ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ರೆಬೈಲ್ ಬಿಡಾರದಲ್ಲಿ ಆನೆ ದಿನ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಕ್ಟೋಬರ್ ಎರಡರಿಂದ ಏಳರವರೆಗೆ ರಾಜ್ಯದಲ್ಲಿ ವನ್ಯಜೀವಿ ಸಪ್ತಾಹ ನಡೆಯಿತು. ರಾಜ್ಯದ ಉದ್ದಗಲದಲ್ಲಿ  ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆದವು. ಶಿವಮೊಗ್ಗ ಸಮೀಪದ ಸಕ್ರೆಬೈಲ್ ಆನೆಗಳ ಬಿಡಾರದಲ್ಲಿ ಸಪ್ತಾಹದ ಅಂಗವಾಗಿ ಅಕ್ಟೋಬರ್ 7ರಂದು `ಆನೆಗಳ ದಿನ~ ಆಚರಿಸಲಾಯಿತು.

ಕಳೆದ ಆರು ವರ್ಷಗಳಿಂದ ಸಕ್ರೆಬೈಲ್ ಬಿಡಾರದಲ್ಲಿ ಆನೆಗಳ ದಿನ ಆಚರಣೆ ನಡೆಯುತ್ತಿದೆ. ಸಪ್ತಾಹದ ಕೊನೆಯ (ಅ.7) ದಿನ ಆನೆಗಳಿಗೆ ಮೀಸಲು. ಆ ದಿನ ಆನೆಗಳಿಗಾಗಿ ಆಟೋಟಗಳು, ತಿನ್ನುವ ಸ್ಪರ್ಧೆಗಳು ನಡೆಯುತ್ತವೆ.

ಆನೆಗಳು ಅತ್ಯಂತ ಸಂಭ್ರಮದಿಂದ ಆಟೋಟಗಳಲ್ಲಿ ಭಾಗವಹಿಸುತ್ತವೆ. ಅದನ್ನು ನೋಡುವವರಿಗೆ ಒಳ್ಳೆಯ ಮನರಂಜನೆ ಸಿಕ್ಕಿತು. ನಾವು ಕೂಡ ಶಿಸ್ತಿನ ಸಿಪಾಯಿಗಳು ಎಂಬಂತೆ ಶಿಬಿರದ ಆನೆಗಳು `ಮಾರ್ಚ್ ಪಾಸ್ಟ್~ಮಾಡಿದವು. ಒಂದರ ಬಾಲ ಇನ್ನೊಂದು ಹಿಡಿದು ಶಿಸ್ತಿನಿಂದ ನಡೆದಾಡಿದವು.

ಕಳೆದ ಆರು ವರ್ಷಗಳಿಂದ ಅರಣ್ಯ ಇಲಾಖೆಯ ಶಿವಮೊಗ್ಗ ವನ್ಯಜೀವಿ ಉಪ ವಿಭಾಗದ ಸಕ್ರೆಬೈಲ್  ವನ್ಯಜೀವಿ ವಲಯ ಆನೆಗಳ ದಿನಾಚರಣೆ ನಡೆಸಿಕೊಂಡು ಬರುತ್ತಿದೆ.

ಸಕ್ರೆಬೈಲಿನ ಒಂಬತ್ತು ಆನೆಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು. 79 ವರ್ಷದ ಅತ್ಯಂತ ಹಿರಿಯ ಆನೆ ಇಂದಿರಾ, ಕಪಿಲಾ (62), ಗಂಗೆ (57), ಕಾವೇರಿ (77), ಸುಭದ್ರಾ (67), ಸಾಗರ (27) ಹಾಗೂ ಅಮೃತಾ ಮತ್ತು ಆಲೆ ಮರಿಯಾನೆಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದವು.

ವಿಶೇಷವಾಗಿ ಸಿಂಗರಿಸಿದ್ದ ಆನೆಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಅತಿಥಿಗಳಿಂದ ಪೂಜೆ ನಡೆಯಿತು. ನಂತರ ಗಾಳಿ ತುಂಬಿದ ಬಲೂನ್‌ಗಳನ್ನು ಆನೆಗಳು ಹಾರಿಬಿಟ್ಟ ನಂತರ ಓಟದ ಸ್ಪರ್ಧೆಗಳು ನಡೆದವು.

ಇಂದಿರಾ, ಸಾಗರ್, ಅಮೃತಾ ಮತ್ತು ಆಲೆ ಮರಿಯಾನೆ ಚೆಂಡಾಟ ಆಡಿದವು. ಈ ಚೆಂಡಾಟ ಮಕ್ಕಳಿಗೆ ಖುಷಿ ತಂದಿತ್ತು. ಮರಿಯಾನೆಗಳು ಸೊಂಡಿಲಿನಿಂದ ನೀರಿನ ಕಾರಂಜಿ ಚಿಮ್ಮಿದವು. ಮಾವುತರು ನೀಡಿದ ಆದೇಶಗಳನ್ನು ವಿಧೇಯವಾಗಿ ಪಾಲಿಸಿ ಪ್ರೇಕ್ಷಕರ ಚಪಾಳೆ ಗಿಟ್ಟಿಸಿದವು.

ಬಾಳೆಹಣ್ಣು, ಕಬ್ಬಿನ ಜಲ್ಲೆಗಳನ್ನು ಮಾವುತರ ಸಹಾಯವಿಲ್ಲದೆಯೆ ತಿನ್ನುವ ಸ್ಪರ್ಧೆ ನಡೆಯಿತು. ಹಾಗೇ ಮಾವುತ ಗಾಯಗೊಂಡರೆ ಅಥವಾ ದಟ್ಟ ಕಾಡಿನಲ್ಲಿ ಸಿಕ್ಕಿಕೊಂಡ ಸಂದರ್ಭಗಳಲ್ಲಿ ಅವರನ್ನು ರಕ್ಷಿಸಿ ಸೊಂಡಿಲ ಸಹಾಯದಿಂದ ಶಿಬಿರಕ್ಕೆ ಹೇಗೆ ಕರೆತರುತ್ತವೆ, ಅವರನ್ನು ತಮ್ಮ ಬೆನ್ನಮೇಲೆ ಹೇಗೆ ಹತ್ತಿಸಿಕೊಳ್ಳುತ್ತವೆ ಎಂಬುದರ ಪ್ರದರ್ಶನವೂ ನಡೆಯಿತು.

ಅಪರೂಪಕ್ಕೆ ಎದುರಾದ ಆನೆಗಳು ಮಿತ್ರರಂತೆ ಆಲಂಗಿಸಿಕೊಳ್ಳುವುದು, ತಪ್ಪು ಮಾಡಿದಾಗ ಕಿವಿಹಿಂಡುವುದು ಹೀಗೆ ಹಲವು ರೀತಿಯ ಸೂಚನೆಗಳನ್ನು ಆನೆಗಳು ತೋರಿಸಿ ಪ್ರೇಕ್ಷಕರನ್ನು ರಂಜಿಸಿದವು. ಸಕ್ರೆಬೈಲು ಆನೆಗಳ ಬಿಡಾರಕ್ಕೆ 65ವರ್ಷಗಳ ಇತಿಹಾಸವಿದೆ. ಇಲ್ಲಿ ಆನೆಗಳನ್ನು ಪಳಗಿಸಲಾಗುತ್ತದೆ. ಖೆಡ್ಡಾ ಕಾರ್ಯಾಚರಣೆಯಲ್ಲಿ ಇಲ್ಲಿನ ಆನೆಗಳು ಪಾಲ್ಗೊಂಡಿವೆ. ಸಕ್ರೆಬೈಲ್ ಬಿಡಾರದಲ್ಲಿ 18 ಆನೆಗಳಿದ್ದು ಅವುಗಳಲ್ಲಿ 10ಗಂಡಾನೆಳು.

ಸಕ್ರೆಬೈಲ್ ಶಿವಮೊಗ್ಗದಿಂದ ತೀರ್ಥಹಳ್ಳಿ ರಸ್ತೆಯಲ್ಲಿ 13ಕಿ ಮೀ ದೂರದಲ್ಲಿದೆ. ಗಾಜನೂರು ಜಲಾಶಯದ ತುಂಗಾ ನದಿಯ ಹಿನ್ನೀರು ಪ್ರದೇಶದಲ್ಲಿ ಆನೆಗಳ ಬಿಡಾರವಿದೆ.

ಬೀಡಾರದಲ್ಲಿನ ಆನೆಗಳ ಚಟುವಟಿಕೆಗಳನ್ನು ನೋಡುವ ಅವಕಾಶ ಸಾರ್ವಜನಿಕರಿಗೆ ಇದೆ. ಆದರೆ ಅಲ್ಲಿಗೆ ಹೋಗಲು ಮೊದಲೇ ಅನುಮತಿ ಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT