ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಉದ್ಯಮದ ಸಿಹಿ-ಕಹಿ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮಂಡಿಯುದ್ದ ಕಬ್ಬು; ಎದೆಯುದ್ದ ಸಾಲ' ಇದು `ಸಕ್ಕರೆ ನಾಡು' ಎಂದೇ ಕರೆಯಿಸಿಕೊಂಡಿರುವ ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ಕೃಷಿಕರನ್ನು ಉದ್ದೇಶಿಸಿ ಹೇಳುವ ಮಾತು. ಕಬ್ಬಿನ ಬೆಲೆ ನಿಗದಿ ಸಮಸ್ಯೆ ನೋಡಿದರೆ ಈ ಮಾತು ರಾಜ್ಯದ ಎಲ್ಲ ಕಬ್ಬು ಬೆಳೆಗಾರರಿಗೂ ಅನ್ವಯವಾಗುವ ಎಲ್ಲ ಲಕ್ಷಣ ಗೋಚರಿಸತೊಡಗಿವೆ.

`ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂಪಾಯಿ ಬೆಲೆ ನಿಗದಿ ಮಾಡಬೇಕು' ಎಂದು ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಸಂಘ ಹೋರಾಟ ಆರಂಭಿಸಿ ನಾಲ್ಕು ತಿಂಗಳು ಕಳೆಯಲಾರಂಭಿಸಿದೆ. ಆದರೆ, ಇಂದಿಗೂ ಈ ಪ್ರಮಾಣದ ಬೆಲೆ ನಿಗದಿ ಆಗಿಲ್ಲ.ಪ್ರತಿ ವರ್ಷವೂ ಕಬ್ಬಿನ ಬೆಲೆ ನಿಗದಿಗಾಗಿ ಹೋರಾಟ ನಡೆಯುತ್ತದೆ. ಹತ್ತಾರು ಸುತ್ತಿನ ಮಾತುಕತೆ ನಂತರ ಬೆಲೆ ನಿಗದಿಯಾಗುತ್ತದೆ. ಆ ಬೆಲೆಯನ್ನೂ ರಾಜ್ಯದಲ್ಲಿನ ಎಲ್ಲ ಕಾರ್ಖಾನೆಗಳು ಜಾರಿಗೊಳಿಸುವುದಿಲ್ಲ. ಒಂದು ಕಾರ್ಖಾನೆ ಒಂದು ಬೆಲೆ ನೀಡಿದರೆ, ಪಕ್ಕದ ಕಾರ್ಖಾನೆ ಬೆರೆಯದೇ ದರ ನಿಗದಿಪಡಿಸಿಕೊಂಡಿರುತ್ತದೆ.

ರಾಜ್ಯದಲ್ಲಿ ಪ್ರತಿವರ್ಷ ಕಬ್ಬು ಅರೆಯುವಿಕೆ ಮೊದಲು (ಆಗಸ್ಟ್) ಮಂಡ್ಯದಲ್ಲಿ ಆರಂಭಗೊಳ್ಳುತ್ತದೆ. ಸರ್ಕಾರಿ ಸ್ವಾಮ್ಯದ ಮೈಸೂರು ಸಕ್ಕರೆ ಕಂಪೆನಿ(ಮೈಷುಗರ್)ಯಲ್ಲಿ ಕಬ್ಬು ಅರೆಯುವ ಕೆಲಸಕ್ಕೆ ಚಾಲನೆ ಸಿಗುತ್ತದೆ. ಮೈಷುಗರ್ ಹಲವು ವರ್ಷಗಳಿಂದ ನಷ್ಟದ ಹಾದಿಯಲ್ಲಿರುವ ಕಾರ್ಖಾನೆ. ಇಲ್ಲಿನ ಕಬ್ಬಿನ ಸಕ್ಕರೆ ಇಳುವರಿ ಪ್ರಮಾಣವೂ ಶೇ 9ರ ಆಸುಪಾಸಿನಲ್ಲಿದೆ. ಇದನ್ನೇ ಮಾನದಂಡವಾಗಿಸಿಕೊಂಡು ರಾಜ್ಯದ ಇತರೆ ಸಕ್ಕರೆ ಕಾರ್ಖಾನೆಗಳು ಬೆಲೆ ನಿಗದಿ ಮಾಡುತ್ತಿರುವುದು ರೈತರಿಗೆ ದೊಡ್ಡ ಹೊಡೆತವಾಗಿದೆ.

ಮೈಷುಗರ್‌ನಲ್ಲಿ ವಿದ್ಯುತ್ ಘಟಕವಿಲ್ಲ. ಜತೆಗೆ ನಷ್ಟದ ಭಾರ ಹೊತ್ತಿರುವ ಕಾರ್ಖಾನೆ ಇದಾಗಿದೆ. ಆದ್ದರಿಂದ ಆ ಕಾರ್ಖಾನೆಯನ್ನು ಬೆಲೆ ನಿಗದಿಗೆ ಮಾನದಂಡವಾಗಿಸಿಕೊಳ್ಳಬಾರದು ಎಂಬುದು ಈ ಭಾಗದ ರೈತ ಮುಖಂಡರ ವಾದ. ಉತ್ತರ ಕರ್ನಾಟಕದ ಕಬ್ಬಿನ ಇಳುವರಿ ಶೇ 11ರಿಂದ 12ರವರೆಗೂ ಇದೆ. ಹೀಗಾಗಿ, ರಾಜ್ಯದಲ್ಲಿ ಕಬ್ಬಿಗೆ ಏಕರೂಪದ ಬೆಲೆ ನಿಗದಿ ಮಾಡುವುದು ಸರಿಯಲ್ಲ ಎನ್ನುವುದು ಮತ್ತೊಂದು ವಾದ.

ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಆರಂಭವಾಗಿ ಎರಡು ತಿಂಗಳಾಗುತ್ತಾ ಬಂದಿದೆ. ಇನ್ನೂ ಬೆಲೆ ನಿಗದಿಯಾಗಿಲ್ಲ. ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂಪಾಯಿ ಮುಂಗಡ ಬೆಲೆ ನಿಗದಿ ಮಾಡಬೇಕು ಎಂದು ಹೋರಾಟ ಆರಂಭಿಸಿದ ಮೇಲೆ ರಾಜ್ಯ ಸರ್ಕಾರವು ಕೃಷಿ ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಸಮಿತಿಯು ಪ್ರತಿ ಟನ್ ಕಬ್ಬಿಗೆ 2,200 ರೂಪಾಯಿ ಎಂದು ಮುಂಗಡ ಬೆಲೆ ಘೋಷಿಸಿತ್ತು. ಸಮಿತಿ ಅಂತಿಮ ವರದಿ ನೀಡಿದ ನಂತರ ಬೆಲೆ ನಿಗದಿ ಮಾಡಲಾಗುವುದು ಎಂದು ಘೋಷಿಸಲಾಗಿತ್ತು.

ಇದಕ್ಕೊಪ್ಪದ ಮಂಡ್ಯ, ಮೈಸೂರು ಭಾಗದ ರೈತರು ಹೋರಾಟಗಾರರು ಪ್ರತಿ ಟನ್‌ಗೆ 3 ಸಾವಿರ ರೂಪಾಯಿ ಮುಂಗಡವಾಗಿ ನೀಡಬೇಕು ಎಂದು ಹೋರಾಟ ಆರಂಭಿಸಿದರು. ಹಲವಾರು ಸುತ್ತಿನ ಮಾತುಕತೆ ನಂತರ 2,400 ರೂಪಾಯಿ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿದೆ. ಇಳುವರಿ ಹೆಚ್ಚಿರುವುದರಿಂದ ಪ್ರತಿ ಟನ್‌ಗೆ 3 ಸಾವಿರ ರೂಪಾಯಿ ನೀಡಬೇಕು ಎಂಬ ಹೋರಾಟ ಈಗಲೂ ಉತ್ತರ ಕರ್ನಾಟಕದಲ್ಲಿ ಮುಂದುವರೆದಿದೆ. ಅಲ್ಲಿನ ಕೆಲವು ಕಾರ್ಖಾನೆಗಳು 2550 ರೂಪಾಯಿ ನೀಡಲು ಒಪ್ಪಿಗೆ ಸೂಚಿಸಿವೆ. ಆದರೆ, ಇದಕ್ಕೆ ರೈತರು ಸಮ್ಮತಿ ಸೂಚಿಸಿಲ್ಲ.

`ರಾಜ್ಯ ಸರ್ಕಾರ ರಚಿಸಿರುವ ಸಮಿತಿಯಿಂದ ರೈತರಿಗೆ ಅನುಕೂಲವಾಗುವುದು ಎಂದು ನನಗೆ ಅನ್ನಿಸುವುದಿಲ್ಲ. ಕುಟುಂಬದ ಹಿಡಿತದಲ್ಲಿರುವ ಎರಡು ಕಾರ್ಖಾನೆಗಳನ್ನು ಹೊಂದಿರುವ ಕತ್ತಿ ಅವರು, ಕಾರ್ಖಾನೆಗಳ ಪರವಾಗಿದ್ದಾರೆ. ಇದು ಸಭೆಗಳಲ್ಲಿನ ಅವರ ನಡವಳಿಕೆ ನೋಡಿದರೆ ಗೊತ್ತಾಗುತ್ತದೆ' ಎಂಬುದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ಆರೋಪ.ರಾಜ್ಯ `ಸಲಹಾ ಬೆಲೆ ಕಾಯಿದೆ' ಜಾರಿಗೊಳಿಸಬೇಕು ಎಂಬ ಬೇಡಿಕೆಯೂ ಹಲವಾರು ವರ್ಷಗಳಿಂದ ಇದೆ. ಈ ಕಾಯಿದೆ ಜಾರಿಯಾದರೆ ಕಬ್ಬಿನ ಬೆಲೆ ನಿಗದಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೂ ಲಭಿಸಲಿದೆ ಎನ್ನುವುದು ಹೋರಾಟಗಾರರ ವಾದ. 

ಬಿಲ್ ಪಾವತಿ
ಕಾರ್ಖಾನೆಗೆ ಕಬ್ಬು ಪೂರೈಸಿದ 14 ದಿನಗಳಲ್ಲಿ ಬಿಲ್ ಪಾವತಿಸಬೇಕು ಎನ್ನುತ್ತದೆ ಕಾನೂನು. ಆದರೆ, ಹಲವು ತಿಂಗಳು ಕಳೆದರೂ ಬಿಲ್ ಪಾವತಿಯಾಗುವುದಿಲ್ಲ. ಸಕ್ಕರೆ ನಿಯಂತ್ರಣ ಕಾಯಿದೆ ಪ್ರಕಾರ 14 ದಿನದಲ್ಲಿ ಬಿಲ್ ಪಾವತಿಸದಿದ್ದರೆ, ಶೇ 14ರ ಬಡ್ಡಿ ಸಮೇತ ಬಿಲ್ ಪಾವತಿಸಬೇಕು. ಕೆಲವು ಕಾರ್ಖಾನೆಗಳು ವರ್ಷಗಟ್ಟಲೇ ಬಿಲ್ ಪಾವತಿಸದ ಉದಾಹರಣೆಗಳೂ ಇವೆ.

ಉತ್ಪಾದನೆ
ರಾಜ್ಯದಲ್ಲಿ 4.50 ಲಕ್ಷ ಹೆಕ್ಟೇರ್, ದೇಶದಲ್ಲಿ 50 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗುತ್ತದೆ. 2006-07ರಲ್ಲಿ ಒಟ್ಟು 269 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿದ್ದಿತು. ಈ ವರ್ಷ ಮಳೆ ಅಭಾವದಿಂದ ಕೆಲವು ರಾಜ್ಯಗಳಲ್ಲಿ ಕಬ್ಬು ಬೆಳೆ ಇಳುವರಿ ಕಡಿಮೆಯಾಗಿದ್ದು, 232 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಲಿದೆ ಎಂಬ ಅಂದಾಜಿದೆ. 190 ಲಕ್ಷ ಟನ್ ಸಕ್ಕರೆ ದೇಶದ ಒಟ್ಟು ಆಂತರಿಕ ಬೇಡಿಕೆಯಾಗಿದೆ.ರಾಜ್ಯದಲ್ಲಿ 58 ಸಕ್ಕರೆ ಕಾರ್ಖಾನೆಗಳಿವೆ. ಅದರಲ್ಲಿ 28 ಕಾರ್ಖಾನೆಗಳಲ್ಲಿ ಡಿಸ್ಟಲರಿ, 38 ಕಾರ್ಖಾನೆಗಳಲ್ಲಿ ಸಹ ವಿದ್ಯುತ್ ಹಾಗೂ 14 ಕಾರ್ಖಾನೆಗಳಲ್ಲಿ ಎಥೆನಾಲ್ ಘಟಕಗಳಿವೆ.

ಟನ್ ಕಬ್ಬಿನ ವರಮಾನ
ಒಂದು ಟನ್ ಕಬ್ಬು ಅರೆಯುವುದರಿಂದ ಕಾರ್ಖಾನೆಗಳಿಗೆ ಈಗಿನ ಸಕ್ಕರೆ ದರದಲ್ಲಿ ಕಡಿಮೆ ಎಂದರೂ 4 ಸಾವಿರ ರೂಪಾಯಿ ಬರುತ್ತದೆ. ಟನ್ ಕಬ್ಬಿಗೆ ಶೇ 9.75ರಷ್ಟು ಸಕ್ಕರೆ ಇಳುವರಿ ಬಂದರೆ 97.50 ಕೆಜಿ ಸಕ್ಕರೆ ಉತ್ಪಾದನೆಯಾಗುತ್ತದೆ. ಇದರಲ್ಲಿ ಶೇ 10ರಷ್ಟನ್ನು ಲೆವಿ ರೂಪದಲ್ಲಿ ಕೆಜಿಗೆ 18 ರೂಪಾಯಿಯಂತೆ ಆಹಾರ-ನಾಗರಿಕ ಪೂರೈಕೆ ಇಲಾಖೆಗೆ ನೀಡಲಾಗುತ್ತದೆ. ಉಳಿದದ್ದು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ.

ಟನ್ ಕಬ್ಬು ಅರೆದಾಗ 40 ಕೆ.ಜಿ. ಕಾಕಂಬಿ ಉತ್ಪಾದನೆಯಾಗುತ್ತಿದ್ದು, ಪ್ರತಿ ಕೆಜಿಗೆ 2.50 ರೂಪಾಯಿಯಂತೆ ಮಾರಾಟ ಮಾಡಿದರೆ, 100 ರೂಪಾಯಿ ಸಿಗುತ್ತದೆ. ಪ್ರತಿ ಗಂಟೆಗೆ 50 ಕಿಲೊವಾಟ್‌ನಂತೆ ವಿದ್ಯುತ್ ಉತ್ಪಾದಿಸಲಾಗುತ್ತದೆ. ಯೂನಿಟ್ 3.90 ರೂಪಾಯಿಯಂತೆ ಮಾರಿದರೆ 195 ರೂಪಾಯಿ ಲಭಿಸುತ್ತದೆ.ಟನ್ ಕಬ್ಬಿನಿಂದ 40 ಕೆ.ಜಿ. ಪ್ರೆಸ್ ಮಡ್ ಬರುತ್ತಿದ್ದು, 20 ಪೈಸೆಯಂತೆ ಮಾರಿದರೆ ಅಥವಾ ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡರೆ 8 ರೂಪಾಯಿಯಂತೆ ಆದಾಯ ಬರುತ್ತದೆ.

ಕಬ್ಬು ನುರಿಸಲು ತಗಲುವ ವೆಚ್ಚ
ಟನ್ ಕಬ್ಬು ಅರೆಯಲು ಕಾರ್ಖಾನೆಗೆ 911 ರೂಪಾಯಿ ವೆಚ್ಚವಾಗುತ್ತದೆ.ರಾಸಾಯನಿಕಗಳಿಗಾಗಿ ರೂ. 55, ಪ್ಯಾಕಿಂಗ್ ಮತ್ತು ಸಕ್ಕರೆ ನಿರ್ವಹಣೆಗೆ ರೂ. 73, ವೇತನಕ್ಕೆ ರೂ. 125, ದುರಸ್ತಿ-ನಿರ್ವಹಣೆಗೆ ರೂ. 71, ವಿದ್ಯುತ್ ವೆಚ್ಚಕ್ಕಾಗಿ ರೂ. 121, ದುಡಿಯುವ ಬಂಡವಾಳದ ಮೇಲಿನ ಬಡ್ಡಿಗಾಗಿ ರೂ. 128, ಸವಕಳಿ ವೆಚ್ಚ ರೂ. 43 ಹಾಗೂ ಇತರ ವೆಚ್ಚಗಳಿಗಾಗಿ ರೂ. 43 ವಿನಿಯೋಗವಾಗುತ್ತದೆ

ಆದಾಯ ಹಂಚಿಕೆ
ಕೇಂದ್ರ ಸರ್ಕಾರಕ್ಕೆ ಕಬ್ಬಿನ ಬೆಲೆ ನಿಗದಿಯೂ ಸೇರಿದಂತೆ ಸಕ್ಕರೆ ಉದ್ಯಮದ ಬಗ್ಗೆ ಸಿ.ರಂಗರಾಜನ್ ಅವರು ನೀಡಿರುವ ವರದಿಯಲ್ಲಿ ಕಾರ್ಖಾನೆಗಳ ಆದಾಯದಲ್ಲಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳು ಹಂಚಿಕೊಳ್ಳಬೇಕು ಎಂದಿದ್ದಾರೆ.ರಾಜ್ಯದಲ್ಲಿಯೂ ಈ ಕುರಿತು ಚರ್ಚೆಗಳು ನಡೆದಿವೆ. ಸಕ್ಕರೆ ಕಾರ್ಖಾನೆಗಳ ಮೇಲೆ ಹೆಚ್ಚು ನಿಯಂತ್ರಣ ಇರುವುದು ಭಾರತದಲ್ಲಿಯೇ. ಶೇ 10ರಷ್ಟು ಲೆವಿ ಸಕ್ಕರೆಯನ್ನು ಸರ್ಕಾರಕ್ಕೆ ರಿಯಾಯಿತಿ ದರದಲ್ಲಿಒದಗಿಸುವುದು. ಸಕ್ಕರೆ ಬಿಡುಗಡೆಯ ನಿಯಂತ್ರಣ ವ್ಯವಸ್ಥೆಯಿಂದಾಗಿ ಸಕ್ಕರೆ ಕಾರ್ಖಾನೆಗಳಿಗೆ ಕಷ್ಟವಾಗಿದೆ. ಜತೆಗೆ ನಿರ್ವಹಣೆ ವೆಚ್ಚ ಅಧಿಕವಾಗಿರುವುದು, ನಿಗದಿತ ಕಾಲಕ್ಕೆ ಕಾರ್ಖಾನೆಗಳ ಲೆಕ್ಕಪತ್ರ ಸರಿಯಾಗಿ ಆಡಿಟ್ ಆಗದಿರುವ ಅಂಶಗಳೂ ಆದಾಯ ಹಂಚಿಕೆ ಸೂತ್ರಕ್ಕೆ ಅಡ್ಡಿಯಾಗಿವೆ.

ಉತ್ತರ ಪ್ರದೇಶದಲ್ಲಿ ಶೇ 8.5ರಷ್ಟು ಇಳುವರಿ ನೀಡುವ ಪ್ರತಿ ಟನ್ ಕಬ್ಬಿಗೆ 2,900 ರೂಪಾಯಿ ನೀಡಲಾಗುತ್ತಿದೆ. ಆದರೆ, ಅಲ್ಲಿ ಸಾಧ್ಯವಾದದ್ದು ಇಲ್ಲಿ ಏಕೆ ಆಗದು ಎಂಬುದು ಕುರುಬೂರು ಶಾಂತಕುಮಾರ್ ಅವರ ಪ್ರಶ್ನೆ.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT