ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್‌ಗೆ ತನ್ನೂರಲ್ಲಿ ನೂರರ ನೂರು?

Last Updated 20 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ: ತನ್ನೂರಲ್ಲಿ ಸಚಿನ್ ತೆಂಡೂಲ್ಕರ್ ನೂರರ ನೂರು ಸಾಧನೆ ಮಾಡುತ್ತಾರಾ?
ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಪುಟಿದೆದ್ದಿದೆ ಸವಾಲು. ನೂರನೇ ಅಂತರರಾಷ್ಟ್ರೀಯ ಶತಕ ಗಳಿಸುತ್ತಾರೆಂದು ಕಾಯುತ್ತಲೇ ಇನಿಂಗ್ಸ್‌ಗಳು ಸಾಲು ಸಾಲಾಗಿ ಕಳೆದು ಹೋದವು. ಆದರೂ ನಿರೀಕ್ಷೆ ಹಾಗೆಯೇ ಉಳಿದಿದೆ. ಬಹುಶಃ ತಮ್ಮ ಊರಲ್ಲಿಯೇ ಈ ದೊಡ್ಡ ಮೈಲಿಗಲ್ಲು ಮುಟ್ಟಬೇಕೆಂದು ಸಚಿನ್ ಕಾಯ್ದಿರಬಹುದು!

ತಮ್ಮ ನೆಚ್ಚಿನ ಹಾಗೂ ಮುಂಬೈನ ಮುದ್ದಿನ ಕ್ರಿಕೆಟಿಗ ಇಲ್ಲಿಯೇ ಶತಕ ಸಾಧನೆ ಮಾಡಿದರೆ ಅದು `ಮುಂಬೈಕರ್~ಗಳಿಗೆ ಭಾರಿ ಸಂತಸ. ತನ್ನೂರಲ್ಲಿಯೇ ತೆಂಡೂಲ್ಕರ್ ನೂರುಗಳ ಶತಕ ಪೂರೈಸಿದರೆನ್ನುವ ಹೆಮ್ಮೆ ಆಗ! ಆದರೆ ನೂರರ ಹೊಸ್ತಿಲಲ್ಲಿ ಯಾವಾಗಲೂ ಕಷ್ಟಪಡುವ ಈ ಬ್ಯಾಟ್ಸ್‌ಮನ್ ನೂರು ಅಂತರರಾಷ್ಟ್ರೀಯ ಶತಕಗಳ ಹಿರಿಮೆಯ ಗರಿಯನ್ನು ಕಿರೀಟಕ್ಕೆ ಸಿಕ್ಕಿಸಿಕೊಳ್ಳಲು ಪರದಾಡುತ್ತಿದ್ದಾರೆ. ಜೊತೆಗೆ ಅವರ ಮೇಲೆ ಅಭಿಮಾನಿಗಳು ಹಾಗೂ ಮಾಧ್ಯಮಗಳ ಒತ್ತಡ!

ಬಹುಶಃ `ಲಿಟಲ್ ಚಾಂಪಿಯನ್~ಗಿಂತ ಈ ಶತಕದಲ್ಲಿ ಭಾರಿ ಆಸಕ್ತಿ ಇರುವುದು ದೇಶದ ಕ್ರಿಕೆಟ್ ಪ್ರಿಯರಿಗೆ ಹಾಗೂ ದೇಶದ ಮಾಧ್ಯಮಗಳಿಗೆ. ಆದ್ದರಿಂದಲೇ ಭಾರತ ತಂಡದ ನಾಯಕ ದೋನಿ `ನಿಮಗೇ ಹೆಚ್ಚು ಆಸಕ್ತಿ. ಸಚಿನ್ ಮಾತ್ರ ಸಹಜವಾಗಿ ಆಡುತ್ತಿದ್ದಾರೆ. ಶತಕ ಬಂದಾಗ ನೋಡುವಾ~ ಎಂದು ಪತ್ರಕರ್ತರಿಗೆ ಉತ್ತರ ನೀಡಿದ್ದು!

ವಿಶ್ವಕಪ್ ಕ್ರಿಕೆಟ್‌ನಲ್ಲಿನ ಶತಕದ ನಂತರದಿಂದಲೇ ಇನ್ನೊಂದು ನೂರು `ಮಾಸ್ಟರ್ ಬ್ಲಾಸ್ಟರ್~ ಬ್ಯಾಟ್‌ನಿಂದ ಹರಿದು ಬರಲೆಂದು ಕಾಯಲಾಗಿದೆ. ಇಂಗ್ಲೆಂಡ್ ಪ್ರವಾಸವೂ ಹೀಗೆಯೇ ಕಳೆದು ಹೋಯಿತು. ಆನಂತರವೂ ಅದೇ ಪ್ರಲಾಪ. ಆದರೆ ಮುಂಬೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಕೂಡ ಹಾಗೆಯೇ ಕಳೆದು ಹೋಗದಿರಲಿ ಎನ್ನುವುದು `ಮಾಯಾ ನಗರಿ~ಯ ಜನರ ಆಶಯ.

ಒಂದು ವೇಳೆ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ತೆಂಡೂಲ್ಕರ್ ಮಹತ್ವದ ಮೈಲಿಗಲ್ಲು ಮುಟ್ಟಿದರೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ)ಗೆ ಅದೊಂದು ಅದ್ಭುತ ಕ್ಷಣ. ಆದ್ದರಿಂದಲೇ ಅದು ತನ್ನ ಕ್ರಿಕೆಟಿಗ ಐತಿಹಾಸಿಕ ಸಾಧನೆ ಮಾಡಿದಲ್ಲಿ ನೂರು ಚಿನ್ನದ ನಾಣ್ಯಗಳನ್ನು ನೀಡುವ ಯೋಚನೆ ಮಾಡಿದೆ. ಎಂಸಿಎ ಅಧ್ಯಕ್ಷ ವಿಲಾಸ್‌ರಾವ್ ದೇಶ್‌ಮುಖ್ ಅವರಂತೂ ಚಿನ್ನದಂಥ ಕ್ರಿಕೆಟಿಗನಿಗೆ ಬಂಗಾರದ ಉಡುಗೊರೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆಂದು ಎಂಸಿಎ ಜಂಟಿ ಕಾರ್ಯದರ್ಶಿ ನಿತಿನ್ ದಲಾಲ್ ಖಚಿತಪಡಿಸಿದ್ದಾರೆ.

ಹೀಗೆ ದೇಶದ ಹೆಮ್ಮೆಯ ಕ್ರಿಕೆಟಿಗನ ಮೇಲೆ ನಿರೀಕ್ಷೆಯ ಭಾರ ಹೆಚ್ಚುತ್ತಲೇ ಸಾಗಿದೆ. ಆದರೆ ಸಚಿನ್ ಮಾತ್ರ ತಣ್ಣಗಾಗಿದ್ದಾರೆ. ಕ್ರಿಕೆಟ್ ಕ್ಷೇತ್ರದಲ್ಲಿ ಅನೇಕ ದಾಖಲೆಗಳನ್ನು ಬರೆದಿರುವ ಅವರಿಗೆ ನೂರನೇ ಅಂತರರಾಷ್ಟ್ರೀಯ ಶತಕ `ಕೇವಲ ಒಂದು ಅಂಕಿ-ಸಂಖ್ಯೆಯ ಲೆಕ್ಕಾಚಾರ~ ಮಾತ್ರ. ಎಲ್ಲ ಕಡೆಯಿಂದ ಒತ್ತಡ ಹೆಚ್ಚಿರುವುದರಿಂದ ಆತಂಕಗೊಂಡಿಲ್ಲವೆಂದು ಕೂಡ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

`ನಾನಂತೂ ಆ ಬಗ್ಗೆ ಯೋಚನೆ ಮಾಡುತ್ತಿಲ್ಲ. ಉತ್ತಮ ಆಟವಾಡುವತ್ತ ಮಾತ್ರ ಗಮನ~ ಎಂದು ಮೇಲ್ಮಾತಿಗೆ ಎನ್ನುವಂತೆ ಹೇಳಿದ್ದರೂ ಅವರ ಮನದೊಳಗೆ ತಮ್ಮ ಅಭಿಮಾನಿಗಳ ಆಶಯ ಈಡೇರಿಸಬೇಕು ಎನ್ನುವ ತುಡಿತ ಇದೆ.

ಇಷ್ಟೊಂದು ಶತಕ ಗಳಿಸಿರುವ ಬ್ಯಾಟ್ಸ್‌ಮನ್‌ಗೆ ಇನ್ನೊಂದು ಅಂಥ ಇನಿಂಗ್ಸ್ ಕಷ್ಟವೇನಲ್ಲ. ಆದರೆ ಅದೇ ಸಾಧ್ಯವಾಗುತ್ತಿಲ್ಲ ಎನ್ನುವುದು ಸದ್ಯದ ಆತಂಕ. ಹೀಗೆ ಚಡಪಡಿಸುತ್ತಿರುವ ತಮ್ಮ ಬೆಂಬಲಿಗರಿಗೆ ಅವರು ನೀಡುವ ಉತ್ತರ ಮಾತ್ರ ಸರಳವಾದದ್ದು. `ಕ್ರಿಕೆಟ್ ಆಟವೇ ಶತಕ ಯಾವಾಗ ಎನ್ನುವುದನ್ನು ನಿರ್ಧರಿಸಲಿ~ ಎನ್ನುವುದು ಅವರ ಸ್ಪಷ್ಟ ನುಡಿ.

ತೊಂಬತ್ತನೇ ಬಾರಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರರ ಗಡಿ ಮುಟ್ಟಿದ್ದಾಗ ಯಾರೂ ಏನನ್ನೂ ಕೇಳಲಿಲ್ಲ. 99ನೇ ಶತಕ ಬಂದಾಗಲೂ ಹಾಗೆಯೇ ಆಯಿತು. ಆದರೆ ಈಗೇಕೆ ಹೀಗೆ ಎನ್ನುವುದು ಅವರ ಪ್ರಶ್ನೆ. `ಸಹಜವಾದ ಆಟದತ್ತ ಚಿತ್ತ~ ಕೇಂದ್ರೀಕರಿಸಿರುವ ಅವರು ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾಗಲಿರುವ ವಿಂಡೀಸ್ ವಿರುದ್ಧದ ಮೂರನೇ ಟೆಸ್ಟ್‌ಗಾಗಿ ನಿಶ್ಚಿಂತೆಯಿಂದ ಅಭ್ಯಾಸ ಮಾಡಿದರು. ಪತ್ರಕರ್ತರು ದುಂಬಾಲು ಬಿದ್ದರೂ `ಹಿಂದೆಯೇ ಎಲ್ಲ ಮಾತನಾಡಿದ್ದೇನಲ್ಲಾ~ ಎನ್ನುವ ಕೈಸನ್ನೆಯ ಉತ್ತರ.

ದೀರ್ಘ ಕಾಲದ ಕ್ರಿಕೆಟ್ ಜೀವನದಲ್ಲಿ ದೇಶದ ತಂಡಕ್ಕಾಗಿ ನೀಡಿರುವ ಕೊಡುಗೆಯಲ್ಲಿಯೇ ತೃಪ್ತಿ ಕಂಡಿರುವ ಈ ಅನುಭವಿ ಬ್ಯಾಟ್ಸ್‌ಮನ್ ಇತ್ತೀಚೆಗೆ ಮಾಧ್ಯಮಗಳಿಂದ ಬಹುದೂರ ಓಡುತ್ತಿದ್ದಾರೆ. ಅದಕ್ಕೆ ಕಾರಣ ಮತ್ತದೇ `ಶತಕದ ಪ್ರಶ್ನೆ~ ಎದುರಾಗುತ್ತದೆ ಎನ್ನುವ ಮುಜುಗರ. ಆದ್ದರಿಂದಲೇ ಅವರು ಮೌನವಾಗಿ    ನೆಟ್ಸ್‌ಗೆ ಬಂದು ಡ್ರೆಸಿಂಗ್ ಕೋಣೆ ಸೇರುತ್ತಾರೆ. `ಶತಕ ಬರಲಿ ಆನಂತರ ನೋಡೋಣ~ ಎಂದು ತಮ್ಮ ತಂಡದ ನಾಯಕ ದೋನಿ ಹೇಳಿದ ತತ್ವಕ್ಕೆ ಅಂಟಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ನ ಇಪ್ಪತ್ತೆರಡು ವರ್ಷ ಪೂರೈಸಿರುವ ತೆಂಡೂಲ್ಕರ್ ಇನ್ನೊಂದು ಶತಕ ಗಳಿಸಲೆನ್ನುವುದು ದೇಶದ ಕೋಟಿ ಕೋಟಿ ಕ್ರಿಕೆಟ್ ಪ್ರೇಮಿಗಳ ಹಾರೈಕೆ. ಮುಂಬೈನಲ್ಲಿಯೇ ಸಾಧ್ಯವಾಗಲೆನ್ನುವುದು ಮಾತ್ರ ಈ ಮಹಾನಗರಿಯ ಜನರ ಆಸೆ. ವಿಂಡೀಸ್ ತಂಡದವರಂತೂ `ನಮ್ಮೆದುರು ಆಡುವ ಸರಣಿಯಲ್ಲಿ ಬೇಡ~ ಎಂದು ದಿಟ್ಟ ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಯಾರ ಬಯಕೆ ನಿಜವಾಗುವುದೋ? ಈ ಎಲ್ಲ ಚರ್ಚೆಗಳಿಗೆ ಕಿವಿಗೊಡದ ಸಚಿನ್ ಮಾತ್ರ ತಣ್ಣಗಾಗಿದ್ದಾರೆ! ಮತ್ತೊಂದು ಶತಕ ಯಾವಾಗ ಎನ್ನುವುದನ್ನು ಕಾಲವೇ ನಿರ್ಧರಿಸಲೆಂದು ಅವರು ಮೌನಕ್ಕೆ ಶರಣಾಗಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT