ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಅಶೋಕ ಮೇಷ್ಟ್ರು ಆದಾಗ...

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿರುವ ಕೆಂಪೇಗೌಡ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ  ಗೃಹ ಸಚಿವ ಆರ್.ಅಶೋಕ ಅವರು  `ಸಾಮಾನ್ಯಜ್ಞಾನ~ ವಿಷಯದ ಕುರಿತು ಮಕ್ಕಳಿಗೆ ಪಾಠ ಮಾಡಿದರು!

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಗುರುವಾರ ಹಮ್ಮಿಕೊಂಡಿದ್ದ ಪ್ರಸಕ್ತ ವರ್ಷದ `ಶಾಲೆಗಾಗಿ ನಾವು- ನೀವು `ಕಾರ್ಯಕ್ರಮದಲ್ಲಿ ಸಚಿವರು ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಹಿಡಿದುಕೊಂಡು ಸಾಮಾನ್ಯ ಜ್ಞಾನ ಹಾಗೂ ಸಮಾಜ ವಿಜ್ಞಾನಕ್ಕೆ  ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಮಕ್ಕಳು ಚೂಟಿಯಿಂದ ಉತ್ತರಿಸಿದರು.

ಶಾಲೆಯಲ್ಲಿರುವ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಶೀಲಿಸಿದ ಅವರು, ಶಾಲೆಗೆ ಕಡ್ಡಾಯವಾಗಿ ಹಾಜರಾಗಲು ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸಲು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಪ್ರಮಾಣ ವಚನ ಬೋಧಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, `ಉನ್ನತ ವಿದ್ಯೆ ಗಳಿಸುವುದರಿಂದ ಮಾತ್ರ ವ್ಯಕ್ತಿಯೊಬ್ಬ ಸಮಾಜದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಮಕ್ಕಳೆಲ್ಲರೂ ಕನಿಷ್ಠ  ಹತ್ತನೇ ತರಗತಿಯವರೆಗಾದರೂ ವಿದ್ಯಾರ್ಜನೆ ಮಾಡಬೇಕು. ಈ ವಿಚಾರದಲ್ಲಿ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ~ ಎಂದು ಭರವಸೆ ನೀಡಿದರು.

`ನನ್ನ ವಿಧಾನಸಭಾ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳ ಮೂಲ ಸೌಕರ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಈ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಕೂಡಲೇ ಸೂಕ್ತ ವ್ಯವಸ್ಥೆ ಮಾಡಲಾಗುವುದು~ ಎಂದ ಅವರು, `ಟೊಯೋಟೊ ಕಂಪೆನಿ ವತಿಯಿಂದ ಒಟ್ಟು ನಾಲ್ಕು ಸಾವಿರ ಮಕ್ಕಳಿಗೆ ಸಮವಸ್ತ್ರ, ಶೂಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ~ ಎಂದು ಹೇಳಿದರು.

`ಮುಂದಿನ ವರ್ಷದಿಂದ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲಾಮಕ್ಕಳಿಗೆ ಪಠ್ಯಪುಸ್ತಕ ಜತೆಗೆ ನೋಟ್ ಪುಸ್ತಕವನ್ನು ವಿತರಿಸುವ ವ್ಯವಸ್ಥೆ ಮಾಡಬೇಕು. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬಿಬಿಎಂಪಿಯ  ಮೇಯರ್ ನಿಧಿಯಿಂದ ಅವರಿಗೆ ಶೈಕ್ಷಣಿಕ ವೆಚ್ಚ ಭರಿಸಲಾಗುವುದು~ ಎಂದು ಹೇಳಿದರು.

ಬಸ್ ನಿಲ್ದಾಣಕ್ಕೆ ಆಗ್ರಹ: ಕಾಂಪೌಂಡೇ ಇಲ್ಲದ ಈ ಶಾಲೆಯ ಆವರಣವು ಏಕಕಾಲದಲ್ಲಿ ಮಕ್ಕಳಿಗೆ ಆಟವಾಡುವ ಅಂಗಳ ಮತ್ತು ಬಿಎಂಟಿಸಿ ಬಸ್‌ಗಳ ನಿಲ್ದಾಣವಾಗಿ ಬಳಕೆಯಾಗುತ್ತಿದೆ. ಶಾಲೆಯ ಆವರಣದಲ್ಲಿ ಬಸ್ ನಿಲುಗಡೆಯಾಗುವುದರಿಂದ ಅಪಘಾತದಂತಹ ಪ್ರಕರಣಗಳು ಸಂಭವಿಸುವುದು ಸಹಜ. ಈ ಬಗ್ಗೆ ಕುಮಾರಸ್ವಾಮಿ ಬಡಾವಣೆಯ ಪೋಷಕ ಕೆಂಪಯ್ಯ ಅವರು ಸಚಿವರ ಗಮನ ಸೆಳೆದರು.
 
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, `ಶಾಲಾ ಆವರಣದಲ್ಲಿ ಬಸ್ ನಿಲುಗಡೆ ಮಾಡುವುದು ಸರಿಯಲ್ಲ. ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ನಿಲ್ದಾಣವನ್ನು ಬೇರೆ ಕಡೆಗೆ ವರ್ಗಾಯಿಸಿ, ಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಿಸಲು ಪಾಲಿಕೆಗೆ ಸೂಚನೆ ನೀಡಲಾಗುವುದು~ ಎಂದು ತಿಳಿಸಿದರು.

ಶಾಲೆಯಿಂದ ದೂರವಾಗಿದ್ದ ವಿಠಲ ನಗರದ ಮಹೀಂದ್ರಮ್ಮ, ಉತ್ತರಹಳ್ಳಿಯ ಜಯಶ್ರೀ ಮಕ್ಕಳನ್ನು ಶಾಲೆಗೆ ಸೇರ್ಪಡೆಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT