ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರಿಂದ ಉದ್ಘಾಟಿತ, ಮೂಲೆಗುಂಪಾದ ಮ್ಯೂಸಿಯಂ

Last Updated 16 ಫೆಬ್ರುವರಿ 2011, 9:55 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರೇವುನಾಯಕ್ ಬೆಳಮಗಿ ಅವರೇ ಉದ್ಘಾಟಿಸಿದ್ದ ‘ಮ್ಯೂಸಿಯಂ’ ಮತ್ತು ‘ಕಲಾಕೃತಿ ಪ್ರದರ್ಶನ’ ಹಾಗೂ ಬೀದರ್‌ನ ಇತಿಹಾಸಕ್ಕೆ ಸಂಬಂಧಿಸಿದ ಅಪರೂಪದ ‘ಪುಸ್ತಕ ಸಂಗ್ರಹ’ ಜಿಲ್ಲಾಡಳಿತದ ನಿರಾಸಕ್ತಿಯಿಂದಾಗಿ ಮೂಲೆಗುಂಪಾಗಿದೆ. ಅಧಿಕಾರದಲ್ಲಿ ಇರುವ ರಾಜಕಾರಣಿಗಳು ಬದಲಾದಾಗ ‘ಯೋಜನೆ’ಗಳ ಸ್ವರೂಪ ಬದಲಾಗುವುದು ಮಾಮೂಲಿ ಸಂಗತಿ. ಉದ್ಘಾಟನೆ ಮಾಡಿದ ಸಚಿವರು ಅಧಿಕಾರದಲ್ಲಿ ಮುಂದುವರೆದಿದ್ದರೂ ‘ಯೋಜನೆ’ ಮಾತ್ರ ಅವಕೃಪೆಗೆ ಒಳಗಾದದ್ದು ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದೆ.

ಕೋಟೆಯ ಆವರಣದಲ್ಲಿ ಇರಿಸಲಾಗಿದ್ದ ಲಿಯಾಖತ್ ಅಲಿ ಖಾನ್‌ರ ಐತಿಹಾಸಿಕ ಮಹತ್ವದ ವಸ್ತುಗಳ ಸಂಗ್ರಹ ಮತ್ತೆ ಅವರ ಬಾಡಿಗೆ ಮನೆ ಸೇರಿದೆ. ಇದರಿಂದಾಗಿ ಸಾರ್ವಜನಿಕರು ಬಹಮನಿ ಮತ್ತು ಬರೀದ್‌ಷಾಹಿ ಅರಸರ ಕಾಲಕ್ಕೆ ಸೇರಿದ ಅಪರೂಪದ ನಾಣ್ಯಗಳನ್ನು ವೀಕ್ಷಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ನಗರದ ನಿವಾಸಿ ಆಗಿರುವ 70ರ ಹರೆಯದ ಲಿಯಾಖತ್ ಅಲಿ ಖಾನ್‌ರ ಸಂಗ್ರಹ ಐತಿಹಾಸಿಕ ಮಹತ್ವದ ವಸ್ತುಗಳನ್ನು ಒಳಗೊಂಡಿತ್ತು. ಅದರಲ್ಲಿ ಬೀದರ್‌ನ ಇತಿಹಾಸದ ಮಹತ್ವದ ವಸ್ತುಗಳು ಸೇರಿದ್ದವು. ಆ ಪೈಕಿ ಬಹಮನಿ ವಂಶಕ್ಕೆ ಸೇರಿದ ಎಲ್ಲ 18 ಅರಸರ ಕಾಲದಲ್ಲಿ ಹೊರಡಿಸಲಾದ

ನಾಣ್ಯಗಳ ಸಂಗ್ರಹ ಅಕ್ಷರಶಃ ಅಪರೂಪದ್ದಾಗಿತ್ತು. ಇದಲ್ಲದೇ, ಬರೀದ್‌ಷಾಹಿ, ವಿಜಯನಗರ ಮತ್ತು ಹೈದರಾಬಾದ್ ನಿಜಾಂರ ಕಾಲದ ನಾಣ್ಯಗಳು ಕೂಡ ಲಿಯಾಖತ್ ಅವರ ಸಂಗ್ರಹದಲ್ಲಿದ್ದವು. ಲಿಯಾಖತ್ ಅಲಿ ಅವರ ಸಂಗ್ರಹದ ಮಹತ್ವ ಅರಿತ ಜಿಲ್ಲಾಡಳಿತವು ಅವುಗಳ ಸಾರ್ವಜನಿಕ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲು ಮುಂದಾಯಿತು. ಅದಕ್ಕೆ ಸಹಾಯಕ ಆಯುಕ್ತರಾಗಿದ್ದ ಜಹಿರಾ ನಸೀಮ್ ಅವರ ಅಧ್ಯಕ್ಷತೆಯಲ್ಲಿನ ‘ಪರಂಪರೆ ಸಮಿತಿ’ ಆಸಕ್ತಿ ತೋರಿಸಿದ್ದು ಮತ್ತು ಸಮಿತಿ ಸಲಹೆ- ಸೂಚನೆ ನೀಡಿದ್ದು ಪ್ರಮುಖ  ಕಾರಣ ಆಗಿತ್ತು.

ಜಿಲ್ಲಾಡಳಿತದ ಈ ನಿರ್ಧಾರವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಕೋಟೆಯ ಆವರಣದಲ್ಲಿನ ರಂಗೀನ್ ಮಹಲ್ ಮುಂಭಾಗದಲ್ಲಿ ಇರುವ ಮಲೇರಿಯಾ ಕಟ್ಟಡದಲ್ಲಿ ಎರಡು ಶೋಕೇಸ್‌ಗಳಲ್ಲಿ ಲಿಯಾಖತ್ ಅವರ ಮ್ಯೂಸಿಯಂನ ವಸ್ತುಗಳು ಬಂದು ಸೇರಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ ಅವರು ಈ ಸಂಗ್ರಹಾಲಯವನ್ನು ಉದ್ಘಾಟಿಸಿ ಮೆಚ್ಚುಗೆ ಸೂಚಿಸಿದ್ದರು.

ಆಗ ಜಿಲ್ಲಾಧಿಕಾರಿ ಆಗಿದ್ದ ಹರ್ಷ ಗುಪ್ತಾ ಅವರು ಮುತುವರ್ಜಿ ವಹಿಸಿದ್ದರಿಂದ ಲಿಯಾಖತ್ ಅವರ ಮನೆಯಲ್ಲಿ ಹತ್ತಾರು ವರ್ಷಗಳಿಂದ ಧೂಳು ಹಿಡಿದು ಕುಳಿತಿದ್ದ ಅಪೂರ್ವ ವಸ್ತುಗಳು ಕೋಟೆಯ ಆವರಣ ಪ್ರವೇಶಿಸಿದ್ದವು. ಬಿಆರ್‌ಜಿಎಫ್ ಯೋಜನೆಯ ಅಡಿಯಲ್ಲಿ ಲಿಯಾಖತ್ ಅಲಿ ಅವರ ಪುತ್ರನಿಗೆ ‘ಮಾರ್ಗದರ್ಶಿ’ ಎಂದು ತಿಂಗಳಿಗೆ ಐದು ಸಾವಿರ ರೂಪಾಯಿಗಳ ಗೌರವಧನ ನಿಗದಿ ಪಡಿಸಲಾಗಿತ್ತು. ಪುಟ್ಟ ಮ್ಯೂಸಿಯಂನಲ್ಲಿ ಇರುವ ವಸ್ತುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಗಿತ್ತು.

ಇದೇ ಕಟ್ಟಡದಲ್ಲಿ 2009ರ ‘ಬೀದರ್ ಉತ್ಸವ’ದ ಅಂಗವಾಗಿ ಏರ್ಪಡಿಸಲಾಗಿದ್ದ ಪೇಂಟಿಂಗ್ ಕ್ಯಾಂಪ್‌ನ ಕಲಾಕೃತಿಗಳನ್ನು ಇರಿಸಲಾಗಿತ್ತು. ನಾಡಿನ ಹಿರಿಯ ಮತ್ತು ಮತ್ತು ಕಲಾವಿದರು ರಚಿಸಿದ ಬೀದರ್‌ನ ಸಾಂಸ್ಕೃತಿಕ ಮಹತ್ವ ಬಿಂಬಿಸುವ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಪೇಂಟಿಂಗ್ ಮತ್ತು ಶಿಲ್ಪಗಳ ಪ್ರದರ್ಶನಕ್ಕೆ ಕೂಡ ಅವಕಾಶ ದೊರೆತಿತ್ತು. ‘ಪರಂಪರೆ ಸಮಿತಿ’ಯ ವತಿಯಿಂದ ಖರೀದಿಸಲಾಗಿದ್ದ ಬೀದರ್‌ನ ಇತಿಹಾಸ ಮತ್ತು ಪರಂಪರೆಯನ್ನು ಕುರಿತಾದ ಮಹತ್ವದ ಗ್ರಂಥಗಳನ್ನು ಕೂಡ ಈ ಕಟ್ಟಡದಲ್ಲಿ ಇರಿಸಲಾಗಿತ್ತು. ಕೋಟೆಗೆ ಭೇಟಿ ನೀಡುವ ಪ್ರವಾಸಿಗಳು ಲಿಯಾಖತ್‌ರ ಸಂಗ್ರಹ ಮತ್ತು ಪೇಂಟಿಂಗ್ ಪ್ರದರ್ಶನ ನೋಡಿ ಮೆಚ್ಚುಗೆ ಸೂಚಿಸುತ್ತಿದ್ದರು.

ಕಳೆದ ವರ್ಷದ ಫೆಬ್ರುವರಿ 2ರಂದು ಉದ್ಘಾಟನೆಯಾಗಿದ್ದ ಈ ಮ್ಯೂಸಿಯಂ ಬದುಕಿದ್ದು ಸರಿಯಾಗಿ ಏಳು ತಿಂಗಳು ಮಾತ್ರ. ಜಿಲ್ಲಾಡಳಿತದ ನಿರಾಸಕ್ತಿಯಿಂದಾಗಿ 2010ರ ಆಗಸ್ಟ್ 2ರಂದು ಕೊನೆಯುಸಿರೆಳೆಯಿತು. ಅದರೊಂದಿಗೆ ಪ್ರದರ್ಶನಕ್ಕೆ ‘ಕತ್ತರಿ’ ಬಿದ್ದಿದೆ. ಇದರೊಂದಿಗೆ ‘ಪರಂಪರೆ’ ಹಲವು ವಿಧಗಳಲ್ಲಿ ಕಟ್ಟಿಕೊಡುವ ಪ್ರಯತ್ನಕ್ಕೂ ಹೊಡೆತ ಬಿದ್ದಂತಾಗಿದೆ. ‘ಉತ್ಸವ’ ಎಂದರೆ ಬರಿ ಹಾಡು- ಕುಣಿತ, ಮನರಂಜನೆ ಮಾತ್ರ ಅಲ್ಲ’ ಎಂದು ಅಭಿಪ್ರಾಯ ಪಡುವ ಉಪನ್ಯಾಸಕ ಡಾ. ಬಸವರಾಜ ಬಲ್ಲೂರು ಅವರು ‘ಜನರಲ್ಲಿ ಭವ್ಯ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಡೆಸುವ ಸಣ್ಣಪುಟ್ಟ ಪ್ರಯತ್ನಗಳೂ ಮಹತ್ವದ್ದಾಗಿರುತ್ತವೆ.
 
ಅವುಗಳನ್ನು ಕಡೆಗಣಿಸಿ ಕೇವಲ ಮನರಂಜನೆಯನ್ನೇ ಪ್ರಧಾನ ಅಂಶ ಆಗಿಸಿದ ಅಂಶಗಳು ಆಶಯವನ್ನು ಹೆಚ್ಚು ದೂರ ತೆಗೆದುಕೊಂಡು ಹೋಗುವುದಿಲ್ಲ’ ಎಂದು ಹೇಳುತ್ತಾರೆ. ‘ಬೀದರ್ ಉತ್ಸವ’ದ ಆಚರಣೆ ಎಂದರೆ ವರ್ಷಕ್ಕೊಮ್ಮೆ ಒಂದೆಡೆ ಸೇರಿ ಸಂಭ್ರಮಿಸುವುದು ಮಾತ್ರವಲ್ಲ. ಸಂಭ್ರಮ-ಸಡಗರದ ಜೊತೆಗೆ ಮೆದುಳಿಗೆ ಆಹಾರ ನೀಡುವ, ಪ್ರವಾಸಿಗರನ್ನು ವರ್ಷ ಪೂರ್ತಿ ಆಕರ್ಷಿಸುವಂತಹ ಯೋಜನೆಗಳನ್ನು ರೂಪಿಸದಿದ್ದರೆ ‘ಉತ್ಸವ’ ಬರೀ ಪ್ರದರ್ಶನದ ವೇದಿಕೆ ಆಗಿ ಬಿಡುವ ಅಪಾಯ ಇದೆ’ ಎಂದು  ಎಚ್ಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT