ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಆಚಾರ್ಯ ನಿಧನಕ್ಕೆ ಗಣ್ಯರ ಸಂತಾಪ

Last Updated 15 ಫೆಬ್ರುವರಿ 2012, 7:55 IST
ಅಕ್ಷರ ಗಾತ್ರ

ಬೆಳಗಾವಿ: ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವ, ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಮುಖಂಡ, ಅನುಭವಿ ಆಡಳಿತಗಾರ ಹಾಗೂ ಸಜ್ಜನ ರಾಜಕಾರಣಿಗಳಾಗಿದ್ದ ಆಚಾರ್ಯರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಚಿವ ಉಮೇಶ ಕತ್ತಿ ಶೋಕ ವ್ಯಕ್ತಪಡಿಸಿದ್ದಾರೆ.

ವಿ.ಎಸ್. ಆಚಾರ್ಯರು ಬಿಜೆಪಿ ಕಟ್ಟಿ ಬೆಳೆಸಿದ ದೂರದೃಷ್ಟಿ ಹೊಂದಿದ ಸಭ್ಯ ರಾಜಕಾರಣಿಗಳಾಗಿದ್ದರು. ಶಿಕ್ಷಣ ಕ್ಷೇತ್ರದ ಬೆಳವಣಿಗೆಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು ಎಂದು ಸಂಸದ ಸುರೇಶ ಅಂಗಡಿ ಸಂತಾಪ ಸೂಚಿಸಿದಾರೆ.

ಬಿಜೆಪಿ ಸಂತಾಪ: ಉನ್ನತ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯರ ನಿಧನಕ್ಕೆ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಝಿರಲಿ ಸಂತಾಪ ಸೂಚಿಸಿದ್ದಾರೆ. ಪ್ರಾಮಾಣಿಕ ಸೇವೆಯಿಂದ ಜನಮನ್ನಣೆ ಗಳಿಸಿದ್ದರು. ಇವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಆರ್‌ಸಿಯುನಿಂದ ಶ್ರದ್ಧಾಂಜಲಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ, ಉನ್ನತ ಶಿಕ್ಷಣ ಸಚಿವ ಆಚಾರ್ಯರಿಗೆ ಸಂತಾಪ ಸೂಚಿಸಲಾಯಿತು.

ನಾಡಿನ ಹಿರಿಯ ಸಂಸದೀಯ ಪಟುವಾಗಿ ಮೇಲ್ಮನೆಯ ಅಧಿಕೃತ ವಕ್ತಾರರಾಗಿ ನಾಡಿನ ಅಭಿವದ್ಧಿಗೆ ಶ್ರಮಿಸಿದ್ದರು. ಈ ಹಿಂದೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ನಾಗರಿಕ ಹಕ್ಕುಗಳ ಸಚಿವರಾಗಿ ನಾಡಿನ ಜನರ ಸೇವೆಗೆ ಕಟಿಬದ್ಧರಾಗಿ ನಿಂತಿದ್ದರು ಎಂದು ಶ್ರದ್ಧಾಂಜಲಿ ಸಭೆಯಲ್ಲಿ ಸ್ಮರಿಸಲಾಯಿತು.

ವಿಶ್ವವಿದ್ಯಾಲಯದ ಕುಲಪತಿ, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ಕುಲಸಚಿವರು,  ಹಣಕಾಸು ಅಧಿಕಾರಿಗಳು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
ವಿಟಿಯು ಸಂತಾಪ: ಉನ್ನತ ಶಿಕ್ಷಣ ಸಚಿವ ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ ಅವರ ನಿಧನದಿಂದ ರಾಜ್ಯದ ಶೈಕ್ಷಣಿಕ ಹಾಗೂ ರಾಜಕೀಯ ರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಟಿಯು ಕುಲಪತಿ ಡಾ. ಎಚ್. ಮಹೇಶಪ್ಪ ಸ್ಮರಿಸಿದರು.

ಮಂಗಳವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮೌನ ಆಚರಿಸಿ ಸಂತಾಪ ಸೂಚಿಸಲಾಯಿತು.
ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಎ. ಕೋರಿ, ಪರೀಕ್ಷಾ ವಿಭಾಗದ ಕುಲಸಚಿವ ಡಾ.ಜಿ.ಎನ್. ಕೃಷ್ಣಮೂರ್ತಿ, ಹಣಕಾಸು ಅಧಿಕಾರಿ ರಾಮಚಂದ್ರಸ್ವಾಮಿ, ಇತರ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಕೋರೆ ಶೋಕ: ಆಚಾರ್ಯರು ಸಕಾರಾತ್ಮಕ ಚಿಂತನೆಯ ವ್ಯಕ್ತಿ, ಸ್ವಚ್ಛ ಆಡಳಿತಕ್ಕೆ ಹೆಸರಾಗಿದ್ದರು. ಎಸ್. ನಿಜಲಿಂಗಪ್ಪನವರ ನಂತರದ ಕಾಲಮಾನದಲ್ಲಿ ಕಂಡು ಬಂದ ಒಬ್ಬ ಮೌಲ್ಯಾಧಾರಿತ ರಾಜಕಾರಣಿ ಎನಿಸಿದ್ದರು. ಮೂರು ದಿನಗಳ ಹಿಂದೆ ಅವರೊಂದಿಗೆ ಒಂದು ಗಂಟೆಗಳ ಕಾಲ ಚರ್ಚಿಸಿದ್ದೆ. ಆಚಾರ್ಯರ ನಿಧನದಿಂದ ಕರ್ನಾಟಕ ಒಬ್ಬ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡು ಬಡವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಶ್ರದ್ಧಾಂಜಲಿ ಸಭೆ ಇಂದು ವಿ.ಎಸ್. ಆಚಾರ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಿಜೆಪಿ ಮಹಾನಗರ ಜಿಲ್ಲಾ ಘಟಕ ಹಾಗೂ ಗ್ರಾಮೀಣ ಘಟಕದ ವತಿಯಿಂದ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಫೆಬ್ರುವರಿ 15ರಂದು 11 ಗಂಟೆಗೆ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ.


ಎಬಿವಿಪಿ ಶೋಕ:
ವಿದ್ಯಾರ್ಥಿ ದಿನಗಳಿಂದಲೂ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ಡಾ. ವಿ.ಎಸ್. ಆಚಾರ್ಯರು ಎಬಿವಿಪಿಯ ಹಲವು ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಅವರು ವಿದ್ಯಾರ್ಥಿ ಪರ ನಿಲುವನ್ನು ತಡೆಯುತ್ತಿದ್ದರು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶೋಕ ಸಂದೇಶದಲ್ಲಿ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT