ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಆಲೋಚನೆಯ ದೊಡ್ಡ ಸಮಾಜ ಸುಧಾರಣೆಗಳು

Last Updated 26 ಸೆಪ್ಟೆಂಬರ್ 2013, 8:48 IST
ಅಕ್ಷರ ಗಾತ್ರ

ಸಾರಿಕಾ ಪನ್ವಾರ್
ಅದು ಗುಡ್ಡಗಾಡು ಪ್ರದೇಶ. ಕಿತ್ತು ತಿನ್ನುವ ಬಡತನದ ಕಾರಣದಿಂದಾಗಿಯೇ ಅಲ್ಲಿನ ಬಹುತೇಕ ಮಹಿಳೆಯರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು. ತಮಗೆ ಅರಿವಿಲ್ಲದೆಯೇ ಎಚ್‌ಐವಿ ಪಾಸಿಟಿವ್‌ನಿಂದ ಬಳಲುತ್ತಿದ್ದ ಅವರು ಇತರರಿಗೂ ಅದನ್ನು ಪಸರಿಸುತ್ತಿದ್ದರು.

ಎಚ್‌ಐವಿ ಪಾಸಿಟಿವ್‌ಗೆ ತುತ್ತಾಗಿದ್ದ ಸಾವಿರಾರು ಜನರಲ್ಲಿ ಬಹುತೇಕರು 25ರ ಒಳಗಿನ ವಯೋಮಾನದವರು. ಮೌಢ್ಯತೆ ಮತ್ತು ಕಂದಾಚಾರದ ಈ ಪ್ರದೇಶಕ್ಕೆ ತೆರಳಿದ 28ರ ಯುವತಿ ಸಾರಿಕ ಕೇವಲ ಎರಡೇ ವರ್ಷಗಳಲ್ಲಿ ಈ ಪ್ರದೇಶದ ಇಡೀ ಚಿತ್ರಣವನ್ನೇ ಬದಲಿಸಿದರು.

ಹೌದು. ಹಿಮಾಚಲ ಪ್ರದೇಶದ ಕಂಗ್ರಾ ಕಣಿವೆಯಲ್ಲಿ ಸಾರಿಕ ಆರೋಗ್ಯದ ಮಂತ್ರ ಜಪಿಸಿದರು. ಇದರ ಫಲವಾಗಿ ಏರುಗತಿಯಲ್ಲಿದ್ದ ಎಚ್‌ಐವಿ ಪ್ರಕರಣಗಳು ಎರಡೇ ವರ್ಷದಲ್ಲಿ ಗಣನೀಯವಾಗಿ ಇಳಿಕೆಯಾದವು.

ಹಳ್ಳಿ ಹಳ್ಳಿಗೂ ತೆರಳಿ ಮಹಿಳೆಯರನ್ನು ಭೇಟಿ ಮಾಡಿ ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸಿದರು. ಈ ಕಣಿವೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ನೆರವಿನಿಂದ 80 ಕ್ಕೂ ಹೆಚ್ಚು ರೆಡ್ ರಿಬ್ಬನ್ ಕ್ಲಬ್‌ಗಳನ್ನು ತೆರೆದು ಅಲ್ಲಿ ಎಚ್‌ಐವಿ ಪೀಡಿತರಿಗೆ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ನೀಡಿದರು.

ಸಾವಿರಾರು ರೋಗಿಗಳು ಚಿಕಿತ್ಸೆಯಿಂದ ಚೇತರಿಸಿಕೊಂಡರು. ಇವರಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವ ಸರ್ಕಾರದ ವತಿಯಿಂದ ಆರ್ಥಿಕ ನೆರವು ಒದಗಿಸಿದರು. ಮೂಲ ಸೌಕರ್ಯಗಳ ಒದಗಿಸಿ ಅವರ ಜೀವನಕ್ಕೂ ನೆರವಾದರು ಸಾರಿಕಾ.

ಅನನ್ಯಾ ಅಶೋಕ್

ನಮ್ಮ ಸುತ್ತಲಿನ ಪಾರ್ಕ್ ಅಥವಾ ಕೆರೆ ಗಳು ಮಲಿನವಾಗಿದ್ದರೆ ಸಾಮಾನ್ಯವಾಗಿ ಸರ್ಕಾರ ಅಥವಾ ಜನಪ್ರತಿನಿಧಿಗಳಿಗೆ ಪತ್ರ ಬರೆಯುತ್ತೇವೆ ಅಥವಾ ಮಾಧ್ಯಮಗಳ ಮುಖಾಂತರ ಸುದ್ದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆಯಲು ಯತ್ನಿಸುತ್ತೇವೆ. ಆದರೆ ಯಾರೂ ಮಲಿನಗೊಂಡ ಪಾರ್ಕ್ ಅಥವಾ ಕೆರೆಯನ್ನು ಸ್ವಚ್ಛಗೊಳಿಸುತ್ತೇವೆ  ಎಂಬ ದಿಟ್ಟ ನಿರ್ಧಾರವನ್ನು ತಳೆಯುವುದಿಲ್ಲ. 
  
ಆದರೆ ತಮಿಳುನಾಡಿನ 22ರ ಹರೆಯದ ಯುವತಿ ಅನನ್ಯಾ ಅಶೋಕ್ ಮಲಿನಯುಕ್ತ ಕೆರೆ ಪ್ರದೇಶ (ಜವುಗು)ವನ್ನು ಸ್ವಚ್ಛಗೊಳಿಸುವುದಾಗಿ ದಿಟ್ಟ ನಿರ್ಧಾರ ಕೈಗೊಂಡು ಅದರಂತೆ  ಆ ಮಲಿನ ಪ್ರದೇಶವನ್ನು ಸುಂದರ ತಾಣವಾಗಿ ನಿರ್ಮಾಣ ಮಾಡಿರುವುದರ ಯಶೋಗಾಥೆ ಇಲ್ಲಿದೆ.  ಒಮ್ಮೆ ಪಲ್ಲಿಕರನೈ ಕೆರೆ ಅಂಗಳಕ್ಕೆ ಅನನ್ಯಾ ಭೇಟಿ ನೀಡಿದಾಗ, ಮೂಗು ಮುಚ್ಚಿಕೊಂಡೇ ಸುತ್ತಬೇಕಾದ ಪರಿಸ್ಥಿತಿ ಅವರಿಗೆ ಎದುರಾಯಿತು. ಸುಂದರವಾಗಿದ್ದ ಕೆರೆ ಅಂಗಳ ಗಬ್ಬೆದ್ದು ನಾರುತ್ತಿತ್ತು.

ಪಲ್ಲಿಕರನೈ ಪಟ್ಟಣದ ತ್ಯಾಜ್ಯವೆಲ್ಲ ಈ ಕೆರೆ ಅಂಗಳದಲ್ಲಿ ಬಂದು ಬೀಳುತ್ತಿತ್ತು. ಈ ಪರಿಸರವನ್ನು ಕಂಡು ಬೇಸತ್ತ ಅನನ್ಯಾ ಇದನ್ನು ಸ್ವಚ್ಛಗೊಳಿಸುವುದಾಗಿ ಶಪಥ ಮಾಡಿದರು. ಅವರ ಶಪಥದ ಫಲವೇ ಇಂದು ಪಲ್ಲಿಕರನೈ ಕೆರೆ ಅಂಗಳ ಸುಂದರ  ಪ್ರವಾಸಿ ತಾಣವಾಗಿದೆ.
ಸ್ಥಳೀಯರ ಮತ್ತು ಜನಪ್ರತಿನಿಧಿಗಳ ನೆರವಿನೊಂದಿಗೆ ಅನನ್ಯಾ, ತಂಡವನ್ನು ಕಟ್ಟಿಕೊಂಡು ಕೆರೆ ಅಂಗಳವನ್ನು ಸ್ವಚ್ಛಗೊಳಿಸುವ ಕೈಂಕರ್ಯಕ್ಕೆ ಇಳಿದೇ ಬಿಟ್ಟರು.

ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸಿ ಮತ್ತು ಸಂಸ್ಕರಿಸುವ ತ್ಯಾಜ್ಯ ಸಂಸ್ಕರಣ ಘಟಕವನ್ನು ತೆರೆದರು.  ಮರುಬಳಕೆಗೆ ಲಭ್ಯವಾಗದ ತ್ಯಾಜ್ಯವನ್ನು ಬೇರೆ ಕಡೆಗೆ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಿದರು. ಹೀಗೆ ಅವಿರತ ಹಲವು ತಿಂಗಳುಗಳ ಶ್ರಮದ ಫಲವಾಗಿ ಹಾಳು ಬಿದಿದ್ದ ಈ ಜವುಗು ಪ್ರದೇಶ ಸುಂದರ ಸ್ಥಳವಾಗಿ ರೂಪುಗೊಂಡಿತು. ಸುಮಾರು 350ಕ್ಕೂ ಹೆಚ್ಚು ಜೀವ ಪ್ರಬೇಧಗಳಿಗೆ  ಈ  ಅಂಗಳ ಆಶ್ರಯ ತಾಣವಾಗಿದೆ. ಪರಿಸರದ ಮೇಲಿನ ಅನನ್ಯ ಸೇವೆಗೆ  ಅನನ್ಯಾ ಅವರನ್ನು ಸ್ಥಳೀಯ ಸಂಸ್ಥೆಗಳು ಗೌರವಿಸಿವೆ. ರೋಟರಿ ಸಂಸ್ಥೆ ‘ಯುವ ಸಾಧಕಿ’ ಎಂಬ ಬಿರುದು ನೀಡಿ ಸನ್ಮಾನಿಸಿದೆ.

ಮಮುನಾ ಫಾರೂಕ್

ಬ್ರಿಟನ್‌ನಲ್ಲಿ ಮುಸ್ಲಿಮರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಯುವ ವಕೀಲೆ ಮಮುನಾ ಫಾರೂಕ್ 2012ನೇ ಸಾಲಿನ ಪ್ರತಿಷ್ಠಿತ ‘ಬ್ರಿಟಿಷ್ ಮುಸ್ಲಿಂ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ತಮ್ಮ ವಕೀಲಿ ವೃತ್ತಿಯ ಮೂಲಕ  ಬ್ರಿಟನ್‌ನ ಕಾನೂನು ವ್ಯಾಪ್ತಿಯಲ್ಲಿ ಮುಸ್ಲಿಮರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವುದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ.

27ರ ಹರೆಯದ ಮಮುನಾ ಕಾನೂನಿನಲ್ಲಿ ಪದವಿ ಪಡೆದಿದ್ದಾರೆ. ಪ್ರಸ್ತುತ ವೇಲ್ಸ್‌ನಲ್ಲಿ ಸಹಾಯಕಿ ಸಾಲಿಸಿಟರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಬ್ರಿಟನ್‌ನಲ್ಲಿ ಸುಮಾರು 25 ಲಕ್ಷ ಮುಸ್ಲಿಮರು ನೆಲೆಸಿದ್ದು, ಅವರ ಕಾನೂನಾತ್ಮಕ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.

ವೀಸಾ ಸಮಸ್ಯೆ, ಉದ್ಯೋಗದಲ್ಲಿನ ಸಮಸ್ಯೆಗಳು, ಮುಸ್ಲಿಂ ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳು, ಧಾರ್ಮಿಕ ಆಚರಣೆಯ ಸಮಸ್ಯೆಗಳು ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಕಾನೂನಾತ್ಮಕ ಪರಿಹಾರ, ಮಾರ್ಗದರ್ಶನ ನೀಡುತ್ತಿದ್ದಾರೆ. ಬ್ರಿಟನ್ ಸರ್ಕಾರ, ಮುಸ್ಲಿಂ ಸಮುದಾಯವರು ವಿವಿಧ ಕ್ಷೇತ್ರಗಳಲ್ಲಿ ತೋರಿದ ಅಸಾಮಾನ್ಯ ಸಾಧನೆಗಾಗಿ ‘ಬ್ರಿಟಿಷ್ ಮುಸ್ಲಿಂ' ಪ್ರಶಸ್ತಿಯನ್ನು ನೀಡುತ್ತಿದೆ.

2012ನೇ ಸಾಲಿನಲ್ಲಿ ಸಾಹಿತ್ಯ,  ಕ್ರೀಡೆ, ಸಮಾಜ ಸೇವೆ, ವಾಣಿಜ್ಯ, ವಿಜ್ಞಾನ, ಕೃಷಿ, ಕೈಗಾರಿಕೆ, ಉದ್ಯಮ ಕ್ಷೇತ್ರಗಳು ಸೇರಿದಂತೆ ಸುಮಾರು 10 ಸಾವಿರ ಜನರು ಈ ಪ್ರಶಸ್ತಿಗೆ ನೋಂದಣೆ ಮಾಡಿದ್ದರು. ಆದರೆ ಬ್ರಿಟನ್ ಸರ್ಕಾರ ಮಮುನಾ ಅವರ ಸೇವೆಯನ್ನು ಗೌರವಿಸಿ ಈ ಪ್ರಶಸ್ತಿ ನೀಡಿದೆ.

‘ಧಾರ್ಮಿಕ ಕಟ್ಟುಪಾಡುಗಳ ಮಧ್ಯೆಯೂ ಮುಸ್ಲಿಂ ಯುವತಿಯರು ಉತ್ತಮ ಸಾಧನೆಗಳನ್ನು ಮಾಡುವ ಮೂಲಕ ಸಮಾಜದ ಮುಖ್ಯವಾಹಿಯಲ್ಲಿ ಗುರುತಿಸಿಕೊಳ್ಳಬಹುದು ಎಂಬುದಕ್ಕೆ ನಾನೇ ಜ್ವಲಂತ ಸಾಕ್ಷಿ’ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಮುನಾ ಭಾವುಕರಾಗಿ ನುಡಿದರು.

ವರುಣ್ ಅಗರ್‌ವಾಲ್

ಅತಿ ಸಣ್ಣ ‘ಐಡಿಯಾ’ ಒಮೊಮ್ಮೆ ಅತಿ ದೊಡ್ಡ ಯಶಸ್ಸನ್ನು ತಂದುಕೊಡ ಬಲ್ಲವು ಎಂಬುದಕ್ಕೆ ವರುಣ್ ಅಗರ್‌ವಾಲ್ ಸಾಕ್ಷಿಯಾಗಿದ್ದಾರೆ.
ಬಿ.ಇ ಪದವೀಧರ ವರುಣ್ ಗೆಳೆಯ ಮಲ್ಹೋತ್ರ ಅವರೊಂದಿಗೆ ಸೇರಿ ಕೇವಲ 1 ಲಕ್ಷ ರೂಪಾಯಿ ಬಂಡವಾಳದಿಂದ ಆರಂಭಿಸಿದ ‘ಅಲ್ಮಾ ಮೇಟರ್’ ಟಿ-ಶರ್ಟ್ ತಯಾರಿಕಾ ಕಂಪೆನಿ ಇಂದು ದೇಶದ 140 ನಗರಗಳು ಸೇರಿದಂತೆ ಆರು ದೇಶಗಳಲ್ಲಿ ವಹಿವಾಟು ನಡೆಸುತ್ತಿದೆ. ಇದೆಲ್ಲಾ ಸಾಧ್ಯವಾಗಿದ್ದು ಒಂದು ಸಣ್ಣ ಆಲೋಚನೆಯಿಂದ.

ಯುವ ಜನರನ್ನು ಸೆಳೆಯುವ ಸಲುವಾಗಿ ಬರಹಗಳಿರುವ ಟಿ-–ಶರ್ಟ್ ತಯಾರಿಸುವ ಯೋಜನೆ ರೂಪಿಸಿದರು. ಆದರೆ ಮಾರುಕಟ್ಟೆಯಲ್ಲಿ ಬ್ರಾಂಡೆಡ್ ಕಂಪೆನಿಗಳಿಗೆ ಪೈಪೋಟಿ ನೀಡುವುದು ಕಷ್ಟವಾಗಿತ್ತು. ಆಗ ಶೈಕ್ಷಣಿಕ ಸಂಸ್ಥೆಗಳಿಗೆ ಟಿ–-ಶರ್ಟ್ ಒದಗಿಸುವ ಯೋಚನೆ ಹೊಳೆಯಿತು. ಕೂಡಲೇ ಹಲವಾರು ಶಾಲಾ- ಕಾಲೇಜುಗಳನ್ನು ಸಂಪರ್ಕಿಸಿ ಟಿ–-ಶರ್ಟ್ ಒದಗಿಸಿಕೊಡುವ ವ್ಯವಹಾರವನ್ನು ಕುದುರಿಸಿಕೊಂಡರು. ಇಂದು ಸುಮಾರು 2000ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಗೆ ಟಿ–-ಶರ್ಟ್ ಒದಗಿಸುತ್ತಿದ್ದಾರೆ ಇವರು.

ಉತ್ಪನ್ನದ ಪ್ರಚಾರಕ್ಕೆ ಟಿ.ವಿ ಮತ್ತು ದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡುವಷ್ಟು ಹಣವಿಲ್ಲದಿದ್ದರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಿದರು. ಇಂದು ಮೂರು ಲಕ್ಷ ಜನರು ಇವರ ಫೇಸ್‌ಬುಕ್ ಪೇಜನ್ನು ಲೈಕ್ ಮಾಡಿದ್ದಾರೆ. ಇವರಲ್ಲಿ ಸಾವಿರಾರು ಜನರು ನಮ್ಮ ಗ್ರಾಹಕರು ಎಂದು ವರುಣ್ ಹೇಳುತ್ತಾರೆ. 2009ರಲ್ಲಿ ಆರಂಭವಾದ ಈ ಕಂಪೆನಿ ಕೇವಲ ನಾಲ್ಕು ವರ್ಷಗಳಲ್ಲಿ ಸುಮಾರು 7 ಕೋಟಿ ರೂಪಾಯಿ ವಹಿವಾಟು ನಡೆಸಿದೆ.

‘ಮಾರುಕಟ್ಟೆ ಮತ್ತು ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ಉದ್ಯಮ ಸ್ಥಾಪಿಸಲು ಮುಂದಾಗಬೇಕು. ಜಾಹೀರಾತುಗಳನ್ನು ನೀಡುವುದಕ್ಕಿಂತಲೂ ಸಾಮಾಜಿಕ ಜಾಲತಾಣಗಳ ಮುಖಾಂತರ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಬೇಕು. ತಮ್ಮನ್ನು ಸಂಪೂರ್ಣವಾಗಿ ಉದ್ಯಮದಲ್ಲಿ ತೊಡಗಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎನ್ನುತ್ತಾರೆ 26ರ ಹರೆಯದ ವರುಣ್.
–ಪೃಥ್ವಿರಾಜ್ ಎಂ.ಎಚ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT