ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್ ಹೊಡೆದ ಆ 200...

Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮೈಸೂರು: ಅರಮನೆಗಳ ನಗರಿ ಗ್ವಾಲಿಯರ್‌ನ ಆ ಸಂಜೆಯನ್ನು ಮರೆಯಲು ಸಾಧ್ಯವೇ ಇಲ್ಲ. 2010ರ ಫೆಬ್ರುವರಿ 24ರ ಆ ಸಂಜೆ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿತ್ತು. ಅವತ್ತು ಗ್ವಾಲಿಯರ್‌ನ ಕ್ಯಾಪ್ಟನ್ ರೂಪಸಿಂಗ್ ಮೈದಾನದಲ್ಲಿ  ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ `ದ್ವಿಶತಕ' ಗಳಿಸಿದ ಆ ಅಪರೂಪದ ಕ್ಷಣ ಭೂಮಿ ಮೇಲೆ ಕ್ರಿಕೆಟ್ ಇರುವವರೆಗೂ ನೆನಪಾಗಿ ಉಳಿಯುತ್ತದೆ. ಆ ಆಟಕ್ಕೆ `ಪ್ರಜಾವಾಣಿ' ಪತ್ರಿಕೆ ಕೂಡ ಸಾಕ್ಷಿಯಾಗಿತ್ತು.

ಅಂದು ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಬಳಗದ ವಿರುದ್ಧ ಅಜೇಯ 200 ರನ್ ಗಳಿಸುವ ಹಾದಿಯಲ್ಲಿ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಾಲಿಲ್ಲ. ಎರಡು ದಿನ ಮೊದಲು ಧೋ ಎಂದು ಸುರಿದಿದ್ದ ಮಳೆಯಿಂದಾಗಿ ಪಂದ್ಯ ನಡೆಯುವ ಬಗ್ಗೆ ಸ್ಥಳೀಯರಲ್ಲಿ ಅನುಮಾನ ಮೂಡಿತ್ತು. ಆದರೆ, ಸಚಿನ್ ಬ್ಯಾಟಿಂಗ್ ಆರಂಭಿಸಿದ ಕ್ಷಣದಿಂದ ರನ್‌ಗಳ ಮಳೆ ಸುರಿಯಿತು. 

ದ್ವಿಶತಕ ಗಳಿಸಲು ಇಟ್ಟ ಒಂದೊಂದು ಹೆಜ್ಜೆಯೂ ರೋಚಕ. ಕೇವಲ 147 ಎಸೆತಗಳಲ್ಲಿ ಪೂರೈಸಿದ 200 ರನ್‌ಗಳಲ್ಲಿ 25 ಬೌಂಡರಿ, 3 ಸಿಕ್ಸರ್‌ಗಳು ಸ್ಫೋಟಗೊಂಡಿದ್ದವು. ಇಲ್ಲಿ ಇನ್ನೊಂದು ವಿಶೇಷವೆಂದರೆ ತಾವು ಎದುರಿಸಿದ ಒಟ್ಟು 147 ಎಸೆತಗಳಲ್ಲಿ 56 ಬಾರಿ ಒಂಟಿ ರನ್ ತೆಗೆದಿದ್ದಾರೆ. 2 ರನ್ ಪಡೆದದ್ದು 13 ಬಾರಿ ಮಾತ್ರ. ಉಳಿದಂತೆ ಬೌಂಡರಿಗಳಿಂದ 100 ಮತ್ತು ಸಿಕ್ಸರ್‌ಗಳಿಂದ 18 ರನ್‌ಗಳ ಗಳಿಕೆಯಾಗಿತ್ತು. ಉಳಿದ 51 ಎಸೆತಗಳಲ್ಲಿ ಅವರು ರನ್ ಪಡೆದೇ ಇರಲಿಲ್ಲ.

ಎರಡು ಸತತ ಬೌಂಡರಿ ಮೂಲಕ ಖಾತೆ ತೆರೆದ ಲಿಟಲ್ ಮಾಸ್ಟರ್, ಮೊದಲ ಅರ್ಧಶತಕ ಪೂರೈಸಿದ್ದು  37 ಎಸೆತಗಳಲ್ಲಿ, ಎರಡನೆಯದ್ದು 53 ಎಸೆತಗಳಲ್ಲಿ, ಮೂರನೆಯದ್ದು 28ರಲ್ಲಿ ಮತ್ತು ನಂತರದ್ದು 29 ಎಸೆತಗಳಲ್ಲಿ. 90 ಎಸೆತಗಳಲ್ಲಿ. ಅಂದರೆ ಮೊದಲ ಶತಕ ಮತ್ತು ನಂತರದ 100 ರನ್ನುಗಳು ಬಂದಿದ್ದು ಕೇವಲ 57ಎಸೆತಗಳಲ್ಲಿ!

ಅವರ ರನ್ ಗಳಿಕೆಯ ವೇಗ ಏರಿದಂತೆ ಮೈದಾನದ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ, ಮಾಧ್ಯಮ ಕೇಂದ್ರದಲ್ಲಿದ್ದ, ಟಿವಿಗಳ ಮುಂದೆ ಕುಳಿತಿದ್ದ ಕೋಟಿ ಕೋಟಿ ಜನರ ಎದೆಬಡಿತವೂ ಏರಿತ್ತು. ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ 194 ರನ್ ಗಳಿಸಿದ್ದ ಜಿಂಬಾಬ್ವೆಯ ಕೋವೆಂಟ್ರಿಯ ದಾಖಲೆಯನ್ನು ದಾಟಿದ ನಂತರ ಸಚಿನ್ ಗಳಿಸಿದ ಒಂದೊಂದು ರನ್‌ಗೂ ಕೋಟಿ ಕೋಟಿ ಹೃದಯಗಳ ಬಡಿತದ ಸದ್ದು ಪ್ರತಿಧ್ವನಿಸಿತ್ತು. ಇನ್ನೊಂದು ಕಡೆ ರನ್‌ಗಳನ್ನು ಮೊಗೆಯುತ್ತಿದ್ದ ದೋನಿ ತಂಡದ ಮೊತ್ತ 400ರ ಗಡಿಯತ್ತ ಒಯ್ಯುತ್ತಿದ್ದರು. ಕೊನೆಗೂ ಆ ಕ್ಷಣ ಬಂದೇ ಬಿಟ್ಟಿತು. ಕೊನೆಯ ಓವರಿನ ಮೂರನೇ ಎಸೆತವನ್ನು  ಪಾಯಿಂಟ್‌ನತ್ತ ತಳ್ಳಿದ ಸಚಿನ್ ಒಂದು ರನ್ ಪೂರೈಸಿದಾಗ ಇಡೀ ಜಗತ್ತೇ ಸಲಾಮು ಹೊಡೆಯಿತು.

ಕೈ ಅಗಲಿಸಿ ಆಕಾಶದತ್ತ ನೋಡಿ ದೇವರಿಗೆ ವಂದಿಸಿ ಮತ್ತೆ ತಲೆಗೆ ಹೆಲ್ಮೆಟ್ ಹಾಕಿಕೊಂಡಾಗ ಅದರ ಮೇಲಿನ ತ್ರಿವರ್ಣ ಧ್ವಜದಿಂದ ಹೆಮ್ಮೆಯ ಹೊಳಪು ಹೊರಸೂಸುತ್ತಿತ್ತು. ಆದರೆ ನಂತರದ ಒಂದೂವರೆ ವರ್ಷದಲ್ಲಿಯೇ ಇಂದೋರ್‌ನಲ್ಲಿ ವೆಸ್ಟ್‌ಇಂಡೀಸ್ ತಂಡದ ವಿರುದ್ಧದ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಸಚಿನ್ ದಾಖಲೆಯನ್ನು ಮೀರಿ ನಿಂತರು.

ಸಚಿನ್‌ಗೆಸಂದ ಪ್ರಮುಖಗೌರವ
*2011ರ ಏಕದಿನ ವಿಶ್ವಕಪ್‌ಚಾಂಪಿಯನ್‌ಷಿಪ್

* 2003 ವಿಶ್ವಕಪ್‌ನಲ್ಲಿ`ಟೂರ್ನಿ ಶ್ರೇಷ್ಠ'
* ಲಂಡನ್‌ನ ಮೇಡಂ ಟುಸಾಡ್ಸ್‌ನಲ್ಲಿ ಮೇಣದ ಪ್ರತಿಮೆ
* ಪದ್ಮವಿಭೂಷಣ (2010)
*ರಾಜೀವ್ ಗಾಂಧಿ `ಖೇಲ್ ರತ್ನ'(1997-98)
* 2007ರ ವಿಸ್ಡನ್‌ವರ್ಷದ ಕ್ರಿಕೆಟಿಗ
*2010ರ ಜನರ ನೆಚ್ಚಿನವಿಶ್ವ ಆಟಗಾರ
*ಭಾರತೀಯ ವಾಯುಪಡೆಯಗೌರವ ಗ್ರೂಪ್ ಕ್ಯಾಪ್ಟನ್
* ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ವಿವಿಗಳಿಂದ ಗೌರವ ಡಾಕ್ಟರೇಟ್...

ಏಕದಿನದ ದಾಖಲೆಗಳು
*ಅತಿ ಹೆಚ್ಚು ಪಂದ್ಯ (463)

* ಅತಿ ಹೆಚ್ಚು ರನ್ (18426)
*ಅತಿ ಹೆಚ್ಚು ಶತಕ (49)
*ದ್ವಿಶತಕ ಬಾರಿಸಿದ ಪ್ರಥಮ ಬ್ಯಾಟ್ಸ್‌ಮನ್ (ಔಟಾಗದೆ 200)
*ದ್ರಾವಿಡ್ ಜೊತೆಗೂಡಿ 331 ರನ್ ಜೊತೆಯಾಟ
* ಅತಿ ಹೆಚ್ಚು ಪಂದ್ಯ ಶ್ರೇಷ್ಠ 
* ವಿಶ್ವಕಪ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT