ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಜಿಲ್ಲೆಗೆ 6ನೇ ಬಾರಿ ಸಮ್ಮೇಳಾಧ್ಯಕ್ಷತೆ ಗರಿ

Last Updated 4 ಫೆಬ್ರುವರಿ 2011, 8:45 IST
ಅಕ್ಷರ ಗಾತ್ರ

ಮಂಡ್ಯ: ಬೆಂಗಳೂರಿನಲ್ಲಿ ಈಗ ನುಡಿ ಹಬ್ಬದ ಸಂಭ್ರಮ. 1928 ರಿಂದ ಈಚೆಗೆ ಜಿಲ್ಲೆಯ ಆರು ಮಂದಿ ಸಾಹಿತ್ಯ ‘ರತ್ನ’ಗಳಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವ. ಈಗ ಮತ್ತೊಮ್ಮೆ ‘ಕನ್ನಡದ ತೇರು’ ಎಳೆಯಲು ಜಿಲ್ಲೆಯವರದೇ ನೇತೃತ್ವ.

ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕು ಗಂಜಾಂನವರೇ ಆದ ಪ್ರೊ. ಜಿ.ವೆಂಕಟಸುಬ್ಬಯ್ಯ ಅವರಿಗೆ ಅಧ್ಯಕ್ಷತೆಯ ಗೌರವ.ಈ ಹಿಂದೆಯೂ ಐದು ಬಾರಿ ಜಿಲ್ಲೆಗೆ ಈ ಗೌರವ ದೊರೆತಿದೆ. ಈ ಪೈಕಿ ಮೂವರು ಸಾಹಿತ್ಯ ದಿಗ್ಗಜರು ರಾಜ್ಯ ಸರ್ಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿಯ ಗೌರವಕ್ಕೂ ಭಾಜನರಾಗಿದ್ದು, ಅವರೆಂದರೆ ಕೆ.ಎಸ್. ನರಸಿಂಹಸ್ವಾಮಿ, ಎ.ಎನ್. ಮೂರ್ತಿರಾವ್ ಮತ್ತು ಪು.ತಿ. ನರಸಿಂಹಚಾರ್.

1928ರಲ್ಲಿ ಗುಲ್ಬರ್ಗಾ ದಲ್ಲಿ ನಡೆದ 14ನೇ ಸಾಹಿತ್ಯ ಸಮ್ಮೇಳನಕ್ಕೆ ‘ಕನ್ನಡದ ಕಣ್ವ’ ಬಿ.ಎಂ.ಶ್ರೀಕಂಠಯ್ಯ; 1981ರಲ್ಲಿ ಚಿಕ್ಕಮಗಳೂರಿನಲ್ಲಿ ಜರುಗಿದ 53ನೇ ಸಮ್ಮೇಳನಕ್ಕೆ ಪುರೋಹಿತ ತಿರುನಾರಾಯಣ ನರಸಿಂಹಚಾರ್ (ಪು.ತಿ.ನ) ಅವರದೇ ಸಾರಥ್ಯ.1984ರಲ್ಲಿ ಕೈವಾರದಲ್ಲಿ ನಡೆದ 56ನೇ ನುಡಿ ಹಬ್ಬಕ್ಕೆ ಪ್ರೊ. ಎ.ಎನ್.ಮೂರ್ತಿರಾವ್; 1990ರಲ್ಲಿ ‘ಸಾಂಸ್ಕೃತಿಕ ನಗರಿ’ ಮೈಸೂರಿನಲ್ಲಿ ಜರುಗಿದ 60ನೇ ಕನ್ನಡ ಜಾತ್ರೆಗೆ ‘ಮಲ್ಲಿಗೆ’ಯ ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಮುಂದಾಳತ್ವ.

1995ರಲ್ಲಿ ಮುಧೋಳದಲ್ಲಿ ಜರುಗಿದ 64ನೇ ಸಾಹಿತ್ಯ ಜಾತ್ರೆಗೆ ಜನಪದ ತಜ್ಞ ಡಾ. ಎಚ್.ಎಲ್.ನಾಗೇಗೌಡ ಅವರು ಅಧ್ಯಕ್ಷತೆ ವಹಿಸಿದ್ದರೆ, ಈಗ 77ನೇ ಕನ್ನಡ ಹಬ್ಬಕ್ಕೆ ನಿಘಂಟು ತಜ್ಞ ಗಂಜಾಂನ ಪ್ರೊ. ಜಿ.ವೆಂಕಟಸುಬ್ಬಯ್ಯ ಅವರ ನೇತೃತ್ವ.ಮಂಡ್ಯದಲ್ಲಿ ಎರಡು ಬಾರಿ ಕನ್ನಡ ನುಡಿ ಹಬ್ಬ ನಡೆದಿದೆ. 1974ರಲ್ಲಿ ಮೊದಲ ಬಾರಿಗೆ ನಡೆದ 48ನೇ ಸಮ್ಮೇಳನಕ್ಕೆ ಜಯದೇವಿತಾಯಿ ಲಿಗಾಡೆ ಅವರು ಅಧ್ಯಕ್ಷೆ. ಮತ್ತೆ ಎರಡನೇ ಬಾರಿಗೆ 1994ರಲ್ಲಿ ನಡೆದ 63ನೇ ಸಮ್ಮೇಳನಕ್ಕೆ ಸಕ್ಕರೆ ನಗರ ವೇದಿಕೆಯಾಗಿದ್ದು, ಆಗ ಚದುರಂಗ ಅಧ್ಯಕ್ಷರಾಗಿದ್ದರು.
1928ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯವರು ಮೊದಲ ಬಾರಿಗೆ ಅಧ್ಯಕ್ಷರಾದರು. ಆಗ ಮಂಡ್ಯ ಜಿಲ್ಲೆಯೇ ಅಸ್ತಿತ್ವಕ್ಕೆ ಬಂದಿರಲಿಲ್ಲ. ಜಿಲ್ಲೆ 1939ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ 81ರಲ್ಲಿ ನಡೆದ ಸಮ್ಮೇಳನದಲ್ಲಿ ಅಧ್ಯಕ್ಷತೆಯ ಗೌರವ ದೊರೆಯಿತು.ಈ ಹಿಂದೆ ಜಿಲ್ಲೆಯವರು 1995ರಲ್ಲಿ ಮುಧೋಳದಲ್ಲಿ ನಡೆದ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು. ಅದಾದ, 15 ವರ್ಷಗಳ ತರುವಾಯ ಈಗ ಮತ್ತೆ ಆ ಗೌರವ ಜಿಲ್ಲೆಯವರಿಗೆ ದೊರೆತಿದೆ. ಪ್ರೊ.ಜಿ.ವೆಂಕಟಸುಬ್ಬಯ್ಯ ಬೆಂಗಳೂರು ವಾಸಿಯಾಗಿದ್ದರೂ, ಅವರ ಹುಟ್ಟೂರು ಜಿಲ್ಲೆಯ ಗಂಜಾಂ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT