ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಆಚಾರ್ಯ ನಡೆದು ಬಂದ ಹಾದಿ

Last Updated 14 ಫೆಬ್ರುವರಿ 2012, 9:40 IST
ಅಕ್ಷರ ಗಾತ್ರ

ಬೆಂಗಳೂರು: ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ ಅವರು ಉಡುಪಿಯಲ್ಲಿ ವಿ. ಕಟ್ಟೆ ಶ್ರೀನಿವಾಸ ಆಚಾರ್ಯ ಹಾಗೂ ಕೃಷ್ಣವೇಣಿ ಅಮ್ಮ ದಂಪತಿಗೆ 1939ರಲ್ಲಿ ಜನಿಸಿದ್ದರು. ಓದಿನಲ್ಲಿ ಮುಂದಿದ್ದ ವಿ.ಎಸ್.ಆಚಾರ್ಯ 1959ರಲ್ಲಿ ಮಣಿಪಾಲದ ಕೆಎಂಸಿ ಕಾಲೇಜಿನಲ್ಲಿ ಉತ್ತಮ ಅಂಕಗಳೊಂದಿಗೆ ವೈದ್ಯ ಪದವಿ ಪಡೆದರು. ಈ ಸಂದರ್ಭದಲ್ಲಿ ಅವರು ಎರಡು ಬಾರಿ ಉತ್ತಮ ವಿದ್ಯಾರ್ಥಿ ಪ್ರಶಸ್ತಿಗೂ ಪಾತ್ರರಾಗಿದ್ದರು.

ನಂತರ ಸಮಾಜಸೇವಾ ಕ್ಷೇತ್ರಕ್ಕಿಳಿದ ಕೇವಲ ಒಂಬತ್ತು ವರ್ಷ(1968)ಗಳಲ್ಲಿ ಅವರು, 28ರ ಹರೆಯದಲ್ಲೇ  ಉಡುಪಿ ನಗರ ಸಭೆಯ ಅಧ್ಯಕ್ಷರಾಗಿ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. 

ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸ್ವರ್ಣ ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಾಯಿತು. ನಗರಸಭೆಗೆ ಸ್ವಂತ ಕಟ್ಟಡ ನಿರ್ಮಾಣವಾಯಿತು. ನಗರದ ರಸ್ತೆಗಳು ವಿಶಾಲವಾದವು ಹಾಗೂ ಡಾಂಬರು ಕಂಡವು. ಈ ಸಾಧನೆಗಳಿಗಾಗಿ ಅವರು ಎರಡು ಬಾರಿ ನಗರಸಭೆಗೆ ಆಯ್ಕೆಯಾಗಿದ್ದರು.

ಇದರ ಜತೆಯಲ್ಲಿ 1974ರಿಂದ 77ರವರೆಗೆ ಭಾರತೀಯ ಜನತಾ ಸಂಘದ ಜಿಲ್ಲಾಧ್ಯಕ್ಷರಾಗಿ ಹಾಗೂ  ಮುಂದಿನ ಹತ್ತು ವರ್ಷ (1977-1980)ಗಳ ಕಾಲ ಜಿಲ್ಲಾ ಜನತಾ ಪಾರ್ಟಿಯ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದಾರೆ. 1980ರಿಂದ 1983ರವರೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದರು. 1984ರಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದ ಅವರು,  ಇಪ್ಪತ್ತು ವರ್ಷಗಳ ಕಾಲ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಇದಕ್ಕೂ ಮೊದಲು, 1975-77ರಲ್ಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಡಾ.ವಿ.ಎಸ್.ಆಚಾರ್ಯ ಅವರನ್ನು 19 ತಿಂಗಳ ಕಾಲ ಸೆರೆಮನಲ್ಲಿಡಲಾಗಿತ್ತು. ಮುಂದೆ 1983ರಲ್ಲಿ ಮೊದಲ ಬಾರಿಗೆ ಅವರು ಉಡುಪಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು.

ಡಾ.ವಿ.ಎಸ್.ಆಚಾರ್ಯ ಅವರು ಕೈಗೊಂಡ ಹಲವು ಜನೋಪಯೋಗಿ ಕೆಲಸಗಳಲ್ಲಿ, ಸ್ವರ್ಣ ಎರಡನೇ ಹಂತದ ಯೋಜನೆ, ಭೂ ಸುಧಾರಣಾ ವಿವಾದಗಳ ಇತ್ಯರ್ಥಕ್ಕಾಗಿ ಪುರಸಭಾ ಆಡಳಿತದ ಮೇಲ್ಮನವಿ ಪ್ರಾಧಿಕಾರ ನಿರ್ದೇಶನಾಲಯ ಸ್ಥಾಪನೆ, ತುಂಡು ಭೂಮಿ ನೋಂದಣಿ ಕಾನೂನು ರದ್ದು, ಡೀಸಲ್ ಬಳಸುವ ಮೀನುಗಾರರಿಗೆ ತೆರಿಗೆ ವಿನಾಯಿತಿ, ತೆರಿಗೆ ಭರ್ತಿ ಹಾಗೂ ಭೂ ಪರಿವರ್ತನೆಗೆ ಸರಳ ಪ್ರಕ್ರಿಯೆ ಸೇರಿವೆ. 

ಉಡುಪಿ ಮಠದ ಪರ್ಯಾಯಕ್ಕೆ 10 ಲಕ್ಷ ರೂಪಾಯಿ ವಿಶೇಷ ಅನುಧಾನ, ಐದು ಪ್ರೌಢಶಾಲೆ ಹಾಗೂ ಮೂರು ಪ್ರಾಥಮಿಕ ಶಾಲೆ ಆರಂಭ, ನಾಲ್ಕು ಬೃಹತ್ ಸೇತುವೆಗಳ ನಿರ್ಮಾಣಕ್ಕೆ ಅವರ ಪರಿಶ್ರಮವೇ ಕಾರಣ. ದಕ್ಷಿಣ ಕನ್ನಡದಿಂದ ಉಡುಪಿಯನ್ನು ಬೇರ್ಪಡಿಸಿ ಸ್ವತಂತ್ರ ಜಿಲ್ಲೆ ರಚಿಸುವುದರ ಹಿಂದೆಯೂ ಡಾ.ವಿ.ಎಸ್.ಆಚಾರ್ಯ ಅವರ ಶ್ರಮವಿರುವುದನ್ನು ಮರೆಯಲಾಗದು.

1996ರಲ್ಲಿ ಡಾ.ವಿ.ಎಸ್.ಆಚಾರ್ಯ ಅವರು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು. 2002ರಲ್ಲಿ ಪರಿಷತ್ತಿಗೆ ಮರು ಆಯ್ಕೆಗೊಂಡರು.

2006ರಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಪಶು ಸಂಗೋಪನೆ ಸಚಿವರಾಗಿದ್ದಾಗ, ರಾಜ್ಯದಲ್ಲಿ ಒಂದೇ ವರ್ಷದಲ್ಲಿ ಆರು ಹೊಸ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಲಾಗಿತ್ತು. 2010ರಲ್ಲಿ ವೈದ್ಯಕೀಯ ಶಿಕ್ಷಣದ ಜತೆಗೆ ಮುಜರಾಯಿ ಇಲಾಖೆಯನ್ನೂ ಅವರಿಗೆ ವಹಿಸಿಕೊಡಲಾಗಿತ್ತು. ಮುಂದೆ 2011ರಲ್ಲಿ ಉನ್ನತ ಶಿಕ್ಷಣ, ಅಂಕಿಸಂಖ್ಯಾ ಇಲಾಖೆ, ಯೋಜನೆ, ಮುಜರಾಯಿ ಹಾಗೂ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವರಾಗಿಯೂ  ಅವರು ಕಾರ್ಯನಿರ್ವಹಿಸಿದ್ದರು.


ಕೌಟುಂಬಿಕ ಹಿನ್ನೆಲೆ:
ಡಾ.ವಿ.ಎಸ್.ಆಚಾರ್ಯ ಅವರ ಮಡದಿ ಶಾಂತಾ ವಿ. ಆಚಾರ್ಯ ಅವರೂ ಸಹ ಸಮಜಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಮುನ್ಸಿಪಲ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಮಕ್ಕಳಾದ ಡಾ. ರವಿರಾಜ್ ವಿ.ಆಚಾರ್ಯ, ಡಾ. ಕಿರಣ್ ವಿ.ಆಚಾರ್ಯ ಇಬ್ಬರೂ ಮಣಿಪಾಲ ವಿಶ್ವವಿದ್ಯಾಲಯದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT