ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಕ್ರಮ'

Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ತಾಲ್ಲೂಕಿನ ದೊಡ್ಡಬಾತಿಯ ಭದ್ರಾ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಶಾಸಕ ಎಚ್.ಎಸ್.ಶಿವಶಂಕರ್ ಶನಿವಾರ ಹೇಳಿದರು.

ಜಿಲ್ಲಾಡಳಿತದ ವಶದಲ್ಲಿದ್ದ ಕಾರ್ಖಾನೆಯು ತಮ್ಮ ನೇತೃತ್ವದ ಆಡಳಿತ ಮಂಡಳಿಗೆ ಹಸ್ತಾಂತರಗೊಂಡ ಬಳಿಕ ಅವರು ಮಾತನಾಡಿದರು.
`ಕಾರ್ಖಾನೆ ಪುನರಾರಂಭಕ್ಕೆ ರೂ 50 ಕೋಟಿ ನೆರವು ಕೇಳಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇನೆ. ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದಿಂದಲೂ ಆರ್ಥಿಕ ನೆರವು ಪಡೆಯಲಾಗುವುದು. ಸಕ್ಕರೆ ಒಕ್ಕೂಟದ ತಾಂತ್ರಿಕ ತಜ್ಞರೊಂದಿಗೆ ಚರ್ಚಿಸಿ ನಾಳೆಯಿಂದಲೇ ಪುನರಾರಂಭ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.

ಕಾರ್ಖಾನೆಯ ಕಬ್ಬು ಅರೆಯುವ ಸಾಮರ್ಥ್ಯವನ್ನು 3,500 ಟನ್‌ಗೆ ಏರಿಸಬೇಕಾಗಿದೆ' ಎಂದು ಅವರು ಹೇಳಿದರು. `ಸರ್ಕಾರ ಒಪ್ಪಿಗೆ ನೀಡಿದರೆ ಖಾಸಗಿ ವ್ಯಕ್ತಿ ಅಥವಾ ಹಣಕಾಸು ಸಂಸ್ಥೆಗಳ ಸಹಭಾಗಿತ್ವ ಪಡೆಯುತ್ತೇವೆ' ಎಂದು ತಿಳಿಸಿದರು.

ಕಾರ್ಖಾನೆಯ ಇತಿಹಾಸ:
ಕಾರ್ಖಾನೆಯು 1978ರ ಆಗಸ್ಟ್ 9ರಂದು ಆರಂಭವಾಯಿತು. ಪ್ರತಿ ದಿನ 1,800 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿರುವ ಕಾರ್ಖಾನೆಗೆ ದಾವಣಗೆರೆ, ಹರಿಹರ, ಹರಪನಹಳ್ಳಿ, ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ 130 ಗ್ರಾಮಗಳ ರೈತರು ಕಬ್ಬು ಪೂರೈಸುತ್ತಿದ್ದರು. ವಿವಿಧ ಶ್ರೇಣಿಯ 7,178 ಷೇರುದಾರ ಸದಸ್ಯರು ಇದ್ದಾರೆ. ಕಾರ್ಖಾನೆ ರೂ 461.98 ಲಕ್ಷ ಷೇರು ಬಂಡವಾಳ ಹೊಂದಿತ್ತು. 2003-04ನೇ ಸಾಲಿನವರೆಗೆ ಯಶಸ್ವಿಯಾಗಿ ಉತ್ಪಾದನೆ ನಡೆಸಿದ ಕಾರ್ಖಾನೆ ಬಳಿಕ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿತ್ತು.

2010-11ನೇ ಸಾಲಿನಲ್ಲಿ ಹುಬ್ಬಳ್ಳಿಯ ಗ್ಯಾನ್‌ಬಾ ಷುಗರ್ಸ್ ಸಂಸ್ಥೆ ಗುತ್ತಿಗೆ ಆಧಾರದ ಮೇಲೆ ಕಾರ್ಖಾನೆ ಪುನರಾರಂಭ ಮಾಡಿತು. ಈ ಅವಧಿಯಲ್ಲಿ 1.21 ಲಕ್ಷ ಟನ್ ಕಬ್ಬು ಅರೆದು 98 ಸಾವಿರ ಕ್ವಿಂಟಲ್ ಸಕ್ಕರೆ ಉತ್ಪಾದಿಸಿತ್ತು. ಸುಮಾರು 6 ತಿಂಗಳಲ್ಲೇ ಆರ್ಥಿಕ ಕಾರಣಗಳಿಂದಾಗಿ ಕಾರ್ಖಾನೆ ಸ್ಥಗಿತಗೊಂಡಿತು.

ಕಾರ್ಖಾನೆಗೆ ಸರ್ಕಾರದಿಂದ ನೀಡಲಾದ ರೂ 7.90 ಕೋಟಿ, ವಿವಿಧ ಆರ್ಥಿಕ ಸಂಸ್ಥೆಗಳಿಂದ ರೂ 55.40 ಕೋಟಿ ಸಾಲವಿದೆ. ಉತ್ಪಾದಿತ ಸಕ್ಕರೆ ಮಾರಾಟದಿಂದ ಸುಮಾರು ರೂ 17 ಕೋಟಿ ಹಣ ರೈತರಿಗೆ ಪಾವತಿಸಲಾಗಿದೆ. ಕಾರ್ಮಿಕರಿಗೆ ರೂ 23.68 ಕೋಟಿ ಪಾವತಿಸಬೇಕಾಗಿದೆ.

ಜಿಲ್ಲೆಯಲ್ಲಿ ಸಚಿವ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಸೇರಿದ ದಾವಣಗೆರೆ ತಾಲ್ಲೂಕು ಕುಕ್ಕವಾಡದ ಶಾಮನೂರು ಶುಗರ್ಸ್ ಹಾಗೂ ಹರಪನಹಳ್ಳಿ ತಾಲ್ಲೂಕು ದುಗ್ಗಾವತಿಯ ದಾವಣಗೆರೆ ಶುಗರ್ಸ್ ಹೆಸರಿನ ಎರಡು ಸಕ್ಕರೆ ಕಾರ್ಖಾನೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಸಹಕಾರ ವ್ಯವಸ್ಥೆಯಡಿ ಸ್ಥಾಪನೆಯಾದ ಭದ್ರಾ ಸಹಕಾರ ಸಕ್ಕರೆ ಕಾರ್ಖಾನೆ ರಾಜಕೀಯ, ಸ್ವಪ್ರತಿಷ್ಠೆ, ಜಿದ್ದಿನ ಕಾರಣಗಳಿಗೆ ಬಲಿಯಾಗಿ ರೋಗಗ್ರಸ್ತವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಸರ್ಕಾರಗಳು ಬದಲಾದಂತೆ ಪದೇಪದೇ ಕಾರ್ಖಾನೆ ಸಮಾಪನ (ಲಿಕ್ವಿಡೇಷನ್) ಮಾಡಿ ಬಾಕಿ ಪಾವತಿಸುವ ಬಗ್ಗೆ ಸಿದ್ಧತೆಗಳು ನಡೆಯುತ್ತಿದ್ದವು. ಇದೀಗ ಕಾರ್ಖಾನೆಯ ಹಿಡಿತ ಮತ್ತೆ ಆಡಳಿತ ಮಂಡಳಿ ಕೈಗೆ ಬಂದಿದೆ. ಕಾರ್ಖಾನೆ ಇನ್ನಾದರೂ ಚೇತರಿಸೀತೇ? ಎಂಬ ನಿರೀಕ್ಷೆ ಸುತ್ತಮುತ್ತಲಿನ ರೈತರು ಮತ್ತು ಷೇರುದಾರರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT