ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲ ವ್ಯಾಪ್ತಿಗೆ ಭೂ ಪರಿವರ್ತನೆ: ಮೋಹನ್‌ರಾಜ್‌

Last Updated 21 ಡಿಸೆಂಬರ್ 2013, 9:31 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಕೃಷಿ ಭೂಮಿ­ಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸುವ (ಎನ್‌ಎ) ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಕಾಲ ವ್ಯಾಪ್ತಿಗೆ ತರಲಾಗಿದೆ ಎಂದು ಜಿಲ್ಲಾಧಿ­ಕಾರಿ ಕೆ.ಪಿ.ಮೋಹನ್‌ರಾಜ್‌ ಹೇಳಿದರು.

ನಗರದಲ್ಲಿ ಶುಕ್ರವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಜಿ ಸಲ್ಲಿಸಿದ 120 ದಿನಗಳ ಒಳಗಾಗಿ ಎನ್‌ಎ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾ­ಗುತ್ತದೆ ಎಂದು ಹೇಳಿದರು.

ಎನ್‌ಎ ಮಾಡಿಸುವ ಸಂಬಂಧ ಅರ್ಜಿ­ದಾರರು ಇನ್ನು ಮುಂದೆ ತಹ­ಶೀಲ್ದಾರರ ಕಚೇರಿಯನ್ನು ಎಡತಾಕ­ಬೇಕಿಲ್ಲ. ಈ ಸಂಬಂಧದ ಅರ್ಜಿಗಳನ್ನು ನೇರವಾಗಿ ಜಿಲ್ಲಾಧಿಕಾರಿಗಳಿಗೇ ಸಲ್ಲಿಸ­ಬೇಕು. ಎನ್ಎ ಮಾಡಲು ಅಗತ್ಯವಿ­ರುವ ಎಲ್ಲ ಪ್ರಕ್ರಿಯೆಗಳನ್ನು ಇಲಾ­ಖೆಯೇ ಪೂರೈಸಲಿದೆ ಎಂದೂ ಸ್ಪಷ್ಟಪ­ಡಿಸಿದರು.

ಸಕಾಲ ಯೋಜನೆಯಡಿ ಅರ್ಜಿಗಳ ವಿಲೇವಾರಿಯಲ್ಲಿ ಜಿಲ್ಲೆ ರಾಜ್ಯದಲ್ಲಿ 5ನೇ ಸ್ಥಾನದಲ್ಲಿದೆ. ಅರ್ಜಿಗಳ ಸ್ವೀಕರಿ­ಸು­ವುದಕ್ಕೆ ಸಂಬಂಧಿಸಿದಂತೆ 22ನೇ ಸ್ಥಾನ­ದಲ್ಲಿದೆ. ಜನರಲ್ಲಿ ಸಕಾಲ ಯೋಜನೆ ಕುರಿತಂತೆ ಜಾಗೃತಿ ಇಲ್ಲದಿರು­ವುದು ಇದಕ್ಕೆ ಕಾರಣ ಎಂದೂ ಅಭಿಪ್ರಾಯಪಟ್ಟರು.

2012ರ ಏಪ್ರಿಲ್‌ನಲ್ಲಿ ಸಕಾಲ ಯೋಜನೆ ಜಾರಿಗೆ ಬಂದಾಗಿನಿಂದ ಜಿಲ್ಲೆಯಲ್ಲಿ 8,65,506 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಈ ವರೆಗೆ 8,50,675 ಅರ್ಜಿಗಳು ವಿಲೇವಾ­ರಿಯಾಗಿವೆ. ಅರ್ಜಿಗಳ ವಿಲೇವಾರಿ­ಯಲ್ಲಿ ಶೇ 98.29ರಷ್ಟು ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.

ಮೆಕ್ಕೆಜೋಳ ಖರೀದಿ: ಮೆಕ್ಕೆಜೋಳ ಖರೀದಿ ಕೇಂದ್ರಗಳಲ್ಲಿ ಅವ್ಯವಸ್ಥೆಯನ್ನು ಸರಿ­ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಕೊಪ್ಪಳ, ಕುಷ್ಟಗಿ ಹಾಗೂ ಕುಕನೂ­ರಿನಲ್ಲಿ ಇರುವ ಖರೀದಿ ಕೇಂದ್ರಗಳಲ್ಲಿ ಗುರು­ವಾರದಿಂದ ಹೆಚ್ಚುವರಿ ತೂಕದ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ರೈತರು ಖರೀದಿ ಕೇಂದ್ರಕ್ಕೆ ಮೆಕ್ಕೆಜೋಳವನ್ನು ತಂದ ದಿನವೇ ತೂಕ ಮಾಡಿ, ಖರೀದಿ ಪ್ರಕ್ರಿಯೆ ಪೂರ್ಣ­ಗೊಳಿಸಲು ಕ್ರಮ ಕೈಗೊಳ್ಳಲಾ­ಗುವುದು. ತಪ್ಪಿದಲ್ಲಿ ಮಾರನೇ ದಿನ ಸದರಿ ಪ್ರಕ್ರಿಯೆ ಪೂರ್ಣಗೊಳಿಸಲಾ­ಗುವುದು. ಅಲ್ಲದೇ, ಖರೀದಿಯಾದ ಮೆಕ್ಕೆಜೋಳಕ್ಕೆ ಸಂಬಂಧಿಸಿದಂತೆ 3–4 ದಿನಗಳ ಒಳಗಾಗಿ ಹಣ ಸಂದಾಯ­ವಾಗುಂತೆ ಚೆಕ್ ವಿತರಣೆ ಮಾಡಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪರವಾನಗಿ: ಕೈಗಳಿಂದ ಕಲ್ಲುಗಳನ್ನು ಒಡೆದು ಮಾರಾಟ ಮಾಡುವವರಿಗೆ ಇನ್ನು ಮುಂದೆ ಪರವಾನಗಿಯನ್ನು ನೀಡಿ, ಕಾನೂನು ರೀತಿಯಲ್ಲಿಯೇ ಸದರಿ ವೃತ್ತಿಯನ್ನು ಮುಂದುವರಿಸಲು ಅನುಕೂಲಕ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.

ಈ ವೃತ್ತಿಯಲ್ಲಿ ಇರುವವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಯಂತ್ರಗಳನ್ನು ಬಳಸಿ ಕಲ್ಲುಗಳನ್ನು ಒಡೆಯುತ್ತಿರಬಾರದು. ಈ ಸಂಬಂಧ ಬರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ ಪರವಾನಗಿ ನೀಡಲಾಗುವುದು. ಒಟ್ಟಾರೆ 3 ತಿಂಗಳ ಒಳಗಾಗಿ ಜಿಲ್ಲೆಯಲ್ಲಿ ಇಂತಹ ಕಸಬು ಮಾಡುವವರಿಗೆ ಪರವಾನಗಿ ನೀಡಿ, ಸಕ್ರಮಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಆದರೆ, ಜಿಲ್ಲೆಯಲ್ಲಿರುವ ಸ್ಮಾರಕ­ಗಳಿಗೆ ಧಕ್ಕೆಯಾಗದಂತೆ ಈ ಕೆಲಸ ಕೈಗೊಳ್ಳುವಂತೆ ಸೂಚಿಸಿ, ನಿಗಾ ವಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವೈದ್ಯರ ನೇಮಕ: ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣವನ್ನು ತಗ್ಗಿಸಲು ಹಾಗೂ ಸುರಕ್ಷಿತ ಹೆರಿಗೆ ಖಾತರಿಪ­ಡಿಸಲು ಜಿಲ್ಲೆಯಲ್ಲಿ ಮೂವರು ಪ್ರಸೂತಿ ತಜ್ಞರು, 6 ಜನ ಮಕ್ಕಳ ತಜ್ಞರು ಹಾಗೂ 5 ಜನ ಅರಿವಳಿಕೆ ತಜ್ಞರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಯೂನಿಸೆಫ್‌ನ ಹಣಕಾಸು ನೆರವಿ­ನೊಂದಿಗೆ ಈ ನೇಮಕ ಮಾಡಿಕೊಳ್ಳಲಾ­ಗುತ್ತಿದ್ದು, ಒಂದು ವಾರದ ಒಳಗಾಗಿ ನೇರ ಸಂದರ್ಶನದ ಮೂಲಕ ನೇಮ­ಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿ­ಸಲಾಗುವುದು. ಕನಿಷ್ಠ ರೂ ಲಕ್ಷ ವೇತನ ನೀಡಲಾಗುವುದು. ಅನುಭವದ ಆಧಾ­ರದ ಮೇಲೆ ರೂ1.25 ಲಕ್ಷ ವರೆಗೆ ವೇತನ ನೀಡಲು ಅವಕಾಶ ಇದೆ ಎಂದೂ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT