ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಕಾರ್ಖಾನೆಗಳ ಬ್ಲಾಕ್‌ಮೇಲ್ ತಂತ್ರ

ಕಬ್ಬು ಬೆಳೆಗಾರರ ಸಂಘದ ಪ್ರತಿಭಟನೆ ನಾಳೆ
Last Updated 3 ಡಿಸೆಂಬರ್ 2013, 8:08 IST
ಅಕ್ಷರ ಗಾತ್ರ

ಚಾಮರಾಜನಗರ: ಸಕ್ಕರೆ ಕಾರ್ಖಾನೆಗಳ ರೈತ ವಿರೋಧಿ ನೀತಿ ಹಾಗೂ ಕಬ್ಬಿನ ಬಾಕಿ ಹಣ ಪಾವತಿಗೆ ತುರ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿ. 4ರಂದು ರಾಜ್ಯದ  ಎಲ್ಲ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ಕಬ್ಬು ಬೆಳೆಗಾರರ ಸಂಘ ತೀರ್ಮಾನಿಸಿದೆ.

ರಾಜ್ಯ ಸರ್ಕಾರ ಪ್ರತಿಟನ್ ಕಬ್ಬಿಗೆ ರೂ 2,500 ದರ ನಿಗದಿಪಡಿಸಿದೆ. ಇಷ್ಟು ಹಣ ನೀಡಲು ಸಾಧ್ಯವಿಲ್ಲ. ಕಾರ್ಖಾನೆಗಳನ್ನು ಸರ್ಕಾರವೇ ವಹಿಸಿಕೊಳ್ಳಲಿ ಎಂದು ಕಾರ್ಖಾನೆಯ ಮಾಲೀಕರು ಬ್ಲಾಕ್‌ಮೇಲ್ ಮಾಡುವ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಸರ್ಕಾರ ಮಾಲೀಕರ ಈ ತಂತ್ರಕ್ಕೆ ಮಣಿಯಬಾರದು. ಬೇಕಿದ್ದರೆ ಕಾರ್ಖಾನೆಗಳನ್ನು ನಮಗೆ ವಹಿಸಿದರೆ ನಾವು ನಿರ್ವಹಿಸುತ್ತೇವೆ' ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಾಕಿ ಹಣ ಪಾವತಿ ವಿಚಾರದಲ್ಲಿ ಸಕ್ಕರೆ ಕಾರ್ಖಾನೆಗಳು ಸರ್ಕಾರಕ್ಕೆ ತಪ್ಪುಮಾಹಿತಿ ನೀಡುತ್ತಿವೆ. ಸುಮಾರು ರೂ 800 ಕೋಟಿ ಬಾಕಿ ಹಣ ನೀಡಬೇಕು. ಆದರೆ, ಸರ್ಕಾರಕ್ಕೆ ರೂ 40 ಕೋಟಿ ಎಂದು ಹೇಳುತ್ತಿದೆ. ಕಳೆದ ವರ್ಷದ ಬಾಕಿ ಹಣವನ್ನು ಕೂಡ ರೈತರಿಗೆ ಪಾವತಿ ಮಾಡಿಲ್ಲ ಎಂದು ದೂರಿದರು.

ರೈತರ ಆತ್ಮಹತ್ಯೆಗೆ ರಾಜಕೀಯ ಬಣ್ಣ ಹಚ್ಚಲಾಗುತ್ತಿದೆ. ವ್ಯವಸ್ಥಿತ ರೀತಿಯಲ್ಲಿ ರಾಜಕೀಯ ಉದ್ದೇಶದಿಂದ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.

ಎಥೆನಾಲ್ ಬೆಲೆ ಹೆಚ್ಚಿಸಿ
ಕೇಂದ್ರ ಸರ್ಕಾರ ಕಬ್ಬಿನ ಬೆಂಬಲ ಬೆಲೆಯನ್ನು ಕೇವಲ ಶೇ 5ರಷ್ಟು ಹೆಚ್ಚಿಸಲು ತೀರ್ಮಾನಿಸುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಈಗ ಕಬ್ಬು ಉತ್ಪಾದನಾ ವೆಚ್ಚ ಶೇ 30ರಷ್ಟು ಏರಿಕೆ ಕಂಡಿದೆ. ಉತ್ಪಾದನಾ ವೆಚ್ಚದ ಆಧಾರದಡಿ ಬೆಂಬಲ ಬೆಲೆ ಹೆಚ್ಚಿಸಬೇಕು. ಕೇಂದ್ರ ಸರ್ಕಾರದ ಸಕ್ಕರೆ ಆಮದು ನೀತಿಯಿಂದ ದೇಶದಲ್ಲಿನ ಕಬ್ಬು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ ಎಂದರು.

ಕಬ್ಬಿನಿಂದ ಉತ್ಪಾದನೆಯಾಗುವ ಎಥೆನಾಲ್ ಉತ್ಪಾದನೆಯನ್ನು ಶೇ 25ರಷ್ಟು ಹೆಚ್ಚಿಸಬೇಕು. ಜತೆಗೆ, ಇದರ ದರವನ್ನು ರೂ 50ಕ್ಕೆ ಏರಿಸಬೇಕು ಎಂದು ಒತ್ತಾಯಿಸಿ ಡಿ. 6ರಂದು ಸಂಸತ್ ಭವನದ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಕುಟುಂಬಕ್ಕೆ ನೆರವು
ಕಬ್ಬು ದರ ನಿಗದಿಗೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದ ವೇಳೆ ಆತ್ಮಹತ್ಯೆಗೆ ಶರಣಾದ ವಿಠಲ ಅರಭಾವಿ ಕುಟುಂಬಕ್ಕೆ ನೆರವಾಗಲು ಪ್ರಸಕ್ತ ಸಾಲಿನ ಟನ್ ಕಬ್ಬಿಗೆ 1 ರೂಪಾಯಿ ಕಡಿತ ಮಾಡಿಸಿ ಆ ಹಣವನ್ನು ರೈತನ ಕುಟುಂಬಕ್ಕೆ ನೀಡಬೇಕು. ಇದಕ್ಕಾಗಿ ಕಬ್ಬು ಬೆಳೆಗಾರರು ಸ್ವಯಂಪ್ರೇರಿತ ಒಪ್ಪಿಗೆ ಪತ್ರವನ್ನು ಕಾರ್ಖಾನೆ ಮಾಲೀಕರಿಗೆ ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಸಂಚಾಲಕ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಎಚ್.ಪಿ. ಬಸವಣ್ಣ, ಎ.ಸಿ. ಬಸವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT