ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಣಿ ಸಂಗ್ರಹಿಸಿ ಕೊಡುವ ಸ್ವಾಭಿಮಾನಿ

Last Updated 3 ಡಿಸೆಂಬರ್ 2013, 10:13 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಹೊಳಲು ಗ್ರಾಮದ  ಅಂಗವಿಕಲ  ತಳವಾರ ಬಸವರಾಜನಿಗೆ ಕೈ, ಕಾಲುಗಳಲ್ಲಿ ಬಲ ಇಲ್ಲದಿದ್ದರೂ ಸ್ವಾಭಿಮಾನಿಯಾಗಿ ಬದುಕುವ ಛಲ.

ತುತ್ತಿನ ಚೀಲ ತುಂಬಿಸಿಕೊಳ್ಳಲು ಪ್ರತಿನಿತ್ಯ ರಸ್ತೆ ಬದಿಯಲ್ಲಿ ಸಂಚರಿಸಿ, ಜಾನುವಾರುಗಳು ಹಾಕಿದ ಸಗಣೆಯನ್ನು ಸಂಗ್ರಹಿಸಿ ರೈತ ಕುಟುಂಬಗಳಿಗೆ ನೀಡಿ,  ‘ಅನ್ನ’ ನೀಡುವಂತೆ ಕೇಳುವ ಈತ ಹೊಳಲು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ  ‘ಸಗಣಿ ಬಸಣ್ಣ’ ಎಂದೇ  ಹೆಸರಾಗಿದ್ದಾನೆ.

ಪೋಲಿಯೊದಿಂದಾಗಿ ಚಿಕ್ಕಂದಿನಲ್ಲೇ ಈತನ ಕಾಲುಗಳು ಸ್ವಾಧೀನ  ಕಳೆದುಕೊಂಡಿದ್ದು, ಕೆಲವು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೂ ತುತ್ತಾಗಿರುವುದರಿಂದ ಬಸವರಾಜನ  ದೇಹ ಮತ್ತು ಮನಸ್ಸು ಎರಡೂ ಘಾಸಿಗೊಂಡಿದೆ.

ನಾಲ್ಕು ಬೇರಿಂಗ್ ಚಕ್ರ ಹೊಂದಿರುವ ಕಟ್ಟಿಗೆಯ ಬಂಡಿಯ ಮೇಲೆ ತೆವಳುವ  ಈತನ ಜೀವನರಥ ಹೊಳಲು ಹಾಗೂ ಸುತ್ತಮುತ್ತ ಗ್ರಾಮಗಳತ್ತ ಸಾಗುತ್ತದೆ. ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೆ ರಸ್ತೆ ಬದಿಯಲ್ಲಿ, ಓಣಿಗಳಲ್ಲಿ ಬಿದ್ದಿರುವ ಸಗಣಿಯನ್ನು ಸಂಗ್ರಹಿಸಿ ತನ್ನ ಬಂಡಿಯ ಮೇಲೆ ತುಂಬಿಸಿಕೊಂಡು ಪರಿಚಯಸ್ಥ ರೈತರ ತಿಪ್ಪೆಗಳಿಗೆ ಸುರಿಯುತ್ತಾನೆ. ನಂತರ ತಿಪ್ಪೆಯ ಮಾಲೀಕರು ನೀಡುವ  ಊಟವನ್ನು ಮನೆಗೆ ಕೊಂಡೊಯ್ದು ತನ್ನ ತಾಯಿಯೊಂದಿಗೆ ಹಂಚಿಕೊಂಡು ಊಟ ಮಾಡುವುದು ಈತನ ದಿನಚರಿ.

ದೈಹಿಕ ಅಂಗವೈಕಲ್ಯದ ನಡುವೆಯೂ ಅನ್ನಕ್ಕಾಗಿ ಶ್ರಮಿಸುವ ಬಸವರಾಜನ ಬಗ್ಗೆ   ಹೊಳಲು, ಮೈಲಾರ, ಕುರುವತ್ತಿ ಗ್ರಾಮಗಳಲ್ಲಿ ಜನತೆ ಅನುಕಂಪದೊಂದಿಗೆ ಪ್ರೀತಿಯನ್ನೂ ಧಾರೆ ಎರೆಯುತ್ತಾರೆ. ಈತನ ಸ್ಥಿತಿಗೆ ಮರುಗಿ ಅನ್ನ, ಬಟ್ಟೆ ನೀಡುತ್ತಾರೆ.

‘ಓದು ಬರಹ ಗೊತ್ತಿಲ್ಲದ ನನಗೆ ಯಾರೂ ಕೆಲಸ ಕೊಡೂದಿಲ್ಲ. ಕೊಟ್ಟರೂ ಮಾಡುವ ಸ್ಥಿತಿಯಲ್ಲಿ ನಾನಿಲ್ಲ. ಕುಳಿತು ಉಣ್ಣಲು ಮನಸ್ಸಿಲ್ಲ. ದೈಹಿಕವಾಗಿ ತೊಂದರೆಯಾದರೂ ಸರಿಯೇ, ಸಾಧ್ಯವಾದಷ್ಟು ಸಗಣಿ ಸಂಗ್ರಹಿಸಿಕೊಟ್ಟು ಊಟ ಕೇಳ್ತೇನೆ. ಯಾರೂ ಇಲ್ಲ ಅನ್ನೋದಿಲ್ಲ. ತಾಯಿನೂ ಕೂಲಿ ಕೆಲಸಕ್ಕೆ ಹೋಗಿ ಬರ್ತಾಳೆ. ಯಾರಿಗೂ ಹೊರೆಯಾಗ್ದೇ ಬದುಕುತ್ತೇನೆ’ ಎಂದು ಬಸವರಾಜ ಸ್ವಾಭಿಮಾನದಿಂದ ಹೇಳಿಕೊಳ್ಳುತ್ತಾನೆ.

ಸರ್ಕಾರದಿಂದ ಮಾಸಾಶನ ಹೊರತುಪಡಿಸಿ ಈತನಿಗೆ ಬೇರೆ ಸೌಲಭ್ಯ ಸಿಕ್ಕಿಲ್ಲ. ಅಂಗವಿಕಲರ ಕೋಟಾದಡಿ ಆಶ್ರಯ ಮನೆ  ಬೇಡಿದರೂ ಸ್ಪಂದನೆ ದೊರೆತಿಲ್ಲ. ‘ರಾಜಕಾರಣದಲ್ಲಿ ಉನ್ನತ ಸ್ಥಾನದಲ್ಲಿದ್ದವರು ಕಿಂಚಿತ್‌ ಸಹಾಯ ಮಾಡಿಲ್ಲ. ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು  ಬಸವರಾಜ ತನ್ನ ನೋವು ತೋಡಿಕೊಳ್ಳುತ್ತಾನೆ.

ದೈಹಿಕ ವೇದನೆಯ ನಡುವೆಯೂ ಸ್ವಾಭಿಮಾನದಿಂದ ಬದುಕಬೇಕೆಂಬ ಹಂಬಲದ ಈತನ ತತ್ವ ಎಲ್ಲ ಅಂಗಗಳು ಸರಿಯಿದ್ದೂ ಸೋಮಾರಿಯಾಗಿ ಬದುಕುವವರಿಗೆ ಪಾಠದಂತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT