ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ರಾಜೀನಾಮೆಗೆ ಜೆಡಿಎಸ್ ಆಗ್ರಹ

ಅಕ್ರಮ- ಸಕ್ರಮ ಸಮಿತಿ ಭೂ ಹಗರಣ
Last Updated 12 ಫೆಬ್ರುವರಿ 2013, 7:10 IST
ಅಕ್ಷರ ಗಾತ್ರ

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನಲ್ಲಿ ನಡೆದಿದೆ ಎನ್ನಲಾದ ಅಕ್ರಮ- ಸಕ್ರಮ ಸಮಿತಿಯ ಭೂ ಅವ್ಯವಹಾರದಲ್ಲಿ ಸಹೋದರರು ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿ.ಪಿ. ಶಶಿಧರ್ ಒತ್ತಾಯಿಸಿದರು.

ನಗರದ ರಾಜರ ಗದ್ದುಗೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಸೋಮವಾರ ಜೆಡಿಎಸ್ ಕಾರ್ಯಕರ್ತರ ಜೊತೆ ಪ್ರತಿಭಟನಾ ಮೆರವಣಿಗೆ ನಡೆಸಿದ ಅವರು, ಸಚಿವರ ರಾಜೀನಾಮೆಗೆ ಒತ್ತಾಯಿಸಿದರು.

ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಚಿವ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಹಿಂದೆ ಡಾ.ಅಂಬೇಡ್ಕರ್ ಅವರ ಪ್ರತಿಮೆ ಮೇಲೆ ಮದ್ಯ ಸುರಿದ ಪ್ರಕರಣದಲ್ಲಿ ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ ಅವರ ಪುತ್ರನ ಮೇಲೂ ಆರೋಪ ಕೇಳಿಬಂದಿತ್ತು. ಆಗ ಅಪ್ಪಚ್ಚ ರಂಜನ್ ಅವರೇ ಲಲಿತಾನಾಯಕ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. ಈಗ ತಮ್ಮ ಸಹೋದರರ ಮೇಲಿನ ಆರೋಪ ಕೇಳಿಬಂದರೂ ಏಕೆ ರಾಜೀನಾಮೆ ನೀಡುತ್ತಿಲ್ಲ ಎಂದು ಶಶಿಧರ್ ಪ್ರಶ್ನಿಸಿದರು.

ವಿರಾಜಪೇಟೆ ಕ್ಷೇತ್ರದಲ್ಲಿ ಅಕ್ರಮ- ಸಕ್ರಮ ಸಮಿತಿ ಅಧ್ಯಕ್ಷರಾಗಿರುವ, ಸಚಿವರ ಸಹೋದರರು 20 ಎಕರೆ ಪೈಸಾರಿ ಜಾಗವನ್ನು ತಮ್ಮ ಕುಟುಂಬದ ಸದಸ್ಯರಿಗೆ ಕಾನೂನು ಬಾಹಿರವಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.

ಬ್ಲ್ಯಾಕ್‌ಮೇಲ್ ತಂತ್ರ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಹಾಗೂ ಅಕ್ರಮ- ಸಕ್ರಮ ಸಮಿತಿ ಅನುಷ್ಠಾನಕ್ಕೆ ಬಂದ 1991ರಿಂದ ತನಿಖೆ ಕೈಗೊಳ್ಳುವುದಾಗಿ ಸಚಿವರು ಬೆದರಿಕೆಯೊಡ್ಡುತ್ತಿದ್ದಾರೆ. ಇಂತಹ ಬ್ಲ್ಯಾಕ್‌ಮೇಲ್ ತಂತ್ರಗಳಿಗೆ ಜೆಡಿಎಸ್ ಬೆದರಲ್ಲ ಎಂದು ಶಶಿಧರ್ ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಕುಟುಂಬದವರು ಅಕ್ರಮವಾಗಿ ಪಡೆದಿರುವ ಜಾಗವನ್ನು ವಶಪಡಿಸಿ ಕೊಳ್ಳುವಂತೆ ಸಚಿವರು ಹೇಳಿಕೆ ನೀಡಿದ್ದು ಕೇವಲ ಪತ್ರಿಕೆಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕಾಗಿದೆ. ಇದು ಕಾರ್ಯರೂಪಕ್ಕೆ ಬರಲಿ. ಕೆದಮಳ್ಳೂರು ಹಾಗೂ ಹೆಗ್ಗಳ್ಳ ಗ್ರಾಮದ ಜಾಗಗಳನ್ನು ಸರ್ವೇ ಮಾಡಿಸಿ, ಅಕ್ರಮವಾಗಿ ಒತ್ತುವರಿಯಾಗಿರುವ ಜಾಗಗಳನ್ನು ಸರ್ಕಾರ ವಶಪಡಿಸಿಕೊಳ್ಳಬೇಕೆಂದು ಅವರು ಆಗ್ರಹಿಸಿದರು.

ಜಿಲ್ಲಾಡಳಿತ ತನಿಖೆ ಮಾಡಲಿ
ಈ ಪ್ರಕರಣ ಕುರಿತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳಿಂದ ತನಿಖೆ ಅಗಲಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಇದಕ್ಕೂ ಮೊದಲು ಭೂ ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಸಂರಕ್ಷಿಸುವ ಕೆಲಸವಾಗಬೇಕು. ವಿಳಂಬ ಮಾಡಿದರೆ ದಾಖಲೆಗಳನ್ನು ತಿದ್ದುವ ಅಪಾಯವಿದೆ ಎಂದರು.

ಜೆಡಿಎಸ್ ಹಿರಿಯ ನಾಯಕ ಡಿ.ಎಸ್. ಮಾದಪ್ಪ ಮಾತನಾಡಿದರು. ಮುಖಂಡ ಬಿ.ವೈ.ರಾಜೇಶ್, ಎಂ.ಟಿ. ಕಾರ್ಯಪ್ಪ, ಎಚ್.ಬಿ.ಗಣೇಶ್, ಕಾರ್ಮಾಡ ಸುಬ್ರಮಣಿ, ಕೆ.ವಿ. ಸುರೇಶ್, ಪ್ರಮೀಳಾ ತೆಮ್ಮಯ್ಯ, ವಿಶ್ವ, ಮನೋಜ್ ಬೋಪಯ್ಯ, ಕೇಶವಾನಂದ, ಅಶ್ರಫ್, ಯೂಸೂಫ್ ಇತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT