ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ರೇಣುಕಾಚಾರ್ಯ ಮೇಲೆ ಹಲ್ಲೆಗೆ ಯತ್ನ: ಗ್ರಾ.ಪಂ. ಸದಸ್ಯನ ಮೇಲೆ ಹಲ್ಲೆ

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ಹೊನ್ನಾಳಿ (ದಾವಣಗೆರೆ ಜಿಲ್ಲೆ): ಆಶ್ರಯ ಮನೆ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಪಕ್ಷಪಾತ ಖಂಡಿಸಿದ ಗ್ರಾಮ ಪಂಚಾಯ್ತಿ ಸದಸ್ಯ ಕುಳಗಟ್ಟೆ ಚಂದ್ರಪ್ಪ ಅವರ ಮೇಲೆ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಬೆಂಬಲಿಗರು ಸಚಿವರ ಸಮ್ಮುಖದಲ್ಲೇ ಹಲ್ಲೆ ನಡೆಸಿದ ಘಟನೆ ಸೋಮವಾರ ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ (ಸಾಮರ್ಥ್ಯ ಸೌಧ) ನಡೆಯಿತು.

ಆಶ್ರಯ ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿ ಸದಸ್ಯರು, ಕಾರ್ಯದರ್ಶಿಗಳು ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಭೆಯ ವೇಳೆ ಈ ಘಟನೆ ನಡೆದಿದೆ.

ಸಭೆಯಲ್ಲಿ ಕುಳಗಟ್ಟೆ ಗ್ರಾಮ ಪಂಚಾಯ್ತಿಯ ಕಾಂಗ್ರೆಸ್ ಸದಸ್ಯ ಚಂದ್ರಪ್ಪ ಮತ್ತು ಅದೇ ಗ್ರಾಮ ಪಂಚಾಯ್ತಿಯ ಬಿಜೆಪಿ ಸದಸ್ಯ ನಾಗರಾಜಪ್ಪ ಅವರ ನಡುವೆ ಆಶ್ರಯ ಮನೆಗಳ ಹಂಚಿಕೆ ಕುರಿತಂತೆ ಮಾತಿಗೆ ಮಾತು ಬೆಳೆಯಿತು.

ಈ ವೇಳೆ ಮಧ್ಯ ಪ್ರವೇಶಿಸಿದ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ, ಇಬ್ಬರನ್ನೂ ಸಮಾಧಾನಪಡಿಸಲು ಯತ್ನಿಸಿದರು. ~ನಾನು ಕೇವಲ ಬಿಜೆಪಿ ಕಾರ್ಯಕರ್ತರಿಗೆ ಮನೆ ಹಂಚಿಕೆ ಮಾಡಲು ಯಾರಿಗೂ ಸೂಚಿಸಿಲ್ಲ, ಅರ್ಹ ಎಲ್ಲಾ ಬಡವರಿಗೂ ಮನೆ ನೀಡಲು ಸೂಚಿಸಿದ್ದೇನೆ~ ಎಂದು ಹೇಳಿದರು.

ಈ ಉತ್ತರದಿಂದ ತೃಪ್ತರಾಗದ ಚಂದ್ರಪ್ಪ ಮತ್ತೆ ವಾಗ್ದಾಳಿ ಪ್ರಾರಂಭಿಸಿದರು. ಆ ಸಂದರ್ಭದಲ್ಲಿ ಕೋಪಗೊಂಡ ಸಚಿವರ ಬೆಂಬಲಿಗರು ಚಂದ್ರಪ್ಪ ಅವರ ಮೇಲೆ ಹಲ್ಲೆ ನಡೆಸಿದರು. ಘಟನೆಯಲ್ಲಿ ಪೀಠೋಪಕರಣಗಳು ಧ್ವಂಸಗೊಂಡವು. ನಾಲ್ಕಾರು ಅಧಿಕಾರಿಗಳಿಗೂ ಕುರ್ಚಿಗಳ ಏಟು ಬಿದ್ದಿತು. ಬಿಜೆಪಿ ಹಾಗೂ ಕಾಂಗ್ರೆಸ್‌ನ ಕೆಲ ಕಾರ್ಯಕರ್ತರೂ ಘಟನೆಯಲ್ಲಿ ಗಾಯಗೊಂಡರು.

ತಕ್ಷಣ ಸಚಿವ ರೇಣುಕಾಚಾರ್ಯ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನಪಡಿಸಲು ಯತ್ನಿಸಿದರು. ನಂತರ ಅವರು ತಹಶೀಲ್ದಾರ್ ಕಚೇರಿಗೆ ತೆರಳಿದರು.

ಸಚಿವರ ಮೇಲೆ ಹಲ್ಲೆಗೆ ಯತ್ನ:ಈ ಘಟನೆ ನಡೆದು 10 ನಿಮಿಷಗಳ ನಂತರ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ತಾಲ್ಲೂಕು ಕಚೇರಿ ಬಳಿ ಆಗಮಿಸಿದರು. ಮತ್ತೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಸಚಿವ ರೇಣುಕಾಚಾರ್ಯ ಅವರ ಮೇಲೆ ಹಲ್ಲೆ ನಡೆಸಲೂ ಮಂಜಪ್ಪ ಮುಂದಾದರು. ಆದರೆ ಕಾಂಗ್ರೆಸ್ ಕಾರ್ಯಕರ್ತರು, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT