆ? ಎಂದು ನೋಡದೆಯೇ ಗೀತಾ ವಸಂತರ ಕವಿತೆಗಳಿಗೆ ನೇರಪ್ರವೇಶ ಮಾಡುವಂತಿಲ್ಲ. ಅಂತಹ ವಾತಾವರಣವನ್ನು ಕನ್ನಡದ ಮಹಿಳಾ ವಿಮರ್ಶೆ ನಿರ್ಮಿಸಿಕೊಂಡಿದೆ.

ಕಳೆದ ಮೂರು ದಶಕಗಳಲ್ಲಿ ಮಹಿಳಾ ಕಾವ್ಯ ಹೆಚ್ಚು ಕ್ರಿಯಾಶೀಲವಾಗಿದೆ. ಮುಖ್ಯವಾಗಿ ತನ್ನದೇ ಆದ ಹಾದಿಯನ್ನು ಹುಡುಕಿಕೊಂಡು ಹೊರಟಿದೆ. ಅಷ್ಟೇನೂ ಸಲೀಸಲ್ಲದ ಈ ಹಾದಿಗೂ, ಹಾದಿಗರಿಗೂ ಶುಶ್ರೂಷೆ ಮಾಡುತ್ತಿರುವಲ್ಲಿ ಮಹಿಳಾ ವಿಮರ್ಶೆಯ ಪಾತ್ರವೂ ಘನವಾಗಿದೆ. ಮಹಿಳೆಯರ ಕಾವ್ಯ ಮತ್ತು ಅವರ ವಿಮರ್ಶೆ ಎರಡರ ಗುರಿಯೂ ಒಂದೇ ಆಗಿರುವುದರಿಂದ, ಇವು ಆಗಾಗ ಕೂಡಿಕೊಳ್ಳುವುದು ಆಕಸ್ಮಿಕವೇನೂ ಅಲ್ಲ. ಅನೇಕ ವೇಳೆ ಮಹಿಳೆಯರ ಕಾವ್ಯ ವಿಮರ್ಶೆಯೇ ಆಗಿರುವುದು ಕೂಡ ಆಶ್ಚರ್ಯವನ್ನು ಉಂಟು ಮಾಡುವುದಿಲ್ಲ. ಸ್ವಾಯತ್ತತೆ ಮತ್ತು ಮನುಷ್ಯನ ಘನತೆಯ ಕಡೆಗೆ ಈ ಎರಡೂ ಪ್ರಕಾರಗಳು ಮುಖ ಮಾಡಿವೆಯಾದರೂ ಇವು ಕಾವ್ಯದ ಮೇಲೆ ಸವಾರಿ ಮಾಡುತ್ತಲಿವೆ. ಮಹಿಳೆಯರ ಕಾವ್ಯವನ್ನು ಮಹಿಳೆಯರೇ ಆಸ್ವಾದಿಸಿ, ಪರಿಶೀಲಿಸುವುದರಿಂದ ಮತ್ತು ವ್ಯಾಖ್ಯಾನ ಮಾಡುವುದರಿಂದ ಅಧಿಕೃತತೆಯೊಂದು ಲಭ್ಯವಾಗುತ್ತದೆಯಾದರೂ, ಈ ನೆಲೆಯಿಂದ ಹೊರಟಂತಹ ತೀರ್ಪುಗಳು ಸಮಸ್ಯೆಗಳಾಗಿವೆ. ಹಾಗೆ ನೋಡಿದರೆ, ಕಾವ್ಯವು ಇನ್ನೊಬ್ಬರ ಎದೆಯಲ್ಲಿ ಬೆಳೆಯುವುದಕ್ಕಾಗಿಯೇ ಹುಟ್ಟುತ್ತದೆ. ಹಾಗೆ ಬೆಳೆಯುವ ಹಂಬಲವಿರುವ ಕಾವ್ಯ ಹೊರಗಾದರಷ್ಟೇ ಸಾಲದು; ಓದುಗರನ್ನು ಆಹ್ವಾನಿಸುವ ತ್ರಾಣವೂ ಆ ಕಾವ್ಯಕ್ಕೆ ಇರಬೇಕಾಗುತ್ತದೆ. ಇಲ್ಲವಾದರೆ, ಆ ಕಾವ್ಯದ ಇರುವು ತೋರಿಕೆಗೆ ಮಾತ್ರ ಇರುವಂತಾಗುತ್ತದೆ. ಕನ್ನಡದ ಸದ್ಯದ ಸಂದರ್ಭದಲ್ಲಿ ಮಹಿಳೆಯರಿಗೆ ಕಾವ್ಯ ಬರೆಯುವುದಕ್ಕಿಂತಲೂ ಕಾವ್ಯದ ಮುಖೇನ ಇನ್ನೆಲ್ಲಿಗೋ ತಲುಪಬೇಕಿರುವುದು ಮುಖ್ಯವಾಗುತ್ತಿದೆ. ಇದರ ಪರಿಣಾಮವು ಅಲ್ಲಮಪ್ರಭು ಹೇಳುವಂತೆ `ಬೆವಸಾಯವ ಮಾಡಿ ಬೀಯಕ್ಕೆ ಬತ್ತವಿಲ್ಲ~ ಎನ್ನುವಂತಾಗಿದೆ.

ಮಹಿಳಾ ಕಾವ್ಯ ಆರಂಭದಿಂದಲೂ ಪುರುಷ ನಿರ್ಮಿತವಾದ ಸಾಹಿತ್ಯ-ಸಮಾಜ, ಚರಿತ್ರೆಯನ್ನು ಮುರಿದು ಕಟ್ಟುವಲ್ಲಿ ನಿರತವಾಗಿದೆ. ಇಲ್ಲಿನ ಆಸಕ್ತಿಗೆ ಮಹಿಳೆ ಕಾಣಿಸುತ್ತಾಳಾದರೂ, ಮಹಿಳೆ ಅಲ್ಲದವರು ಕಾಣಿಸುವುದಿಲ್ಲ. ಕಾವ್ಯ ಬರೆಯುವ ಸಂದರ್ಭವೇ ಲಿಂಗವನ್ನು ಕಳೆದುಕೊಳ್ಳುವ ಪ್ರಕ್ರಿಯೆಯೂ ಆಗುವುದೆಂದೂ, ಚರಿತ್ರೆ ಎಂಬುದು ಬರೆಯುವ ಕವಿಗೆ ಇರುವುದಾದರೂ, ಅದರಾಚೆಗೂ ಕಾವ್ಯ ಕೈಚಾಚುವುದೆಂದೂ ಮಹಿಳಾ ವಿಮರ್ಶೆಗೆ ಮನವರಿಕೆ ಆದಂತಿಲ್ಲ. ಈ ರಿವಾಜನ್ನು ಪರಿಶೀಲಿಸಿರುವ ಚಿಂತಕ ಕೆ.ವಿ.ನಾರಾಯಣ ಹೀಗೆ ಹೇಳುತ್ತಾರೆ;

`ಚರಿತ್ರೆಯನ್ನು ಸಾಹಿತ್ಯ ಕೃತಿಗಳ ಮೂಲಕ ಗ್ರಹಿಸಬೇಕೆಂಬ ಮಾತೂ, ಚರಿತ್ರೆಯ ಮೂಲಕ ಸಾಹಿತ್ಯ ಕೃತಿಗಳನ್ನು ಗ್ರಹಿಸಬೇಕೆಂಬ ಮಾತೂ ಒಟ್ಟೊಟ್ಟಿಗೆ ಹೋಗಲಾರವು~ (`ತೊಂಡು ಮೇವು~). ಈ ಎರಡನ್ನೂ ಒಟ್ಟಿಗೆ ಕರೆದೊಯ್ಯುವ ಸವಾಲನ್ನು ಸ್ವೀಕರಿಸಿರುವ ಮಹಿಳಾ ವಿಮರ್ಶೆ ತನಗೊಂದು ಸಂಘಟನೆಯ ಅಗತ್ಯವಿರುವುದೆಂದು ಹೇಳಿಕೊಳ್ಳುತ್ತದೆ. ಆ ಸಂಘಟನೆಯ ಬಲವನ್ನು ಕವಯತ್ರಿಯರ ದನಿಗಳೊಂದಿಗೆ ಕಟ್ಟಿಕೊಳ್ಳುವುದಕ್ಕೆ ಮುಂದಾಗುತ್ತಿದೆ. ಹಾಗಾಗಿಯೇ ಮಹಿಳಾ ಕಾವ್ಯದ ಅಸ್ತಿವಾರವು ಮಹಿಳಾ ವಿಮರ್ಶೆಯೇ ಆಗಿಬಿಟ್ಟಿದೆ. ಇಂತಹ ಕೊಳು-ಕೊಡುಗೆಯನ್ನು ಬಲ್ಲಂತಹ ಕೆಲವು ಕವಯತ್ರಿಯರು, `ಮಹಿಳಾವಿಮರ್ಶೆಗಷ್ಟೇ ಆಹಾರವಾಗುವ ತೋರಿಕೆಯ ಕಾವ್ಯವನ್ನು ಬರೆಯಲಾರೆವು; ಕಾವ್ಯವನ್ನೇ ಬರೆಯುವೆವು~ ಎಂಬ ಧ್ವನಿಯನ್ನು ಸಂಕಲನದೊಂದಿಗೆ ಕಳುಹಿಸುತ್ತಿದ್ದಾರೆ. ಅದರ ಪ್ರಾಮಾಣಿಕ ಪ್ರಯತ್ನದ ಭಾವಕೋಶವೇ `ಪರಿಮಳದ ಬೀಜ~ ಆಗಿದೆ.

ತಮ್ಮ ಹಿರಿಯ ಕವಯತ್ರಿಯರು ಕವಿತೆಯನ್ನು ಸೂಚಿ (ಇಟಛಿ)ಯಾಗಿ ಇರಲು ನೋಡಿಕೊಂಡಂತೆ ಗೀತಾ ವಸಂತ ಬರೆಯಲಾರರು. ತನಗಾದದ್ದನ್ನು ಮೈ ಕೆಡದಂತೆ ದಾಟಿಸುವುದರ ಕಡೆಗೆ ಅವರ ಕವಿತೆಗಳು ಚಲಿಸುವವು.

ಹಸಿಯಾಗೇ ಇದೆ ಇನ್ನೂ
ಚಿಗುರು ಬೆರಳಲಿ ಮನೆಕಟ್ಟಿದ್ದು
ಕನಸಿನ ಚಪ್ಪರ ಹರವಿ
ಬೆರಗಿನ ಚಿತ್ತಾರವಿಟ್ಟಿದ್ದು
ಅಪ್ಪನೆಂದರು ಮರುಳು ಮಗೂ...
ಮರಳ ಮನೆ ನಿಜವಲ್ಲ
ಅಮ್ಮನೆಂದಳು ಒಂದಿರುಳು ಕಣ್ತುಂಬಿ
ನಿಜವಲ್ಲ ಈ ಮನೆಯೂ
ಮನೆ-ಮನೆಯ ಕದತಟ್ಟುವ
ಹಣೆಬರಹ ತಪ್ಪದು ನಮಗೆ

ನಿಜವಲ್ಲದ ಮನೆಯಲ್ಲಿನ ನಿಜವೆನಿಸುವ ಭಾವಗಳನ್ನು ಇಲ್ಲಿನ ಅನೇಕ ರಚನೆಗಳು ಮೈಗೂಡಿಸಿಕೊಂಡಿವೆ. ಪುಟ್ಟ ಹುಡುಗಿ ಬೆಳೆಯುತ್ತಾ ಹೋದಂತೆ ತಾನು ಇತರರಿಗಿಂತ ಭಿನ್ನವೆಂದು ಕಂಡುಕೊಳ್ಳುವುದು; ಹಾಗೆ ಕಂಡುಕೊಂಡ ಹುಡುಗಿಗೆ ಭಿನ್ನವೇ ಒಂದು ಸೆರೆಯಾಗಿ ಕಾಡುವುದು:

ಮುಖ ನೋಡಿ ಮಣಿಯಿತ್ತರು
ಮುಖಬೆಲೆಯ ಕಂಡು ಕೊಂಡರು
ಅರಳಿದ ವದನಾರವಿಂದಗಳ ಸೊಬಗ
ಅಸಂಖ್ಯೆ ಪ್ರತಿಮೆಗಳಲಿ
ಸೆರೆಹಿಡಿಯಲು ಸೋತರು

ಸೋತವರನ್ನು ಗುರುತು ಹಚ್ಚುವ ಹುಡುಗಿಗೆ ತನ್ನ ಸೋಲೂ ಗೊತ್ತಾಗುತ್ತದೆ;
 
ಜೀವವಿಲ್ಲದ ಅಕ್ಷರಗಳ ಜೊತೆ
ನನ್ನ ಗುದ್ದಾಟ
ಒಡಲನೂಲ ನೇಯಲಾಗದ ಪರದಾಟ
ನುಡಿ ಗುಡಿಯ ಬಾಗಿಲಿಗೆ ಬೀಗ
ಕಾಣಿಸದು ಜ್ಯೋತಿರ್ಲಿಂಗ

ಕಾರಣ, ಇರುವ ಮನೆ, ಜತೆಗಿರುವ ತಾಯಿ, ತಂದೆ ಹೇಳಿದ್ದನ್ನು ಕೇಳಿಸಿಕೊಂಡು ನೋವಿಗೆ ಒಳಗಾಗುತ್ತಿದೆ ಜೀವ. ಆ ನೋವು ತನಗೆ ಮಾತ್ರವೆಂದು ಬಗೆದಿದ್ದರೂ, ಎದುರಿಗಿನ ವಾಸ್ತವವೂ ಕಾಣಿಸುವುದು:

ಅರ್ಥವಾಗದು ಬೀದಿಗೆ ಬಿದ್ದವರಿಗೆ
ಬೀದಿಗಿಳಿಯುವದು ಎಂಬ ಮಾತಿನ ಕ್ಲೀಷೆ
ಕಲ್ಲು ಡಾಂಬರುಗಳ ಜೊತೆ
ಬೇಯುವ ಜೀವಗಳ
ಬೆವರು ಕಣ್ಣೀರುಗಳು
ಇಂಗಿಹೋಗಿವೆ ರಸ್ತೆಯೊಳಗೆ

ಮನೆಗೆ ಸೇರಿಸುವ ರಸ್ತೆ ಮನೆಯ ಆಚೆಗೂ ಬಿಡುವ ರಸ್ತೆ ಹಿಂಬಾಲಿಸುತ್ತಿದೆ ಬಿಡದೆ. ಒಂದು ಇನ್ನೊಂದನ್ನು ಸೇರಲಾಗದ ಭಾವ, ಹಾಗೆ ಸುಮ್ಮನೆಯೂ ಇರಲಾರದೆ ಒದ್ದಾಡುತ್ತಿದೆ:

ಆ ಮರದ ನೆರಳು
ಇಲ್ಲಿ ಬೀಳದಂತೆ
ಈ ಗಿಡದ ಬಿಸಿಲು
ಅಲ್ಲಿ ಬಾಗದಂತೆ
ಹೂವು ಚೆಲ್ಲದಂತೆ
ಹಕ್ಕಿ ಹಾಡದಂತೆ
ಗೋಡೆಕಟ್ಟಿ
ಕಿವುಡಾಗಿ ಕುರುಡಾಗಿ 
ದ್ವೀಪವಾದೆವು
ಎಂದುಕೊಳ್ಳುತ್ತದೆ.

ಇರುವ ಈ ದ್ವೀಪವನ್ನು ತೊರೆಯಲು, ಲೋಕದ ಗಡಿ-ಗೆರೆಗಳನ್ನು ಅಳಿಸಿಹಾಕಲು ಎಲ್ಲರ ಬಣ್ಣಗಳನ್ನು ಏಕವಾಗಿ ಎರಕಹೊಯ್ಯಲು ನಿಸರ್ಗದ ನೆರವೂ ಉಂಟು:

ನಾ ಮಳೆಯೊಳಗೋ
ನನ್ನೊಳು ಮಳೆಯೋ
ಬೇರ ಹುಡುಕಲು
ಬೇರೆಬೇರೆಯೆನುವ ಮೇರೆ
ಮೀರಿ ಹರಿದಿದೆ ಹೊಳೆ
ಬೆರತುಹೋದ ಭಿನ್ನಭಾವದ ಬೆಡಗಿಗೆ
ಅವತರಿಸಿದೆ ಬೆರಗಿನೆಳೆ

ಇಂತಹ ಎಳೆಯನ್ನು ಹಿಡಿದು ಬೆರಗೇ ತಾನಾದ ಹುಡುಗಿಯ ಮುಂಚಾಚುವಿಕೆಗೆ ಮೋಹವು ಒತ್ತಾಸೆಯಾಗಿದೆ;

ಮೋಹದ ಮಣ್ಣೊಳಗೆ
ರಾಗದ ಬೀಜಗಳ
ಮುಚ್ಚಿದಷ್ಟೂ ಮೊಳಕೆ
ಮೇಲೆದ್ದು ಬಂತು

ಎನ್ನುವ ಹುಡುಗಿಗೆ ಈಗ ಹೆಜ್ಜೆ ಹೆಜ್ಜೆಗೂ ಅಚ್ಚರಿ:

ಮುಗಿಲು ಮುಗಿಯದ
ಅಕ್ಷಯ ವಸ್ತ್ರ
ಗ್ರಹ-ತಾರೆ ಚಿತ್ರ
ಆಗಾಗ ಮಿಂಚು ಜರಿಯಂಚು
ಬೆಳಗ ಭಿತ್ತಿಯೊಳಗೆ
ರಂಗೋಲಿಯಂತೆ ಜೀವಜಗತ್ತು

ಮಿಸುಕಾಡುವ ಈ ಜೀವಕ್ಕೆ ಇನ್ನೂ ಏನೋ ಬೇಕು ಎನಿಸುತ್ತದೆ:

ಕನಸು ಮರಿಗಳ ಸಾಕಿ
ಹಾರಲು ರೆಕ್ಕೆಯ ಕೊಟ್ಟರೆ
ಆಕಾಶದುದ್ದಗಲವೂ
ಬೆಳೆಯುತ್ತ ಹೋಯಿತು

ಹಾಗೆ ಅಂದುಕೊಳ್ಳುವ ಹೊತ್ತಿಗೆ, ಲೋಕದ ಚೇಷ್ಟೆ ಹೀಗೂ ಹೇಳಿಸುತ್ತದೆ:

ಕಾಯದ ಕಳವಳ ಕಳೆಯಲು
ಕಾಯುತ್ತ ಬೇಯುತ್ತ
ಎಲ್ಲಿ ಹೋದೆ ಅಕ್ಕಾ ?
ಮೂತ್ರ ಒಸರುವ ನಾಳದಲಿ
ಬಿದ್ದು ಒದ್ದಾಡುವ ಜಗವ
ಇಲ್ಲಿಯೇ ಬಿಟ್ಟು!

ಇಂತಹ ಬಿಟ್ಟುಹೋಗಿರುವ ಅವಕಾಶವನ್ನು ಕವಿತೆಯ ಸಹಚರ್ಯದಲ್ಲಿ ತುಂಬಿಕೊಳ್ಳಲೆಂಬಂತೆ ಗೀತಾ ವಸಂತ ಬರೆಯುತ್ತಾರೆ. ಈ ದೃಷ್ಟಿಯಿಂದ ಅವರ ಸಂಕಲನಕ್ಕೆ `ಪರಿಮಳದ ಬೀಜ~ ಎಂದು ಕರೆದಿರುವುದು ಸಾರ್ಥಕವಾಗಿದೆ. ಸಂಗದಿಂದ ಹುಟ್ಟುವ ಬೀಜಕ್ಕೆ ಒಂದು ಆಕಾರ ಇರಬಹುದಾದರೆ, ಆ ಆಕಾರದಿಂದ ಹೊಮ್ಮುವ ಪರಿಮಳಕ್ಕೆ ಯಾವುದೇ ಹಂಗು ಇಲ್ಲವಾಗಿದೆ. ಹಸ್ತಕ್ಷೇಪಗಳನ್ನು ಇಲ್ಲವಾಗಿಸುವತ್ತ ಹಾತೊರೆಯುವ ಈ ಸಂಕಲನದ ಕವಿತೆ ಖಾಸಗಿತನದೊಂದಿಗೆ ಆರಂಭವಾದರೂ, ಕ್ರಮೇಣ ಸಕಲ ಜೀವಿಯಧ್ವನಿ ಆಗುವತ್ತ ಮುನ್ನಡೆದಿದೆ. ಮುಖ್ಯವಾಗಿ ಇಲ್ಲಿನ ಕವಿತೆಗಳಿಗೆ ಲೇಬಲ್‌ಗಳ ಮೇಲೆ, ಆ ಲೇಬಲ್‌ಗಳನ್ನು ಅಂಟಿಸುವವರ ಬಗೆಗೆ ಅಷ್ಟು ಆಸಕ್ತಿ ಇದ್ದಂತಿಲ್ಲ. ಆದ್ದರಿಂದಲೇ ಅವು ಕುರುಹು ತೊರೆಯುವ ಮಾರ್ಗದಲ್ಲಿ ದಿಟ್ಟತೆಯೊಂದಿಗೆ ನಡೆದಿವೆ. ಈ ನಡಿಗೆಯೇ ಗೀತಾವಸಂತರ ಮುಂದಿನ ರಚನೆಗಳ ಬಗೆಗೆ ಕುತೂಹಲ ಮೂಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT