ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಉದ್ಯಮಿಗಳಿಗೆ ಸ್ಟಾರ್ಟ್‌ಅಪ್

Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ದೊಡ್ಡ ಉದ್ದಿಮೆಯ ಕನಸು ಕಟ್ಟಿಕೊಂಡು ವೈಯಕ್ತಿಕವಾಗಿ ಅಥವಾ ಪಾಲುದಾರಿಕೆಯ ಮೇಲೆ ಆರಂಭಿಸುವ ಕಂಪೆನಿಗಳು ದೇಶದಲ್ಲಿ ಹಲವು. ಅದರಲ್ಲೂ ಐಟಿ ವಲಯವನ್ನೇ ಗಣನೆಗೆ ತೆಗೆದುಕೊಂಡರೆ ಬೆಂಗಳೂರು ಈಗಷ್ಟೇ ಹುಟ್ಟಿಕೊಂಡ (ಸ್ಟಾರ್ಟ್‌ಅಪ್) ಕಂಪೆನಿಗಳ ಸ್ವರ್ಗ.

ದೊಡ್ಡ ಕಂಪೆನಿಗಳ ಗುತ್ತಿಗೆಗಳನ್ನು ಪಡೆಯುವುದೋ ಅಥವಾ ತಾವೇ ತಯಾರಿಸಿದ ತಂತ್ರಾಂಶಗಳನ್ನು ದೊಡ್ಡ ಕಂಪೆನಿಗಳಿಗೆ ಮಾರಾಟ ಮಾಡಿ ಬಂದ ದುಡ್ಡಿನಿಂದ ಸಂಭ್ರಮಿಸುವ ಈ ಕಂಪೆನಿಗಳ ಬಂಡವಾಳ ಅದರಲ್ಲಿ ದುಡಿಯುವ ಬೆರಳಿಕೆಯಷ್ಟು ಕೌಶಲಭರಿತ ನೌಕರರು ಮಾತ್ರ. ಇಂಥ ಕಂಪೆನಿಗಳು ಬೆಂಗಳೂರಿನ ಎಲ್ಲಾ ಬಡಾವಣೆಗಳಲ್ಲೂ ಕಾರ್ಯ ನಿರ್ವಹಿಸುತ್ತಿವೆ. ಕೆಲವು ಕಂಪೆನಿಗಳಿಗೆ ಮಾಲೀಕರ ವಾಸದ ಮನೆಯೇ ಕಚೇರಿಯೂ ಆಗಿರುತ್ತದೆ. ಹೊಸಬರಿಗೆ ಕೆಲಸ ನೀಡಿ ಉತ್ತೇಜನ ನೀಡುವ ಇಂಥ ಕಂಪೆನಿಗಳ ಹಿತಕಾಯಲು `ರಾಷ್ಟ್ರೀಯ ತಂತ್ರಾಂಶ ಹಾಗೂ ಸೇವಾ ಸಂಸ್ಥೆಗಳ ಒಕ್ಕೂಟ' (ನಾಸ್ಕಾಂ) ಮುಂದಾಗಿದೆ.

ನಾಸ್ಕಾಂ ಆಹ್ವಾನ
ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ದೇಶದಾದ್ಯಂತ ಹತ್ತು ಸಾವಿರ ಸ್ಟಾರ್ಟ್‌ಅಪ್ ಕಂಪೆನಿಗಳ ಸ್ಥಾಪನೆಗೆ ನಾಸ್ಕಾಂ ಆಹ್ವಾನ ನೀಡಿತ್ತು. ಕೇರಳದಲ್ಲೂ ಇದಕ್ಕೆ ಚಾಲನೆ ದೊರೆತ ನಂತರ ಇದೀಗ ಕರ್ನಾಟಕ ಸರ್ಕಾರವೂ ಇಂಥ (ಸ್ಟಾರ್ಟ್‌ಅಪ್) ಕಂಪೆನಿಗಳ ಉತ್ತೇಜನಕ್ಕೆ ಮುಂದಾಗಿದೆ. ಇತ್ತೀಚೆಗೆ ಇದರ ಉದ್ಘಾಟನಾ ಸಮಾರಂಭವೂ ಬೆಂಗಳೂರಿನ ಡೈಮಂಡ್ ಡಿಸ್ಟ್ರಿಕ್ಟ್‌ನಲ್ಲಿ ನಡೆಯಿತು.

`ಸ್ಟಾರ್ಟ್‌ಅಪ್' ಪ್ಯಾಕೇಜ್
ಸ್ಟಾರ್ಟ್‌ಅಪ್ ಕಂಪೆನಿಗಳನ್ನು ತೆರೆಯುವವರಿಗೆ ಸುಮಾರು ಹತ್ತು ಸಾವಿರ ಚದರಡಿಯಷ್ಟು ಕಚೇರಿ ಸ್ಥಳಾವಕಾಶ, 70 ಉದ್ಯೋಗಿಗಳು ಕೂರುವಷ್ಟು ಜಾಗ, ಶೇ 100ರಷ್ಟು ನಿರಂತರ ವಿದ್ಯುತ್ ಪೂರೈಕೆ, ಅಡೆತಡೆ ಇಲ್ಲದಂತಹ ಅಂತರ್ಜಾಲ ಸಂಪರ್ಕ ವ್ಯವಸ್ಥೆ, ಜತೆಗೆ ಕಚೇರಿ ಆಡಳಿತಕ್ಕೆ ಸಂಬಂಧಿಸಿದಂತೆ ಸಭೆ ನಡೆಸಲು ಯೋಗ್ಯವಾದ ನಾಲ್ಕು ಸಭಾಂಗಣ ಕೊಠಡಿಗಳು `ಸ್ಟಾರ್ಟ್‌ಅಪ್' ಪ್ಯಾಕೇಜ್‌ನಲ್ಲಿ ಇರಲಿವೆ.

ಒಂದೇ ಸೂರು-ಹಲವು ಕೆಲಸ
`ನಾಸ್ಕಾಂ ನೀಡಿರುವ ವಿಶ್ವಶ್ರೇಣಿ ಮೂಲಸೌಕರ್ಯದಿಂದ ಸ್ಟಾರ್ಟ್‌ಅಪ್ ಕಂಪೆನಿಗಳ ಆರಂಭ ಮಾತ್ರವಲ್ಲ, ಅವುಗಳ ಭವಿಷ್ಯವೂ ಉತ್ತಮವಾಗಿರಲಿದೆ. ಒಂದೇ ಸೂರಿನಡಿ ಹಲವು ಆನ್ವೇಷಣೆಗಳು ನಡೆಯುವ ಸಾಧ್ಯತೆ ಇವೆ. ಹಲವು ಕಂಪೆನಿಗಳು ಒಗ್ಗೂಡಿ ತಮ್ಮ ಜ್ಞಾನ, ಅನುಭವವನ್ನು ಹಂಚಿಕೊಂಡಲ್ಲಿ ಉದ್ದಿಮೆಯೂ ಉತ್ತಮವಾಗಿ ನಡೆಯಲಿದೆ' ಎಂದು ಮಾಹಿತಿ ಹಾಗೂ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಅವರು ಆ ಸಂದರ್ಭದಲ್ಲಿ ಹೇಳಿದ್ದು ಸಣ್ಣ ಉದ್ದಿಮೆದಾರರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಹೀಗಾಗಿ, ಹತ್ತು ಸಾವಿರ ಸ್ಟಾರ್ಟ್‌ಅಪ್ ಕಂಪೆನಿಗಳು ಬರಬಹುದಾದ ನಿರೀಕ್ಷೆಯಂತೂ ಮೂಡಿದೆ. ಈ ಮಧ್ಯೆ, 150 ದಿನದೊಳಗೇ ಎರಡು ಸಾವಿರಕ್ಕೂ ಹೆಚ್ಚು ಅರ್ಜಿಗಳು ನಾಸ್ಕಾಂ ಕೈಸೇರಿವೆ. ಇವುಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕಂಪೆನಿಗಳೂ ಸೇರಿವೆ.

ಹೊಸ ಸ್ಟಾರ್ಟ್‌ಅಪ್ ಕಂಪೆನಿಗಳ ಆಯ್ಕೆ ಪ್ರಕ್ರಿಯೆ ಇದೀಗ ಉದ್ದಿಮೆ ಕ್ಷೇತ್ರ ಹಾಗೂ ಸರ್ಕಾರದ ನಿರ್ಣಯಗಳ ಮೇಲೆ ಅವಲಂಬಿಸಿದೆ. ಆದರೆ ಈ `ಸ್ಟಾರ್ಟ್‌ಅಪ್'ಗೆ ಉತ್ತೇಜನ ನೀಡುವ ನಿರ್ಧಾರದಿಂದಾಗಿ ಕರ್ನಾಟಕ ಸರ್ಕಾರ, ಸ್ಥಳೀಯ ಉದ್ದಿಮೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವುದಂತೂ ಸತ್ಯ.

ಗೂಗಲ್, ಮೈಕ್ರೊಸಾಫ್ಟ್
ಹೀಗೆ ಆರಂಭವಾಗುತ್ತಿರುವ ಕಂಪೆನಿಗಳಲ್ಲಿ ಈಗಾಗಲೇ ಐಟಿ ಕ್ಷೇತ್ರದಲ್ಲಿ ಜಗತ್ತನ್ನೇ ಆಳುತ್ತಿರುವ ಗೂಗಲ್, ಮೈಕ್ರೊಸಾಫ್ಟ್‌ನಂತಹ ಕಂಪೆನಿಗಳೂ ಸೇರಿವೆ. ಈ ಕಂಪೆನಿಗಳು ತಮ್ಮದೇ ಆದ ಕೆಲವು ನಿರ್ದಿಷ್ಟ ಯೋಜನೆಗಳ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಸಣ್ಣ ಪ್ರಮಾಣದ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿರುವುದು ನಾಸ್ಕಾಂನ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಕೇವಲ ಇಷ್ಟು ಮಾತ್ರವಲ್ಲ, ಐಟಿ ರಾಜಧಾನಿಯಾಗಿದ್ದರೂ ಬೆಂಗಳೂರು ಪಕ್ಕದ ಹೈದರಾಬಾದ್‌ಗೆ ಹೋಲಿಸಿದಲ್ಲಿ ಎಲೆಕ್ಟ್ರಾನಿಕ್ಸ್ ಉದ್ದಿಮೆಯಲ್ಲಿ ಇನ್ನೂ ಹಿಂದಿದೆ.

ಈ ಅಂತರವನ್ನು ತಗ್ಗಿಸುವ ದೃಷ್ಟಿಯಿಂದ ಕರ್ನಾಟಕದ ಪೀಣ್ಯ, ದೇವನಹಳ್ಳಿ, ಕೋಲಾರ, ಮೈಸೂರು ಸೇರಿದಂತೆ ಐದು ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್ಸ್ ಕಂಪೆನಿಗಳ ಸಮೂಹಗಳನ್ನು ಹುಟ್ಟುಹಾಕುವ ಯೋಜನೆಗೆ ಚಾಲನೆ ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆಯಲ್ಲಿ ಆರಂಭವಾಗಲಿರುವ ಈ ಸಮೂಹಗಳಿಗೆ ನೂರು ಕೋಟಿ ರೂಪಾಯಿ ಹಣ ಬಿಡುಗಡೆಗೆ ಹಸಿರು ನಿಶಾನೆಯೂ ಸಿಕ್ಕಿದೆ.

ಇಸ್ರೇಲ್ ಜತೆ ಒಪ್ಪಂದ
2012ರಲ್ಲಿ 4500 ಕೋಟಿ ಡಾಲರ್‌ಗಳಷ್ಟು ವಹಿವಾಟು ಹೊಂದಿದ್ದ ಈ ಉದ್ದಿಮೆ ಕ್ಷೇತ್ರವನ್ನು 2020ರ ವೇಳೆಗೆ ಹತ್ತುಪಟ್ಟು ದೊಡ್ಡ ಪ್ರಮಾಣಕ್ಕೆ ವೃದ್ಧಿಗೊಳ್ಳುವಂತೆ ಮಾಡುವುದು `ಸ್ಟಾರ್ಟ್‌ಅಪ್' ಪರಿಕಲ್ಪನೆಯ ಹಿಂದಿರುವ ಗುರಿಯಾಗಿದೆ. ಈ ಸಂಬಂಧ ಇಸ್ರೇಲ್‌ನೊಂದಿಗೆ 17 ಒಪ್ಪಂದಗಳಿಗೆ ಕರ್ನಾಟಕ ಸರ್ಕಾರ ಸಹಿ ಹಾಕಿದೆ. ಇದರನ್ವಯ ಕರ್ನಾಟಕ-ಇಸ್ರೇಲ್ ಕೈಗಾರಿಕಾ ಸಂಶೋಧನೆ ಹಾಗೂ ಅಭಿವೃದ್ಧಿ ಯೋಜನೆಯಲ್ಲಿ ಎರಡೂ ರಾಷ್ಟ್ರಗಳು ಸಮ ಪ್ರಮಾಣದಲ್ಲಿ ದುಡಿಯಲಿವೆ.

ಹೊಸತೇನೂ ಅಲ್ಲ
`ಸ್ಟಾರ್ಟ್‌ಅಪ್'  ಎನ್ನುವುದು ನಾಗರಿಕ ಸಮಾಜದಲ್ಲಿ ಹೊಸತೇನೂ ಅಲ್ಲ. ಕೈಗಾರಿಕೆ ಹಾಗೂ ಉದ್ದಿಮೆಗಳು ಆರಂಭವಾದಾಗಿನಿಂದ ಹೊಸ ಹೊಸ ಕಂಪೆನಿಗಳು ಹುಟ್ಟಿಕೊಳ್ಳುತ್ತಲೇ ಇವೆ. ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆಯುತ್ತಾ ಇಂಥದ್ದೊಂದು (ಸ್ಟಾರ್ಟ್‌ಅಪ್) ಹೆಸರನ್ನು ಅದಕ್ಕೆ ನೀಡಿದೆ.

ಅಮೆರಿಕದಲ್ಲಿ ಈ ಪರಿಕಲ್ಪನೆ ಒಡಮೂಡಿದ್ದು 1960ಕ್ಕೂ ಮೊದಲು. ಆದರೆ ಭಾರತದಲ್ಲಿ ಐಟಿ ಉದ್ದಿಮೆಗಳು ಕಾಲಿಟ್ಟ ನಂತರ ಇನ್ಫೊಸಿಸ್, ವಿಪ್ರೊ, ಪಾಟ್ನಿ, ಸತ್ಯಂ ಮೊದಲಾದ ಕಂಪೆನಿಗಳು ಮೊದಲಿಗೆ ಸಣ್ಣ ಪ್ರಮಾಣದಲ್ಲಿಯೇ, ಅಂದರೆ ಸ್ಟಾರ್ಟ್‌ಅಪ್‌ಗಳ ಮಾದರಿಯಲ್ಲಿಯೇ ಆರಂಭಗೊಂಡವು. ನಿರಂತರ ಪರಿಶ್ರಮದ ನಂತರ ಈಗ ಶತಕೋಟಿ ಡಾಲರ್ ವಹಿವಾಟು ನಡೆಸುವಷ್ಟು ಬೃಹತ್ ಕಂಪೆನಿಗಳಾಗಿ ಬೆಳೆದು ನಿಂತಿವೆ.

ಖರೀದಿ-ವಿಲೀನ
ಸ್ಟಾರ್ಟ್‌ಅಪ್‌ಗಳಾಗಿ ಹುಟ್ಟಿಕೊಂಡು ಗಮನಾರ್ಹ ಆವಿಷ್ಕಾರಗಳನ್ನು ಮಾಡಿದಂತಹ ಕಂಪೆನಿಗಳನ್ನು ದೊಡ್ಡ ಕಂಪೆನಿಗಳು ಖರೀದಿಸಿ ವಿಲೀನಗೊಳಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಉದಾಹರಣೆಗೆ ಯುಟ್ಯೂಬ್ ಅನ್ನು ಗೂಗಲ್ ಖರೀದಿಸಿತು. ಅಲ್ಲಿನ ಉದ್ಯೋಗಿಗಳಿಗೆ ಇದೊಂದು ಬಹುದೊಡ್ಡ ಅವಕಾಶ. ಚಿಕ್ಕ ಕಂಪೆನಿಗಳಲ್ಲಿ ದುಡಿಯುತ್ತಿದ್ದವರು ಒಮ್ಮೆಲೇ ದೊಡ್ಡ ಕಂಪೆನಿಗಳ ತೆಕ್ಕೆಗೆ ಬಂದು ಬೀಳುತ್ತಾರೆ. ಇನ್ನು ಕೆಲವು ಖರೀದಿ-ವಿಲೀನ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಕಂಪೆನಿಗೇ ಖರೀದಿಸಿದ ಕಂಪೆನಿ ತನ್ನದೇ ಉದ್ಯೋಗಿಗಳನ್ನು ನೇಮಿಸಿದ ಉದಾಹರಣೆಗಳೂ ಇವೆ.

ಮಾಜಿ ಉದ್ಯೋಗಿ-ಈಗ ಉದ್ಯಮಿ
ಈಗ ಬೆಂಗಳೂರಿನಲ್ಲಿ ಸಾವಿರಾರು ಸಣ್ಣ ಕಂಪೆನಿಗಳಿವೆ. ಇವುಗಳ ಮಾಲೀಕರು, ಇದಕ್ಕೂ ಮುನ್ನ ದೊಡ್ಡ ಕಂಪೆನಿಗಳ ನೌಕರರಾಗಿದ್ದವರು, ನೌಕರಿ ತ್ಯಜಿಸಿ ಪೂರ್ಣಪ್ರಮಾಣದಲ್ಲಿ ಉದ್ಯಮಿಗಳಾದವರು. ಇವುಗಳಲ್ಲಿ ಮೊಬೈಲ್ ಅಪ್ಲಿಕೇಷನ್‌ಗಳ ಅಭಿವೃದ್ಧಿ, ವೆಬ್‌ಸೈಟ್, ಇನ್‌ವೆಂಟರಿ ಇತ್ಯಾದಿ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವವರ ಸಂಖ್ಯೆಯೇ ದೊಡ್ಡದು.

ಈ ಸ್ಟಾರ್ಟ್‌ಅಪ್ ಎಂಬ ಸಣ್ಣ ಉದ್ಯಮ ಕ್ಷೇತ್ರ ಉತ್ತಮ ಕೌಶಲ ಹೊಂದಿರುವ ಅಭ್ಯರ್ಥಿಗಳಿಗೆ ವರವಾಗಿ ಪರಿಣಮಿಸಿದೆ. ಇಂಥ ಸ್ಟಾರ್ಟ್‌ಅಪ್  ಕಂಪೆನಿಗಳ ಮೂಲ ಬಂಡವಾಳ ಯಾವುದು ಎಂದರೆ ಅದೇ ಹಳೆಯ ಅನುಭವಿ ಅಭ್ಯರ್ಥಿಗಳೇ ಆಗಿರುತ್ತಾರೆ. ಅಮೆರಿಕದ ಸರ್ಕಾರಿ ಕಂಪೆನಿಗಳು ಶೇ 75ರಷ್ಟು ಹಾಗೂ ಸ್ಟಾರ್ಟ್‌ಅಪ್  ಕಂಪೆನಿಗಳು ಶೇ100ರಷ್ಟು ಕೌಶಲಭರಿತ ಉದ್ಯೋಗಿಗಳನ್ನೇ ಅವಲಂಬಿಸಿವೆ.

ಕರ್ನಾಟಕದಲ್ಲಿ ಪ್ರತಿವರ್ಷ 45 ಸಾವಿರ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ 400 ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಚಿಪ್ ವಿನ್ಯಾಸ ವಿಭಾಗದ 85 ಕಂಪೆನಿಗಳು ಇಲ್ಲಿ ತಳವೂರಿವೆ. ಹೀಗಾಗಿ  ಕೆಲಸಕ್ಕೆ ಸಜ್ಜಾಗುತ್ತಿರುವ ಬೃಹತ್ ಪ್ರಮಾಣದ ಮಾನವ ಸಂಪನ್ಮೂಲಕ್ಕೆ ಉದ್ಯೋಗ ಒದಗಿಸುವುದಕ್ಕೆ ಸ್ಟಾರ್ಟ್‌ಅಪ್  ಕಂಪೆನಿಗಳೇ ಸೂಕ್ತ ಪರಿಹಾರ ಎಂಬುದನ್ನು ರಾಜ್ಯ ಸರ್ಕಾರವೂ ಮನಗಂಡಂತಿದೆ. ಹಾಗಾಗಿಯೇ ನೆರೆಯ ರಾಜ್ಯ ಕೇರಳದಂತೆ ಕರ್ನಾಟಕದಲ್ಲಿಯೂ `ಸ್ಟಾರ್ಟ್‌ಅಪ್ ' ಪರಿಕಲ್ಪನೆಗೆ ಉತ್ತೇಜನ ನೀಡುವ ಭರವಸೆಯನ್ನೂ ನೀಡಿದೆ.

`ಇನ್ಕ್ಯುಬೇಟರ್ ಸ್ಥಾಪಿಸಬೇಕು'

`ಬೆಂಗಳೂರನ್ನು ಸ್ಟಾರ್ಟ್‌ಅಪ್ ಪ್ರಧಾನ ಕೇಂದ್ರವಾಗಿಸಲು 10ಕ್ಕೂ ಅಧಿಕ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇನ್ಕ್ಯುಬೇಟರ್ ಸ್ಥಾಪಿಸಬೇಕಿದೆ. ಜತೆಗೆ ಐಟಿ ಉದ್ಯಮ ವಲಯವನ್ನು ಸಂಶೋಧನೆ-ತಾಂತ್ರಿಕ ನಾವೀನ್ಯತೆ ಹಾಗೂ ತಯಾರಿಕಾ ಉದ್ಯಮದ ಪ್ರಧಾನ ಕೇಂದ್ರವಾಗಿಸಿ ಅಭಿವೃದ್ಧಿಗೊಳಿಸಬೇಕಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಸ್ವತಃ ಉದ್ಯಮಿಗಳಾಗುವಂತೆ ಉತ್ತೇಜಿಸಲು ಕಾಲೇಜು ಮಟ್ಟದಲ್ಲಿಯೇ ಉತ್ತೇಜನ ನೀಡಬೇಕಿದೆ'
 -ಎಸ್.ಗೋಪಾಲಕೃಷ್ಣನ್, `ಸಿಐಐ' ಅಧ್ಯಕ್ಷ

`ಬೆಂಗಳೂರಿನಿಂದ ಅಮೆರಿಕದವರೆಗೆ'
`ಲಿನೆಕ್ಸ್ ಆಪರೇಟಿಂಗ್ ಸ್ಟಿಸ್ಟಂ ಮೇಲಿನ ತಂತ್ರಾಂಶಗಳ ಅಭಿವೃದ್ಧಿಯೊಂದಿಗೆ ಆರಂಭಗೊಂಡ ಪುಟ್ಟ ಕಂಪೆನಿ ಯೋಡಾಸಾಫ್ಟ್. ಮೂರು ಮಂದಿ ಲಿನೆಕ್ಸ್ ತಜ್ಞರೊಂದಿಗೆ ಕಂಪೆನಿ ತಂತ್ರಾಂಶಗಳ ಅಭಿವೃದ್ಧಿ ಆರಂಭಿಸಿತು. ನಂತರ ಮೊಬೈಲ್ ಅಪ್ಲಿಕೇಷನ್ಸ್‌ಗಳು, ಪತ್ರಿಕೆಗಳ ಅಂತರಜಾಲ ಪುಟಗಳ ಅಭಿವೃದ್ಧಿ ಹೀಗೆ ಒಂದರ ಹಿಂದೊಂದರಂತೆ ಹೊಸ ಹೊಸ ಸವಾಲುಗಳನ್ನು ಸ್ವೀಕರಿಸಲು ಆರಂಭಿಸಿದೆವು.

ಮೂವರು ಇದ್ದ ಎಂಜಿನಿಯರ್‌ಗಳ ಸಂಖ್ಯೆ ಇದೀಗ 30ಕ್ಕೆ ಏರಿದೆ. ಹಾಗೆಯೇ ಯೋಡಾಸಾಫ್ಟ್ ಅಭಿವೃದ್ಧಿಪಡಿಸಿದ ತಂತ್ರಾಂಶ,ಅಪ್ಲಿಕೇಷನ್ಸ್‌ಗಳು ಹಾಗೂ ಜಾಲತಾಣಗಳ ಗುಣಮಟ್ಟದಿಂದ ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಾಗಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಕಂಪೆನಿ ಅಮೆರಿಕ ಹಾಗೂ ಭಾರತ ಎರಡೂ ಕಡೆಗಳಲ್ಲಿ ಏಕಕಾಲದಲ್ಲಿ ಕಾರ್ಯನಿರ್ವಹಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ'.
- ಸತೀಶ್, ವ್ಯವಸ್ಥಾಪಕ ನಿರ್ದೇಶಕ, ಯೋಡಾಸಾಫ್ಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT