ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಜ್ಜನ್ ವಿಚಾರಣೆಗೆ ತಡೆಯಾಜ್ಞೆ

Last Updated 11 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  28 ವರ್ಷಗಳ ಹಿಂದೆ (1984) ನಡೆದ ಸಿಖ್ ವಿರೋಧಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಮತ್ತು ಕಾಂಗ್ರೆಸ್‌ನ ಹಿರಿಯ ಮುಖಂಡ ಸಜ್ಜನ್ ಕುಮಾರ್ ವಿರುದ್ಧ ಕೆಳಹಂತದ ನ್ಯಾಯಾಲಯ ಕೈಗೆತ್ತಿಕೊಳ್ಳಲಿದ್ದ ವಿಚಾರಣೆಗೆ ಸುಪ್ರೀಂಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.

ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೆಳ ಹಂತದ ನ್ಯಾಯಾಲಯ ಗುರುವಾರ ಕೈಗೆತ್ತಿಕೊಳ್ಳಲಿದ್ದ ವಿಚಾರಣೆಯನ್ನು ಕೈಬಿಡಲು ನಿರ್ದೇಶನ ನೀಡುವಂತೆ ಕೋರಿ ಸಜ್ಜನ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಸದಾಶಿವಂ ಮತ್ತು ಬಿ.ಎಸ್. ಚವಾಣ್ ಅವರನ್ನು ಒಳಗೊಂಡ ನ್ಯಾಯಪೀಠ ಗುರುವಾರ ನಡೆಯಲಿದ್ದ ವಿಚಾರಣೆಗೆ ತಡೆಯಾಜ್ಞೆ ನೀಡಿದೆ.

ತಡೆಯಾಜ್ಞೆ ನೀಡುವಂತೆ ಕೋರಿ ಈ ಮೊದಲು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ ನಂತರ ಅವರು ಸುಪ್ರೀಂಕೊರ್ಟ್ ಮೋರೆ ಹೋಗಿದ್ದರು. ವಿಚಾರಣೆಯನ್ನು ಅನಗತ್ಯ ವಿಳಂಬ ಮಾಡುವ  ಉದ್ದೇಶದಿಂದ ಅವರು ಈ ತಂತ್ರ ಅನುಸರಿಸುತ್ತಿದ್ದಾರೆ ಎಂದು ಸಿಬಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಆದರೆ, ತನಿಖಾ ಸಂಸ್ಥೆಯ ಈ ವಾದವನ್ನು ನ್ಯಾಯಮೂರ್ತಿಗಳು ತಳ್ಳಿಹಾಕಿದರು.

ಸಿಖ್ ನರಮೇಧದ ನ್ಯಾಯಾಂಗ ತನಿಖೆ ನಡೆಸಿದ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಮತ್ತು ಜಿ.ಟಿ. ನಾನಾವತಿ ಆಯೋಗದ ಎದುರು ಸಾಕ್ಷ್ಯ ನುಡಿದ ಬಹುತೇಕ ಸಾಕ್ಷಿಗಳು ನಂತರ ಹೇಳಿಕೆ ಬದಲಾಯಿಸಿದ್ದಾರೆ. ಹೀಗಾಗಿ ಈ ಸಾಕ್ಷಿಗಳ ಪಾಟೀ ಸವಾಲು ನಡೆಸಲು ಅನುಮತಿ ನೀಡುವಂತೆ ಕೋರಿ ಸಜ್ಜನ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಜುಲೈ 27ರಂದು ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳದಂತೆ ಸುಪ್ರೀಂಕೋರ್ಟ್ ಸ್ಥಳೀಯ ನ್ಯಾಯಾಲಯಕ್ಕೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT