ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಂಪುಟ ಸಭೆ ನಿರ್ಧಾರ: ಪ್ರಥಮ ದರ್ಜೆ ಕಾಲೇಜುಗಳಿಗೆ 115 ಕೋಟಿ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅಗತ್ಯ ಕೊಠಡಿಗಳನ್ನು ನಿರ್ಮಿಸುವ ಉದ್ದೇಶದಿಂದ ತಕ್ಷಣಕ್ಕೆ 115 ಕೋಟಿ ರೂಪಾಯಿ ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ಸೂಚಿಸಿತು.
ಹೊಸದಾಗಿ ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಿದ್ದಲ್ಲದೆ, ಈ ಹಿಂದೆ ಇದ್ದ ಅನೇಕ ಕಾಲೇಜುಗಳಲ್ಲಿ ವಿಜ್ಞಾನ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲಾಗಿದೆ.

ಇದರಿಂದ ಕೊಠಡಿಗಳ ಕೊರತೆ ಉಂಟಾದ ಪರಿಣಾಮ 1238 ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಸುಮಾರು 558 ಕೋಟಿ ರೂಪಾಯಿ ಬೇಕಾಗಲಿದ್ದು, ತಕ್ಷಣವೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಒಪ್ಪಿಗೆ ಸೂಚಿಸಲಾಯಿತು ಎಂದು ಸಂಪುಟ ಸಭೆ ನಂತರ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಸುದ್ದಿಗಾರರಿಗೆ ತಿಳಿಸಿದರು.

ಬಜೆಟ್‌ನಲ್ಲಿ ರೂ 100 ಕೋಟಿ ನೀಡಲು ಒಪ್ಪಿದ್ದರೂ ಬೇಡಿಕೆ ಮಾತ್ರ ರೂ 167 ಕೋಟಿ ಇತ್ತು. ಇದನ್ನು ಮನಗಂಡು ಪೂರ್ಣ ಪ್ರಮಾಣದಲ್ಲಿ ಹಣ ನೀಡಲು ನಿರ್ಧರಿಸಿದ್ದು, ರೂ 115 ಕೋಟಿ ಬಳಕೆ ನಂತರ ಹೆಚ್ಚುವರಿಯಾಗಿ ಬಾಕಿ ಹಣ ಕೂಡ ನೀಡಲು ತೀರ್ಮಾನಿಸಲಾಯಿತು ಎಂದರು.

ಮನೆ ನಿರ್ಮಾಣಕ್ಕೆ ಒಪ್ಪಿಗೆ:
ಸ್ವಂತ ಕೃಷಿ ಭೂಮಿಯಲ್ಲಿ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ಮಿಸಲು ಇದ್ದ ಅಡ್ಡಿ ಆತಂಕಗಳಿಗೆ ತೆರೆ ಎಳೆದಿರುವ ಸರ್ಕಾರ ಇನ್ನು ಮುಂದೆ ಭೂ ಪರಿವರ್ತನೆ ಇಲ್ಲದೆ ಮನೆ ನಿರ್ಮಿಸಲು ಅವಕಾಶ ನೀಡಿದೆ. ಇದಕ್ಕೆ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಎರಡು ಗುಂಟೆ ಮೀರದ ಜಾಗದಲ್ಲಿ 1200 ಚ.ಅ.ಗೂ ಕಡಿಮೆ ವಿಸ್ತೀರ್ಣದ ಮನೆ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ.

ಇದಕ್ಕೆ ಸರ್ಕಾರ ನೀಡುವ ಅನುದಾನವನ್ನು ಸಂಬಂಧಪಟ್ಟ ಫಲಾನುಭವಿ ಪಡೆಯಬಹುದು. ಭೂ ಪರಿವರ್ತನೆ ಅಗತ್ಯ ಇಲ್ಲ ಎಂದು ಹೇಳಿದರು.

ಪ್ರಮುಖ ತೀರ್ಮಾನಗಳು
* ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಲಿ ಸ್ಥಾಪಿಸಲು ಸಂಪುಟ ಸಭೆ ಒಪ್ಪಿಗೆ ನೀಡಿತು. ಇದರ ಅಧ್ಯಕ್ಷರಾಗಿ ಅರಣ್ಯ ಸಚಿವರು ಕೆಲಸ ನಿರ್ವಹಿಸಲಿದ್ದಾರೆ. ಅರಣ್ಯ, ವನ್ಯಜೀವಿ ಪರಿಸರವನ್ನು ಉಳಿಸುವ ಉದ್ದೇಶದಿಂದ ಈ ಮಂಡಲಿ ಸ್ಥಾಪಿಸಲಾಗಿದೆ.

ಬಂಡೀಪುರ ಇತ್ಯಾದಿ ಪ್ರಮುಖ ಅರಣ್ಯ ಪ್ರದೇಶಗಳಿಗೆ ಜನರು ಹೋಗುವುದನ್ನು ತಡೆಯುವ ಉದ್ದೇಶದಿಂದ ಅದಕ್ಕೆ ಪರ್ಯಾಯವಾಗಿ ಇತರ ಜಾಗಗಳಲ್ಲಿ ಅರಣ್ಯ ಅಭಿವೃದ್ಧಿಗೆ ಒತ್ತು ನೀಡುವುದು; ಆ ಜಾಗಗಳಿಗೆ ಜನರು ಹೋಗುವಂತೆ ಮಾಡುವುದು ಈ ಮಂಡಳಿ ಸ್ಥಾಪನೆಯ ಹಿಂದಿನ ಉದ್ದೇಶ.

ಈ ರೀತಿಯ ಮಂಡಲಿಯನ್ನು ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಸ್ಥಾಪಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ನೀಡಲಿವೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಒಳಗೊಂಡ ಸಮಿತಿ ರಚಿಸಲಾಗುವುದು.

* ನವೀಕರಿಸಬಹುದಾದ ಇಂಧನ ಮೂಲಗಳಾದ ಫೋಟೊ ವೋಲ್ಟಾಯಿಕ್‌ನಿಂದ ವಿದ್ಯುತ್ ಉತ್ಪಾದಿಸಿದರೆ ಅದನ್ನು ಪ್ರತಿ ಯೂನಿಟ್‌ಗೆ ರೂ 14.5 ಕೊಟ್ಟು ಖರೀದಿಸಲು ನಿರ್ಧಾರ.

ಅದೇ ರೀತಿ ಸೋಲಾರ್ ಥರ್ಮಲ್ ಮೂಲದಿಂದ ವಿದ್ಯುತ್ ಉತ್ಪಾದಿಸಿದರೆ ಅದನ್ನು ಪ್ರತಿ ಯೂನಿಟ್‌ಗೆ ರೂ 11.35 ಕೊಟ್ಟು ಖರೀದಿಸಲು ಒಪ್ಪಿಗೆ ನೀಡಲಾಯಿತು. ವರ್ಷಕ್ಕೆ ಕನಿಷ್ಠ 40 ಮೆಗಾವಾಟ್ ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸಬೇಕೆಂದು ಕೇಂದ್ರ ಸರ್ಕಾರ ಸಲಹೆ ನೀಡಿದೆ. ಆ ಪ್ರಕಾರ ಈ ದರ ನಿಗದಿ ಮಾಡಿದ್ದು, ಖಾಸಗಿ ಸಂಸ್ಥೆಗಳು ಉತ್ಪಾದನೆ ಮಾಡುವ ವಿದ್ಯುತ್ ಅನ್ನು ಸರ್ಕಾರ ಖರೀದಿ ಮಾಡಲಿದೆ.

* ಕೋಲಾರ ಜಿಲ್ಲೆಯ ಮಾಲೂರಿನ ಸರ್ವೆ ನಂ.501ರಲ್ಲಿನ 25 ಗುಂಟೆ ಜಾಗವನ್ನು ಕೋಲಾರ ಜಿಲ್ಲಾ ಭೋವಿ ಜನಾಂಗದ ಸರ್ಕಾರಿ ನೌಕರರ ಸಂಘಕ್ಕೆ 30 ವರ್ಷಗಳ ಕಾಲ ಗುತ್ತಿಗೆ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿತು.
ಭೋವಿ ಜನಾಂಗದ ವಿದ್ಯಾರ್ಥಿಗಳ ಸಲುವಾಗಿ ಹಾಸ್ಟೆಲ್ ನಿರ್ಮಿಸುತ್ತಿದ್ದು, ಅದಕ್ಕೆ ನೆರವಾಗಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

 * ಮಡಿಕೇರಿ ತಾಲ್ಲೂಕಿನ ಕೆ.ನಿಡಗುಣಿಯಲ್ಲಿ 65.38 ಎಕರೆ ಖಾಸಗಿ ಜಮೀನು ಇದ್ದು, ಅದನ್ನು ಕೆಎಚ್‌ಬಿ ಎಕರೆಗೆ 24.5 ಲಕ್ಷ ರೂಪಾಯಿ ಕೊಟ್ಟು ಖರೀದಿಸಲು ಸಂಪುಟ ಸಭೆ ಒಪ್ಪಿಗೆ ನೀಡಿತು. ಬಡಾವಣೆ ನಿರ್ಮಿಸಿ, ನಿವೇಶನ ಹಂಚುವ ಉದ್ದೇಶದಿಂದ ಈ ಜಮೀನು ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ.

* ಬೆಂಗಳೂರು ನಗರ ಜಿಲ್ಲೆಯ ಹಂಪಾಪುರ ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) 104.34 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದು, ಇದರ ಮಧ್ಯ ಭಾಗದಲ್ಲಿ ಸರ್ಕಾರಕ್ಕೆ ಸೇರಿದ 15.20 ಎಕರೆ ಜಾಗ ಇದೆ.
ಇದನ್ನು ಕೆಎಚ್‌ಬಿಗೆ ಬಿಟ್ಟುಕೊಡಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಈ ಜಾಗದಲ್ಲಿ ಕೆಎಚ್‌ಬಿ ಬಡಾವಣೆ ನಿರ್ಮಿಸುತ್ತಿದ್ದು, ಅದರಲ್ಲಿ ಶೇ 20ರಷ್ಟು ನಿವೇಶನ ಬಡವರಿಗೆ ನೀಡಬೇಕೆಂದು ಷರತ್ತು ಹಾಕಲಾಗಿದೆ.

* ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಕಣಿಮಿಣಿಕಿ ಗ್ರಾಮದಲ್ಲಿ 25 ಎಕರೆ ಸರ್ಕಾರಿ ಜಾಗ ಇದ್ದು, ಅದನ್ನು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣದ ಸಲುವಾಗಿ ಮಾತಾ ಅಮೃತಾನಂದಮಯಿ ಪ್ರತಿಷ್ಠಾನಕ್ಕೆ ನೀಡಲು ಸಂಪುಟ ಒಪ್ಪಿಗೆ ಸೂಚಿಸಿತು. ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕೆನ್ನುವ ಷರತ್ತು ಹಾಕಲಾಗಿದೆ.

* ಹೆಬ್ಬಾಳದಲ್ಲಿ ಹೈಕೋರ್ಟ್ ಅತಿಥಿಗೃಹ ನಿರ್ಮಾಣಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿತು. ಈ ಸಲುವಾಗಿ ರೂ 16 ಕೋಟಿ ಖರ್ಚು ಮಾಡುತ್ತಿದ್ದು, ಕನಿಷ್ಠ 13 ಕೊಠಡಿ ನಿರ್ಮಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT