ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಯೋಗೀಶ್ವರರ ಸ್ಮರಣೋತ್ಸವ

Last Updated 14 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಶ್ರೀ ಪರಮಹಂಸ ಸಚ್ಚಿದಾನಂದ ಯೋಗೀಶ್ವರರು 20ನೇ ಶತಮಾನದ ದೊಡ್ಡ ಸಿದ್ಧಪುರುಷರು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ವಿದೇಶಗಳಲ್ಲಿ ಈಗಲೂ ಅವರ ಶಿಷ್ಯಕೋಟಿ ಗುರುಗಳು ಹಾಕಿಕೊಟ್ಟ ‘ಯೋಗ’ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಪರಮಹಂಸ ಸಚ್ಚಿದಾನಂದ ಯೋಗೀಶ್ವರರು ಜನಿಸಿದ್ದು 1865ರ ಫೆಬ್ರುವರಿ 16ರ ಗುರುವಾರ. ಪೂರ್ವಾಶ್ರಮದ ಹೆಸರು ಕುಪ್ಪುಸ್ವಾಮಿ. ತಂದೆ ಸೋಮಸುಂದರಂ ಮತ್ತು ತಾಯಿ ವಿಶಾಲಾಕ್ಷಮ್ಮ. 8ನೇ ತರಗತಿಯವರೆಗೆ ತಮಿಳುನಾಡಿನ ಕಂಚಿಯಲ್ಲಿ ಓದಿದರು.

ಬಾಲ್ಯದಲ್ಲಿಯೇ ದೈವಭಕ್ತರಾಗಿದ್ದ ಕುಪ್ಪುಸ್ವಾಮಿ ಏಕಾಂಬರೇಶ್ವರ (ಶಿವ)ನನ್ನು ಪೂಜಿಸುತ್ತಿದ್ದರು. ಅವರಿಗೆ 24 ವರ್ಷದವರಿದ್ದಾಗ ನಿತ್ಯಾನಂದ ಎಂಬ ಯೋಗಿ ಇವರಿಗೆ ಯೋಗ ರಹಸ್ಯ ಮತ್ತು ಏಕಾಂತ ವಿಷಯ ಉಪದೇಶಿಸಿದರು. ‘ಇಂದಿನಿಂದ ನೀನು ಪರಮಹಂಸ ಸಚ್ಚಿದಾನಂದ’ನೆಂದು ಆಶೀರ್ವದಿಸಿದರು. ಮುಂದೆ ಆ ಯೋಗಿ ಪರಮಹಂಸ ಸಚ್ಚಿದಾನಂದರಿಗೆ ಕಾಣಿಸಿಕೊಳ್ಳಲಿಲ್ಲ.

ತಂದೆ-ತಾಯಿಯರ ಒತ್ತಾಯದಿಂದ ಕೃಷ್ಣಭಕ್ತೆಯಾದ ಪೇರುಂದೇವಿಯನ್ನು ಪರಮಹಂಸರು ವಿವಾಹವಾದರು. ಯೋಗಾಭ್ಯಾಸ ಮಾಡಿಕೊಂಡು ಕಾಡು, ಮೇಡುಗಳಲ್ಲಿ ಅಲೆಯುತ್ತಿದ್ದ ಪರಮಹಂಸರು ಮನೆಯಲ್ಲಿಯೇ ಯೋಗಾಭ್ಯಾಸ ಮಾಡಲು ಪೇರುಂದೇವಿ ಅನುವು ಮಾಡಿಕೊಟ್ಟರು. ಪರಮಹಂಸರಿಗೆ 47 ವರ್ಷವಾದಾಗ ಪೇರುಂದೇವಿ ಇಹಲೋಕ ತ್ಯಜಿಸಿದರು.

 ನಂತರ ಸನ್ಯಾಸ ಸ್ವೀಕರಿಸಿದ ಪರಮಹಂಸ ಸಚ್ಚಿದಾನಂದ ಯೋಗೀಶ್ವರರು ಕಡಪ ಜಿಲ್ಲೆಯ ಗಡಿಕೋಟೆಯಲ್ಲಿ ನೆಲೆಸಿ ಯೋಗಸಿದ್ಧಿಗೈದರು. ಪ್ರಾಣಾಯಾಮ, ಯೋಗದ ಮೂಲಕ ಮನಶಾಂತಿ. ಆಧ್ಯಾತ್ಮಿಕ ಉನ್ನತಿ ಸಾಧಿಸುವುದನ್ನು ವಿವರಿಸುವ ‘ಜೀವಬ್ರಹ್ಮೈಕ್ಯ ರಾಜಯೋಗ ಸಾರಾಮೃತ’ ಗ್ರಂಥ ರಚಿಸಿದರು. ಲಕ್ಷಾಂತರ ಜನರಿಗೆ ಯೋಗಾಭ್ಯಾಸದ ಕ್ರಮ ಬೋಧಿಸಿದರು. ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಮಾರಿಷಸ್‌ಗೂ ತೆರಳಿ ಪ್ರವಚನ ನೀಡಿದರು.

ತಮ್ಮ ಜೀವಿತಾವಧಿಯಲ್ಲಿ ಹಲವು ಬಾರಿ ಬೆಂಗಳೂರಿಗೆ ಬಂದು ಪ್ರವಚನ, ಯೋಗ ಶಿಬಿರ ನಡೆಸಿಕೊಟ್ಟಿದ್ದರು. ಕೊನೆಯ ದಿನಗಳಲ್ಲಿ ಬೆಂಗಳೂರಿನ ಬಿನ್ನಿಪೇಟೆಯ ಬಳಿ ಇರುವ ಕೆಂಪಾಪುರ ಅಗ್ರಹಾರದಲ್ಲಿರುವ ಮಠದಲ್ಲಿ ಶ್ರೀಗಳು ಇಳಿದುಕೊಂಡಿದ್ದರು. 1957ರ ಜನವರಿ 8ರಂದು ಶರೀರ ತ್ಯಜಿಸಿದರು. ಎರಡು ದಿನಗಳ ನಂತರ ಗುರುಗಳ ಪಾರ್ಥಿವ ದೇಹವನ್ನು ಸಮಾಧಿ ಮಾಡಲಾಯಿತು. 
 
ಸ್ಮರಣೋತ್ಸವ
ಬುಧವಾರ ಪರಮಹಂಸ ಸಚ್ಚಿದಾನಂದ ಯೋಗೀಶ್ವರರ ದಿವ್ಯ ಸ್ಮರಣೋತ್ಸವ. ದೇಶ ವಿದೇಶದ ಭಕ್ತರು ಭಾಗವಹಿಸಲಿದ್ದು, ಅನ್ನದಾನವನ್ನೂ ಏರ್ಪಡಿಸಲಾಗಿದೆ.

ಸ್ಥಳ: ಕಡಪ ಶ್ರೀ ಪರಮಹಂಸ ಸಚ್ಚಿದಾನಂದ ಯೋಗಿಶ್ವರರ ಮಠ, ಕೆಂಪಾಪುರ ಅಗ್ರಹಾರ, ಮರಿಯಪ್ಪನ ಪಾಳ್ಯ, ಭುವನೇಶ್ವರಿ ನಗರ, ಬಿನ್ನಿಪೇಟೆ (ರೇಲ್ವೆ ಪ್ಯಾರಲಲ್). ದೂ: 2314 4364.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT