ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್ ಎಡಗೈ ಬ್ಯಾಟಿಂಗ್!

Last Updated 23 ಫೆಬ್ರುವರಿ 2011, 18:15 IST
ಅಕ್ಷರ ಗಾತ್ರ

ಬೆಂಗಳೂರು: ನೆಟ್ಸ್‌ನಲ್ಲಿ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಮಾಡುತ್ತಿದ್ದರು. ಎಲ್ಲರಿಗೂ ಮನದಲ್ಲಿ ಗಲಿಬಿಲಿ. ‘ಲಿಟಲ್ ಚಾಂಪಿಯನ್’ ಎಡಗೈ ಬ್ಯಾಟ್ಸ್‌ಮನ್ ಆಗಿದ್ದಾರಾ...?

ಹೀಗೆ ಯೋಚನೆಯೊಂದು ಭಾರಿ ಸಂಖ್ಯೆಯಲ್ಲಿ ಸೇರಿದ್ದ ಮಾಧ್ಯಮದವರು ಹಾಗೂ ಪತ್ರಕರ್ತರ ಮನದೊಳಗೆ ಪುಟಿದೆದ್ದಿತು. ತಕ್ಷಣ ಮಾಧ್ಯಮದವರ ನಡುವೆ ಚುರುಕಿನ ಮಾತು. ‘ನೋಡಿ ತೆಂಡೂಲ್ಕರ್ ಎಡಗೈಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ’ ಎಂದು ಒಬ್ಬರನ್ನೊಬ್ಬರು ತಟ್ಟಿ ನೆಟ್ಸ್ ಕಡೆಗೆ ಬೆರಳು ತೋರಿಸಿದರು.

ಇಂಗ್ಲೆಂಡ್ ವಿರುದ್ಧ ಫೆಬ್ರುವರಿ 27ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್‌ನ ‘ಬಿ’ ಗುಂಪಿನ ಲೀಗ್ ಪಂದ್ಯಕ್ಕಾಗಿ ಉದ್ಯಾನನಗರಿಯಲ್ಲಿ ತಾಲೀಮು ನಡೆಸಿರುವ ಭಾರತ ತಂಡದಲ್ಲಿ ಸಚಿನ್ ಎದ್ದು ಕಾಣಿಸಿದ್ದು ಸಹಜ. ಬುಧವಾರವಂತೂ ಅವರು ಮಾಧ್ಯಮದವರು ಬೆರಗಾಗಿ ನೋಡುವಂತೆಯೂ ಮಾಡಿದರು.

ಮೊದಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನೆಟ್ಸ್‌ಗಳಲ್ಲಿ ಮಹೇಂದ್ರ ಸಿಂಗ್ ದೋನಿ ಪಡೆಯ ಆಟಗಾರರು ಅಭ್ಯಾಸ ಮಾಡಿದರು. ಆನಂತರ ಪಂದ್ಯ ನಡೆಯುವ ಅಂಗಳದಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಆಡುವುದಕ್ಕೆ ಮುಂದಾದರು. ತಂಡದಲ್ಲಿರುವ ಎಲ್ಲರೂ ಅಂಗಳದಲ್ಲಿ ಕಸರತ್ತು ನಡೆಸಿದರು. ನಂತರ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯ ತಂತ್ರಗಳನ್ನು ತಿದ್ದಿಕೊಳ್ಳುವ ಕಾಯಕದಲ್ಲಿ ತೊಡಗಿದರು.

ಆದರೆ ಇದೆಲ್ಲದರ ನಡುವೆ ಗಮನ ಸೆಳೆದಿದ್ದು ಮಾತ್ರ ಸಚಿನ್ ನೆಟ್ಸ್‌ನಲ್ಲಿ ತಮ್ಮ ಶೈಲಿಗೆ ವಿರುದ್ಧವಾದ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ್ದು. ಅವರು ನೆಟ್ಸ್‌ನಲ್ಲಿ ಬಲಗೈ ಬದಲಾಗಿ ಎಡಗೈಯಲ್ಲಿ ಬ್ಯಾಟಿಂಗ್ ಮಾಡಿದರು. ತಂಡದಲ್ಲಿರುವ ವೇಗಿಗಳು ಹಾಗೂ ಸ್ಪಿನ್ನರ್‌ಗಳಲ್ಲದೇ ಸ್ಥಳೀಯ ಯುವ ಬೌಲರ್‌ಗಳ ಎಸೆತಗಳನ್ನೂ ನಿರಾತಂಕವಾಗಿ ಎದುರಿಸಿದರು. ಎಡಗೈಯಲ್ಲಿ ಬ್ಯಾಟಿಂಗ್ ಮಾಡುವುದು ಕೂಡ ಅವರಿಗೆ ಸಲೀಸು ಎಂದು ಆ ಕ್ಷಣದಲ್ಲಿ ಅನಿಸಿದ್ದು ಸಹಜ.

ಇನ್ನೊಂದು ವಿಚಿತ್ರವೆಂದರೆ ತೆಂಡೂಲ್ಕರ್ ಅಭ್ಯಾಸದ ಮೊದಲ ಕೆಲವು ಎಸೆತಗಳನ್ನು ಯಾವುದೇ ಸುರಕ್ಷಾ ಕವಚಗಳನ್ನು ಧರಿಸದೆಯೇ ಎದುರಿಸಿದರು. ಅಷ್ಟು ಹೊತ್ತಿಗಾಗಲೇ ತಂಡದ ಇತರ ಆಟಗಾರರು ಪ್ಯಾಡ್ ಕಟ್ಟಿಕೊಂಡು ಕೆಲವು ನಿಮಿಷ ಬ್ಯಾಟಿಂಗ್ ಮಾಡಿದ್ದರು. ತಾವು ಎದುರಿಸಿದ ಮೊದಲ ಎಸೆತದಲ್ಲಿಯೇ ಚೆಂಡನ್ನು ಕ್ರೀಡಾಂಗಣದ ಇನ್ನೊಂದು ತುದಿಯಲ್ಲಿನ ಗಡಿಯಾಚೆ ಅಟ್ಟಿದರು. ಆನಂತರ ಒಂದರ ಹಿಂದೆ ಒಂದು ಎಸೆತದಲ್ಲಿ ಚೆಂಡನ್ನು ಸಿಕ್ಸರ್‌ಗೆ ಎತ್ತಿದರು. ಆಗ ಪಕ್ಕದಲ್ಲಿಯೇ ನಿಂತಿದ್ದ ಯೂಸುಫ್ ಪಠಾಣ್ ಹಾಗೂ ಎಸ್.ಶ್ರೀಶಾಂತ್ ಅವರು ಇಷ್ಟಗಲ ಕಣ್ಣರಳಿಸಿ ಚೆಂಡನ್ನು ನೋಡಿದರು.

ನಿತ್ಯ ಬದುಕಿನ ಚಟುವಟಿಕೆಗಳಲ್ಲಿ ಎಡಗೈಯನ್ನೇ ಹೆಚ್ಚಾಗಿ ಬಳಸುವ ಸಚಿನ್ ‘ಲೆಫ್ಟ್ ಹ್ಯಾಂಡರ್’ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಬ್ಯಾಟಿಂಗ್ ಮಾಡುವುದು ಮಾತ್ರ ಬಲಗೈಯಲ್ಲಿ. ಇತ್ತೀಚೆಗೆ ಬಲಗಾಲು ಮಂಡಿಗೆ ಗಾಯವಾಗಿದ್ದರಿಂದ ಆ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡಿದ್ದಾರೆ. ಆದ್ದರಿಂದ ಬಲಗಾಲನ್ನು ಹೆಚ್ಚುಹೊತ್ತು ಊರಿ ನಿಂತು ಒತ್ತಡ ಹೆಚ್ಚು ಬೀಳುವಂತೆ ಮಾಡಬಾರದು ಎನ್ನುವುದು ‘ಮಾಸ್ಟರ್ ಬ್ಲಾಸ್ಟರ್’ ಉದ್ದೇಶವಾಗಿತ್ತು ಎನ್ನುವುದು ಸ್ಪಷ್ಟ. ಆದ್ದರಿಂದಲೇ ಎಡಗಾಲಿನ ಮೇಲೆ ಭಾರವನ್ನು ಹಾಕಿ ನಿಂತುಕೊಂಡು ಸಾಕಷ್ಟು ಹೊತ್ತು ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿದರು. ಎಡಗೈ ಬ್ಯಾಟ್ಸ್‌ಮನ್ ಆಗಿ ಎದುರಿಸಿದ ಮೊದಲ ಎಂಟು ಎಸೆತಗಳಲ್ಲಿ ಸಚಿನ್ ಒಂದನ್ನು ಮಾತ್ರ ಹೊಡೆಯುವಲ್ಲಿ ವಿಫಲರಾದರು. ಬಾಕಿ ಏಳು ಎಸೆತಗಳಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT