ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್ ಅನುಪಸ್ಥಿತಿ ಕಾಡಲಿದೆ: ಕುಂಬ್ಳೆ

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ವೇಳೆ ಭಾರತ ತಂಡಕ್ಕೆ ಸಚಿನ್ ತೆಂಡೂಲ್ಕರ್ ಅವರ ಅನುಪಸ್ಥಿತಿ ಕಾಡಲಿದೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನದಿಂದ ಸಚಿನ್ ಎಲ್ಲ ಪ್ರಮುಖ ಟೂರ್ನಿಗಳಲ್ಲಿ ಆಡಿದ್ದಾರೆ. ಆದರೆ ಇದೀಗ ಅವರ ಅನುಪಸ್ಥಿತಿಯಲ್ಲಿ ಭಾರತ ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಯೊಂದರಲ್ಲಿ ಆಡುತ್ತಿದೆ.

`ಆದರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುವ ಮಹೇಂದ್ರ ಸಿಂಗ್ ದೋನಿ ಬಳಗ ಸಾಕಷ್ಟು ಯುವ ಪ್ರತಿಭೆಗಳನ್ನು ಒಳಗೊಂಡಿದೆ. ತಂಡದಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು' ಎಂದು ಮಾಜಿ ಆಟಗಾರ ತಿಳಿಸಿದ್ದಾರೆ. ಸಚಿನ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಪ್ರಕಟಿಸಿದ ಬಳಿಕ ಭಾರತ ಆಡುತ್ತಿರುವ ಮೊದಲ ಐಸಿಸಿ ಟೂರ್ನಿ ಇದಾಗಿದೆ.

`ಸಚಿನ್ ಅನುಪಸ್ಥಿತಿಯಲ್ಲಿ ಆಡುವುದು ಸುಲಭವಲ್ಲ. ಆದರೆ ಭಾರತ ತಂಡ ಸಮತೋಲನದಿಂದ ಕೂಡಿದೆ. ಸಚಿನ್ ಇಲ್ಲದ ಭಾರತ ತಂಡ ಐಸಿಸಿಯ ಪ್ರಮುಖ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಆಡಲಿದೆ. ದೋನಿ ಬಳಗ ಉತ್ತಮ ಪ್ರದರ್ಶನ ನೀಡಿದ ದಾಖಲೆ ಹೊಂದಿದೆ ಎಂದು ನಾನು ದೃಢವಾಗಿ ನಂಬುವೆ. ಇಂಗ್ಲೆಂಡ್‌ನಲ್ಲೂ ತಂಡ  ಚೆನ್ನಾಗಿ ಆಡಲಿ' ಎಂದು ಕುಂಬ್ಳೆ ನುಡಿದಿದ್ದಾರೆ.

ವಿಶ್ವ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಪ್ರಭಾವದ ಬಗ್ಗೆ ವಿವರಿಸಿದ ಕುಂಬ್ಳೆ, `ಸಚಿನ್ ಅವರ ಸ್ಥಾನವನ್ನು ತುಂಬುವುದು ಸುಲಭವಲ್ಲ. ಅಂಗಳದಲ್ಲಿ ಅವರು ತೋರಿದ ಸಾಧನೆ ಅಪಾರ. ಈ ಮೂಲಕ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ.' ಎಂದರು.

`ಸಚಿನ್ ಅವರು ಕಣಕ್ಕಿಳಿದಾಗ ಕ್ರೀಡಾಂಗಣದ ವಾತಾವರಣವೇ ಬದಲಾಗುತ್ತಿತ್ತು. ಎಲ್ಲೇ ಆಗಲಿ, ಅವರ ಆಟವನ್ನು ನೋಡಲು ಜನರು ಆಗಮಿಸುತ್ತಿದ್ದರು. ಆದರೆ ಈ ಬಾರಿ ಇಂಗ್ಲೆಂಡ್‌ನ ಜನತೆ ಸಚಿನ್ ಆಟವನ್ನು ನೋಡುವ ಅವಕಾಶ ಕಳೆದುಕೊಳ್ಳಲಿದ್ದಾರೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT