ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಜ್ಜನ ಇನ್ನೂ ಬಚ್ಚಾ: ಸಚಿವ ಕತ್ತಿ

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಳಗಾವಿ:  `ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನ ಅವರು ರಾಜಕಾರಣದಲ್ಲಿ ಇನ್ನೂ ಬಚ್ಚಾ. ಇಂಥವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ' ಎಂದು ಕೃಷಿ ಸಚಿವ ಉಮೇಶ ಕತ್ತಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕತ್ತಿ ಅವರು ವಿಶ್ವಾಸದ್ರೋಹ ಮಾಡಿದ್ದಾರೆ ಎಂದು ಸಜ್ಜನ ನೀಡಿರುವ ಹೇಳಿಕೆ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ ಪ್ರತಿಕ್ರಿಯೆ ನೀಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸರಿಯಾಗಿ ಹೇಳಿಕೆ ನೀಡಬೇಕು. ಆದರೆ, ಸಜ್ಜನ ಅವರಿಗೆ ತಮ್ಮ ಸ್ಥಾನದ ಮಹತ್ವ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

`ನಾನು ಯಡಿಯೂರಪ್ಪ ಅವರಿಗೆ ಯಾವುದೇ ದ್ರೋಹ ಮಾಡಿಲ್ಲ. ಯಾವ ರೀತಿಯ ದ್ರೋಹ ಮಾಡಿದ್ದೇನೆ ಎಂಬುದನ್ನು ಸಜ್ಜನ ಸಾಬೀತುಪಡಿಸಲಿ' ಎಂದ ಅವರು, ತಾವು ಬಿಜೆಪಿಯಲ್ಲಿಯೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು. 

`ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ನನಗೆ ಹಾಗೂ ಸಚಿವ ಮುರುಗೇಶ ನಿರಾಣಿ ಅವರಿಗೆ ಕಳಕಳಿ ಇದೆ. ಇದರರ್ಥ, ನಾವು ಕೆಜೆಪಿ ಸೇರಬೇಕೆಂದೇನಲ್ಲ. ಯಡಿಯೂರಪ್ಪ ಸಂಪುಟದಲ್ಲಿ ನಿರಾಣಿ ಅವರು ಸಚಿವರಾದವರು. ಆದ್ದರಿಂದ ಅವರು ಕೆಜೆಪಿಗೆ ಹೋಗಬೇಕು ಎಂದುಕೊಂಡಿದ್ದರು. ಆದರೆ, ಕೆಜೆಪಿ ಸೇರಲೇಬೇಕು ಎಂಬ ಒತ್ತಡ ಸರಿಯಲ್ಲ' ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸ್ಪರ್ಧೆ ಇದೆ. ಪ್ರಾದೇಶಿಕ ಪಕ್ಷಗಳಾದ ಜೆಡಿಎಸ್, ಬಿಎಸ್‌ಆರ್ ಕಾಂಗ್ರೆಸ್, ಕೆಜೆಪಿ ಪರಿಸ್ಥಿತಿ ಏನಾಗಲಿದೆ ಎಂಬುದು ಸದ್ಯದಲ್ಲಿಯೇ ಗೊತ್ತಾಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 38 ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ 45
ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ನನ್ನ ಕ್ಷೇತ್ರದ ಚುನಾವಣೆಯಲ್ಲಿ ಈವರೆಗೂ ನನಗಿಂತ ಪ್ರಬಲವಾದ ಅಭ್ಯರ್ಥಿಯನ್ನು ನೋಡಿಲ್ಲ. ಕೆಜೆಪಿಯವರು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಿ. ಯಡಿಯೂರಪ್ಪ ಅವರು ತಮ್ಮ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದರೂ ನನ್ನ ಗೆಲುವಿನ ಓಟಕ್ಕೆ ತಡೆ ಹಾಕಲು ಸಾಧ್ಯವಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT