ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್ ಮೆಚ್ಚುಗೆ, ದೋನಿ ಬೌಲ್ಡ್!

ನೆಟ್ಸ್‌ನಲ್ಲಿ ಅಂತರರಾಷ್ಟ್ರೀಯ ಆಟಗಾರರಿಗೆ ಒಂದು ಕೈ ಇಲ್ಲದ ಗುರುದಾಸ್ ಬೌಲಿಂಗ್
Last Updated 12 ಡಿಸೆಂಬರ್ 2012, 19:50 IST
ಅಕ್ಷರ ಗಾತ್ರ

ನಾಗಪುರ: ಈ ಹುಡುಗನಿಗೆ ಒಂದು ಕೈ ಇಲ್ಲ. ಆದರೆ ಜಾಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ಅಂತರರಾಷ್ಟ್ರೀಯ ಆಟಗಾರರ ಚಿತ್ತ ಹರಿಯುತ್ತಿದ್ದು ಈ ಹುಡುಗನತ್ತ.

ಸಚಿನ್, ದೋನಿ ಸೇರಿದಂತೆ ಅಭ್ಯಾಸದ ವೇಳೆ     ನೆಟ್ಸ್‌ನಲ್ಲಿ ತಮಗೆ ಬೌಲಿಂಗ್ ಮಾಡಲು ಆ ಹುಡುಗನಿಗೆ ಪದೇಪದೇ ಹೇಳುತ್ತಿದ್ದರು. ಆತನ ಎಸೆತಗಳಿಗೆ ಸಚಿನ್ ಶಹಬ್ಬಾಸ್ ಎನ್ನುತ್ತಿದ್ದರೆ, ದೋನಿ ಒಮ್ಮೆ ಬೌಲ್ಡ್ ಆಗಿಬಿಟ್ಟರು.

ಆ ಹುಡುಗನ ಹೆಸರು ಗುರುದಾಸ್ ರಾವುತ್. ಭಾರತದ ಆಟಗಾರರು ಚಪ್ಪಾಳೆ ತಟ್ಟಿ ರಾವುತ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಏಕೆ? ಇಂಗ್ಲೆಂಡ್ ತಂಡದ ನಾಯಕ ಕುಕ್ ಅವರಿಗೂ ಗುರುದಾಸ್ ಒಂದು ಓವರ್ ಬೌಲ್ ಮಾಡಿದರು. ಮೂರು ಎಸೆತವನ್ನು ಹೊರ ಹೋಗಲು ಬಿಟ್ಟ ಕುಕ್ ನಿಂತಲ್ಲೇ ತಮ್ಮ ಬ್ಯಾಟ್‌ಗೆ ಕೈಯಿಂದ ಬಡಿದು ಆ ಅಂಗವಿಕಲ ಬೌಲರ್‌ನತ್ತ ಮೆಚ್ಚುಗೆಯ ನಗು ಸೂಸಿದರು.

ಅಂದಹಾಗೆ, ಗುರುದಾಸ್ ಭಾರತ ಅಂಗವಿಕಲರ ತಂಡದ ನಾಯಕ ಕೂಡ. ಹುಟ್ಟಿನಿಂದಲೇ ಇವರಿಗೆ ಎಡಗೈ ಇಲ್ಲ. ಆದರೆ ಸಾಧನೆ ಮಾಡಬೇಕು ಎಂಬ ಛಲ ಹಾಗೂ ಆಟದ ಪ್ರೀತಿಗೆ ಆ ಅಂಗವೈಕಲ್ಯ ಸ್ವಲ್ಪವೂ ಅಡ್ಡಿಯಾಗುತ್ತಿಲ್ಲ. ಇವರು ಸಮರ್ಥ ಕ್ರಿಕೆಟಿಗರೊಂದಿಗೂ ಆಡುತ್ತಾರೆ. ಇವರ ತಂದೆ ನಾಗಪುರದ ಸಮೀಪದ ಹಳ್ಳಿಯೊಂದರಲ್ಲಿ ಕೂಲಿ ಕಾರ್ಮಿಕರು.

`ನಾನು 2011ರ ವಿಶ್ವಕಪ್ ವೇಳೆ ಕೂಡ ಭಾರತ ತಂಡದ ಆಟಗಾರರಿಗೆ ನೆಟ್ಸ್‌ನಲ್ಲಿ ಬೌಲ್ ಮಾಡಿದ್ದೆ. ಈ ಬಾರಿಯೂ ಬೌಲ್ ಮಾಡಲು ಆಗಮಿಸುವಂತೆ ನನಗೆ ಆಹ್ವಾನ ನೀಡಿದ್ದರು. ನನ್ನ ಈ ಸಾಧನೆ ಬಗ್ಗೆ ಖುಷಿ ಇದೆ. ನನ್ನತ್ತ ಈಗ ಎಲ್ಲರೂ ಗಮನ ಹರಿಸುತ್ತಿದ್ದಾರೆ' ಎಂದು ಗುರುದಾಸ್ `ಪ್ರಜಾವಾಣಿ'ಗೆ ತಿಳಿಸಿದರು.

`ಚಿಕ್ಕಂದಿನಲ್ಲಿ ನಾನು ಹಲವು ಬಾರಿ ಅವಮಾನಕ್ಕೆ ಒಳಗಾಗ್ದ್ದಿದೆ. ನನ್ನನ್ನು ನಿಂದಿಸಿದವರಿಗೆ ಏನಾದರೂ ಸಾಧನೆಯ ಮೂಲಕವೇ ಉತ್ತರ ಹೇಳಬೇಕೆಂದು ಕ್ರಿಕೆಟ್ ಆಡಲು ಮುಂದಾದೆ' ಎಂದು ಹೇಳಿದರು.

ಎಲ್ಲಕ್ಕಿಂತ ಮುಖ್ಯವಾಗಿ ಇವರು ಗಮನ ಸೆಳೆದಿದ್ದು ಗಂಭೀರ್ ಅವರನ್ನು ಔಟ್ ಮಾಡಿದ ರೀತಿ. ತಮ್ಮ ಬೌಲಿಂಗ್‌ನಲ್ಲಿ ಗಂಭೀರ್ ಬಾರಿಸಿದ ಚೆಂಡನ್ನು ರಾವುತ್ ಅತ್ಯುತ್ತಮವಾಗಿ ಒಂದೇ ಕೈಯಲ್ಲಿ ಕ್ಯಾಚ್ ಪಡೆದರು. ಆಗ ಕೆಲ ಆಟಗಾರರು ಗುರುದಾಸ್ ಬೆನ್ನು ತಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT