ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಕಾಗೇರಿ ಹೇಳಿಕೆ ತಪ್ಪು

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರ ಮಾರ್ಗದರ್ಶಿ ಸೂತ್ರಗಳ ಆಧಾರದ ಮೇಲೆ ಪಠ್ಯಪುಸ್ತಕಗಳನ್ನು ರಚಿಸಲಾಗಿದೆ. ಮಾಜಿ ಶಿಕ್ಷಣ ಸಚಿವರಾದ ಎಚ್. ವಿಶ್ವನಾಥ್, ಪ್ರೊ.ಬಿ.ಕೆ. ಚಂದ್ರಶೇಖರ್ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸುಮಾರು ಎರಡು ವರ್ಷಗಳ ಕಾಲ ಸಮಾಲೋಚನೆ ನಡೆಸಿ ಸಲಹೆ ಸೂಚನೆಗಳನ್ನು ಪಡೆಯಲಾಗಿದೆ~ ಎಂಬ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೇಳಿಕೆ (ಪ್ರವಾ.ಫೆ.4) ಕುರಿತು ನಾನು, ಎಚ್. ವಿಶ್ವನಾಥ್ ಅವರೊಡನೆ ವಿಚಾರ ವಿನಿಮಯ ಮಾಡಿದ ನಂತರ ಈ ವಿವರಣೆ: 
ಕಾಗೇರಿಯವರ ಹೇಳಿಕೆ ಓದುಗರಿಗೆ ತಪ್ಪು ಅಭಿಪ್ರಾಯ ಮೂಡಿಸುವಂತಿದೆ.
 
ಎರಡು ವರ್ಷಗಳ ಹಿಂದೆ ಸುಮಾರು ನೂರು ಜನರಿದ್ದ ಒಂದು ಸಭೆಗೆ ಕಾಗೇರಿಯವರು ನಮ್ಮನ್ನು ಆಹ್ವಾನಿಸಿದ್ದರು. ಶಿಕ್ಷಣದ ಕಲ್ಪನೆಯ ಚರ್ಚೆಯಲ್ಲಿ ಪಕ್ಷಾತೀತ ನಿಲುವುಗಳು ಅಗತ್ಯವೆಂದು ನಂಬಿರುವ ನಾವು ಅವರ ಆಹ್ವಾನವನ್ನು ಒಪ್ಪಿ ಪಾಲ್ಗೊಂಡಿದ್ದೆವು.

  ಅಲ್ಲಿ `2005ರ ಪಠ್ಯವಸ್ತು ಚೌಕಟ್ಟು ಮಕ್ಕಳ ಮನಸ್ಸಿನಲ್ಲಿ ಮತ್ತೊಂದು ಧರ್ಮ, ಸಂಸ್ಕೃತಿ, ದಿನನಿತ್ಯ ಜೀವನದ ಶೈಲಿ ಇತ್ಯಾದಿ ಕುರಿತಂತೆ ಸಂಶಯ, ಮೇಲರಿಮೆ ಅಥವ ಕೀಳರಿಮೆಗಳು, ವಿಶೇಷವಾಗಿ ಸಮಾಜ ವಿಜ್ಞಾನ ಹಾಗೂ ಚರಿತ್ರೆಯ ಪಠ್ಯವಸ್ತುಗಳ ಮೂಲಕ ಮೂಡದಂತೆ ಎಚ್ಚರವಹಿಸಿ ಪುಸ್ತಕಗಳನ್ನು ರಾಜಕೀಯ ಹೊರಗಿಟ್ಟು ಹಿರಿಯ ಅನುಭವಿ ಶಿಕ್ಷಕರು ಹಾಗೂ ತಜ್ಞರು ರಚಿಸಬೇಕು.

  ಇದನ್ನು ನಾವು ನೀವು ಮಾಡುವಂಥದ್ದಲ್ಲ. ಜೊತೆಗೆ ಸಂವಿಧಾನದ ಮೂಲ ತತ್ವಗಳಲ್ಲಿ ಒಂದಾದ ಧರ್ಮ ನಿರಪೇಕ್ಷತೆಯನ್ನು ಸದಾ ಗಮನದಲ್ಲಿಟ್ಟು ನಮ್ಮ ದೇಶದ ಬಹುಮುಖಿ ಸಂಸ್ಕೃತಿ ಹಾಗೂ ನಾಗರಿಕತೆಗಳನ್ನು ಬಿಂಬಿಸುವಂತಿರಬೇಕು. ಇದಕ್ಕೆ ವಿರುದ್ಧವಾದ ಏಕಮುಖಿ ಹಾಗೂ ಇತರ ಧರ್ಮಗಳ ವಿರೋಧಿ ಎನ್ನುವ ರೀತಿಯಲ್ಲಿ ನಮ್ಮ ನಮ್ಮ ಧರ್ಮವನ್ನೇ ಮಕ್ಕಳ ಮನಸ್ಸಿಗೆ ತುಂಬುವುದು ಅಕ್ಷಮ್ಯ~ ಎಂದು ನಾನು ಮತ್ತು ವಿಶ್ವನಾಥ್ ಹೇಳಿದ್ದುಂಟು. ಮುಖ್ಯವಾಗಿ ಆ ಸಭೆಯಲ್ಲಿ ಮೌಲ್ಯಗಳ ಚರ್ಚೆ ಪ್ರಧಾನವಾಗಿತ್ತೇ ಹೊರತು, ಪಠ್ಯವಸ್ತುಗಳ ವಿಷಯಗಳ ವಿವರ ಕುರಿತಂತೆ ವಿಚಾರ ವಿನಿಮಯವಾಗಲಿಲ್ಲ.
 
ನಾವಿದ್ದ ಒಂದು, ಒಂದೂವರೆ ಗಂಟೆ ಅವಧಿಯಲ್ಲಿ ಅಂತಹ ವಿವರಗಳ ಪರಿಶೀಲನೆ ಸಾಧ್ಯವೂ ಇಲ್ಲ. ನಾವಿಬ್ಬರೂ ಮಕ್ಕಳ ಮನಸ್ಸಿನಲ್ಲಿ ವಿವಿಧ ಧರ್ಮಗಳ ಬಗ್ಗೆ ಕೇಸರೀಕರಣ ಸೃಷ್ಟಿಸುವ ಸಂಶಯ, ದ್ವೇಷ, ಅಸಹನೆಗೆ ಪೂರಕವಾದ ಯಾವುದೇ ಶೈಕ್ಷಣಿಕ ಪ್ರಯತ್ನಕ್ಕೆ ಸಂಪೂರ್ಣ ವಿರೋಧವಾಗಿದ್ದೇವೆ.

ಕಡೆಯದಾಗಿ ನಮ್ಮ ಪ್ರಶ್ನೆ: ಶಿಕ್ಷಣ ಸಚಿವರು ನಿರಂತರ ವಿರೋಧದ ನಡುವೆಯೂ ಇಟ್ಟಿರುವ ಅಪಾಯಕಾರಿ ಹೆಜ್ಜೆಗೆ ತೀವ್ರ ಪ್ರತಿಭಟನೆ ವ್ಯಕ್ತವಾಗಿರುವ ಸಂದರ್ಭದಲ್ಲಿ ನಮ್ಮಿಬ್ಬರ ಹೆಸರುಗಳನ್ನು ಬಳಸಿಕೊಂಡಿರುವುದು ಅಪ್ರಸ್ತುತ ಮತ್ತು ಆಕ್ಷೇಪಾರ್ಹ.
ನಾಡಿನ ಜನರಿಗೆ ಈಗ ಅರ್ಥವಾಗಿರಬಹುದು: ಶಿಕ್ಷಣ ಕ್ಷೇತ್ರದಲ್ಲಿ ಮನಸ್ಸುಗಳನ್ನು ಮುರಿಯುವ ಕೆಟ್ಟ ರಾಜಕೀಯ ಯಾವ ಪಕ್ಷದ ಅಜೆಂಡಾ ಎನ್ನುವುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT