ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಟು ಹಣದುಬ್ಬರ 6 ತಿಂಗಳ ಗರಿಷ್ಠ

ಈರುಳ್ಳಿ, ತರಕಾರಿ, ಹಣ್ಣುಗಳ ಬೆಲೆ ಗಗನಮುಖಿ
Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಈರುಳ್ಳಿ ಸೇರಿ­ದಂತೆ ಪ್ರಮುಖ ತರಕಾ­ರಿಗಳ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧ­ರಿಸಿದ  ಹಣದುಬ್ಬರ ಆಗಸ್ಟ್‌­ನಲ್ಲಿ ಶೇ 6.1ಕ್ಕೆ ಏರಿಕೆ ಕಂಡಿದ್ದು, 6 ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ.

‘ಹಣದುಬ್ಬರ ಕಳೆದ 3 ತಿಂಗಳಿಂದ ಸತತ ಏರಿಕೆ ಕಾಣುತ್ತಿದೆ. ವಿತ್ತೀಯ ಕೊರತೆ ಹೆಚ್ಚು­ತ್ತಿರುವ ಬೆನ್ನಲ್ಲೇ ಹಣದುಬ್ಬರ ಕೂಡ ಏರುತ್ತಿರುವುದು ದೇಶದ ಅರ್ಥ­ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಇದರಿಂದ ‘ಭಾರತೀಯ ರಿಸರ್ವ್ ಬ್ಯಾಂಕ್‌’(ಆರ್‌ಬಿಐ) ಸೆ. 20ರಂದು ಪ್ರಕಟಿ­ಸಲಿ­ರುವ ಹಣಕಾಸು ನೀತಿ ಪರಾಮರ್ಶೆ­ಯಲ್ಲಿ ಬಡ್ಡಿ ದರ ಕಡಿತ ಸಾಧ್ಯತೆ ಕ್ಷೀಣಿಸಿದೆ’ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಡಾಲರ್‌ ವಿರುದ್ಧ ರೂಪಾಯಿ ವಿನಿ­ಮಯ ಮೌಲ್ಯ ಕುಸಿತ ಸಹ ಹಣ­ದುಬ್ಬರ ಹೆಚ್ಚುವಂತೆ ಮಾಡಿದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ (ಪಿಎಂಇಎಸಿ) ಅಧ್ಯಕ್ಷ ಸಿ.ರಂಗರಾಜನ್‌ ಹೇಳಿದ್ದಾರೆ. ಜುಲೈನಲ್ಲಿ ಸಗಟು ಹಣ­ದುಬ್ಬರ ಶೇ 5.79ರಷ್ಟಿತ್ತು. 2012ನೇ ಸಾಲಿನ ಆಗಸ್ಟ್‌ನಲ್ಲಿ ಇದು ಶೇ 8.01ರಷ್ಟಿತ್ತು.

ಈರುಳ್ಳಿ ಬೆಲೆ ಕಾರಣ
ಈರುಳ್ಳಿ ಧಾರಣೆ ವಾರ್ಷಿಕವಾಗಿ ಶೇ 245ರಷ್ಟು ಏರಿಕೆ ಕಂಡಿದೆ. ತರಕಾರಿ ಬೆಲೆ ಶೇ 78ರಷ್ಟು ತುಟ್ಟಿಯಾಗಿದೆ. ಹಣ್ಣುಗಳು ಶೇ 8ರಷ್ಟು ಏರಿಕೆ ಕಂಡಿದೆ. ಹಣದುಬ್ಬರ ಗಗನಮುಖಿಯಾಗಲು ಈ ಅಂಶಗಳೇ ಪ್ರಮುಖ ಕಾರಣವಾಗಿವೆ. ಜತೆಗೆ ಇತರೆ ಆಹಾರ ಪದಾರ್ಥಗಳಾದ ಅಕ್ಕಿ, ಬೇಳೆ, ಮೊಟ್ಟೆ, ಮಾಂಸ ಮತ್ತು ಮೀನಿನ ಧಾರಣೆಯೂ ಶೇ 18ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಲೂಗೆಡ್ಡೆ ಬೆಲೆ ಶೇ 15ರಷ್ಟು ಇಳಿದಿದೆ. ತಯಾರಿಸಲಾದ ಸರಕುಗಳು, ಖಾದ್ಯತೈಲದ ಬೆಲೆಗಳೂ ಕ್ರಮವಾಗಿ ಶೇ 4 ಮತ್ತು ಶೇ 3.86ರಷ್ಟು ಇಳಿಕೆ ಕಂಡಿವೆ.

‘ಆರ್‌ಬಿಐ’ನ ಹೊಸ ಗವರ್ನರ್‌ ರಘುರಾಂ ಜಿ.ರಾಜನ್‌ ಸೆ. 20ರಂದು ಹಣಕಾಸು ನೀತಿ ಪರಾಮರ್ಶೆ ಪ್ರಕಟಿ­ಸಲಿದ್ದಾರೆ. ಬಡ್ಡಿ ದರ ಹೆಚ್ಚಿಸುವ ಮೂಲಕ ಹಣಕಾಸು ಮಾರುಕಟ್ಟೆ ಮೇಲೆ ನಿಯಂತ್ರಣ ವಿಧಿಸುವ ‘ಆರ್‌­ಬಿಐ’ನ ಸಂಪ್ರದಾಯ ಮುರಿ­ಯುವ ಸುಳಿ­ವನ್ನು ಅವರು ಈಗಾಗಲೇ ನೀಡಿದ್ದಾರೆ. ಆದರೆ, ಹಣದುಬ್ಬರ ಏರಿಕೆ ಕಂಡಿರುವುದರಿಂದ ಈ ಬಾರಿ ಬಡ್ಡಿ ದರ ಕಡಿತ ಸಾಧ್ಯತೆ ಕ್ಷೀಣಿಸಿದೆ.

‘ಪಿಎಂಇಎಸಿ’ ಕೂಡ ಇತ್ತೀಚೆಗೆ ಪ್ರಕಟಿಸಿದ 2013–14ನೇ ಸಾಲಿನ ಆರ್ಥಿಕ ಮುನ್ನೋಟ ವರದಿಯಲ್ಲಿ ಹಣಕಾಸು ಮಾರುಕಟ್ಟೆ ಸ್ಥಿರಗೊಳ್ಳು­ವವರೆಗೆ ಈಗಿರುವ ಬಿಗಿ ಹಣಕಾಸು ನೀತಿಯನ್ನೇ ಮುಂದು­ವರಿಸಿಕೊಂಡು ಹೋಗುವಂತೆ ಸಲಹೆ ನೀಡಿದೆ. ಹೀಗಾಗಿ ಉದ್ಯಮ ವಲಯಕ್ಕೆ ನಿರಾಸೆಯೇ ಕಾದಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

‘ಈ ಬಾರಿಯ ಮುಂಗಾರಿನಲ್ಲಿ ಉತ್ತಮ ಮಳೆ ಆಗಿರುವುದರಿಂದ ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಹಣದುಬ್ಬರ ಶೇ 5.5ಕ್ಕೆ ತಗ್ಗಲಿದೆ ಎಂದು ರಂಗರಾಜನ್‌ ವಿಶ್ವಾಸ ವ್ಯಕ್ತಪಡಿಸಿದ್ದರೆ, ‘ಆರ್‌ಬಿಐ’ ಬಡ್ಡಿ ದರ ಕಡಿತ ಮಾಡುವ ಯಾವುದೇ ಸಾಧ್ಯತೆಗಳು ಕಾಣಿಸುತ್ತಿಲ್ಲ’ ಎಂದು ಅರ್ಥಶಾಸ್ತ್ರಜ್ಞ ಸಿದ್ಧಾರ್ಥ್‌ ಶಂಕರ್‌ ಅಭಿಪ್ರಾಯಪಟ್ಟಿದ್ದಾರೆ.

‘ಆಗಸ್ಟ್‌ನಲ್ಲಿನ ಹಣದುಬ್ಬರ ಅಂಕಿ– ಅಂಶಗಳು ಹೂಡಿಕೆದಾರರ ನಿರೀಕ್ಷೆಗೆ ತಕ್ಕಂತಿಲ್ಲ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಮಹಾ ನಿರ್ದೇಶಕ ಚಂದ್ರಜಿತ್‌ ಬ್ಯಾನರ್ಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT