ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ತಪ್ಪು ದೊಡ್ಡ ಶಿಕ್ಷೆ

Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಏಳುವರ್ಷದ ಮಗನ ಮೇಲೆ `ದೌರ್ಜನ್ಯ' ನಡೆಸಿದ್ದಾರೆ ಎಂಬ ಕಾರಣಕ್ಕಾಗಿ ಆಂಧ್ರಪ್ರದೇಶ ಮೂಲದ ದಂಪತಿಗೆ ನಾರ್ವೆಯ ರಾಜಧಾನಿ ಓಸ್ಲೋದ ಜಿಲ್ಲಾ ನ್ಯಾಯಾಲಯ ನೀಡಿರುವ ಶಿಕ್ಷೆ ಸ್ವಲ್ಪ ಕಠಿಣವಾಯಿತು. ಎಲ್ಲ ತಂದೆತಾಯಿಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ. ಸಾಫ್ಟ್‌ವೇರ್ ಎಂಜಿನಿಯರ್ ಚಂದ್ರಶೇಖರ್ ವಲ್ಲಭನೇನಿ ಮತ್ತು ಅವರ ಪತ್ನಿ ಅನುಪಮಾ ತಪ್ಪಿತಸ್ಥರು ಎಂದು ಘೋಷಿಸಿರುವ ನ್ಯಾಯಾಲಯ ತಂದೆಗೆ 18 ತಿಂಗಳು ಹಾಗೂ ತಾಯಿಗೆ 15 ತಿಂಗಳ ಸೆರೆಮನೆ ವಾಸದ ಶಿಕ್ಷೆ ವಿಧಿಸಿದೆ.

ಮಕ್ಕಳಲ್ಲಿ ಅತಿಯಾದ ಶಿಸ್ತು ಬೆಳೆಸುವ ಉದ್ದೇಶದಿಂದ ಶಿಕ್ಷಿಸುವ ಪರಿಪಾಠ ಭಾರತದಲ್ಲಿ ಸರ್ವೇಸಾಮಾನ್ಯ ಎನ್ನುವಂತಿದೆ. ಆದರೆ ವಿದೇಶಗಳಲ್ಲಿ ಮಕ್ಕಳನ್ನು ದಂಡಿಸುವುದು, ಅವರಿಗೆ ಮಾನಸಿಕವಾಗಿ ಯಾತನೆ ನೀಡುವುದೂ ಕೂಡ ಶಿಕ್ಷಾರ್ಹ ಅಪರಾಧ. ನ್ಯಾಯಾಲಯ ಆ ದೇಶದ ಕಾನೂನು ಪಾಲನೆಯನ್ನು ತೀವ್ರವಾಗಿ ಅಪೇಕ್ಷಿಸುತ್ತದೆ ಎನ್ನುವ ಅಂಶವನ್ನು ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಮೊದಲು ಅರಿಯಬೇಕು. ಯಾವುದೇ ದೇಶದಲ್ಲಿದ್ದರೂ ಮೊದಲು ಆ ದೇಶದ ಕಾನೂನನ್ನು ಗೌರವಿಸುವುದು, ಪಾಲಿಸುವುದು ಭಾರತೀಯರ ಕರ್ತವ್ಯವಾಗಬೇಕು. ನಮ್ಮ ಇಷ್ಟದ ಪ್ರಕಾರ ನಾವು ನಮ್ಮ ಮಕ್ಕಳನ್ನು ದಂಡಿಸಲು ಸರ್ವ ಸ್ವತಂತ್ರರು ಎಂದು ಭಾವಿಸಿದರೆ ತಪ್ಪಾಗುತ್ತದೆ. ನಾರ್ವೆ ಸೇರಿದಂತೆ ಇತರ ಎಲ್ಲ ಪಾಶ್ಚಾತ್ಯ ದೇಶಗಳಲ್ಲಿ ಮಕ್ಕಳ ಹಕ್ಕುಗಳನ್ನು ಗೌರವಿಸಲಾಗುತ್ತದೆ.

`ಮನೆಯೇ ಮೊದಲ ಪಾಠಶಾಲೆ' ಎಂದು ನಾವು ಹೇಳುತ್ತೇವೆ. ಅದನ್ನೇ ನಂಬಿಕೊಂಡು ಅದನ್ನು ನಮ್ಮ ಸಂಸ್ಕೃತಿಯ ಒಂದು ಭಾಗವನ್ನಾಗಿಸಿಕೊಂಡಿದ್ದೇವೆ. ಆದರೆ ನಾರ್ವೆಯಲ್ಲಿ ವಾಸವಾಗಿದ್ದ ಭಾರತೀಯ ದಂಪತಿಯ ಏಳುವರ್ಷದ ಪುಟ್ಟಮಗುವಿನ ಪಾಲಿಗೆ ಮನೆ ಎನ್ನುವುದು ನರಕವಾಗಿತ್ತು ಎನ್ನುವುದನ್ನು ನಾರ್ವೆ ನ್ಯಾಯಾಲಯ ನಿರೂಪಿಸಿದೆ. ಮಕ್ಕಳನ್ನು ಶಾಲೆಯಲ್ಲಿ ದಂಡಿಸುವುದನ್ನೂ ನಾವು ವಿರೋಧಿಸುತ್ತೇವೆ. ಮಕ್ಕಳ ಮನದಲ್ಲಿ ಭಯದ ವಾತಾವರಣವನ್ನೂ, ಆತಂಕದ ಸ್ಥಿತಿಯನ್ನೂ ಉಂಟುಮಾಡುವುದೇ ತಪ್ಪು.

ತೊದಲುವುದು, ಹಾಸಿಗೆಯಲ್ಲಿ ಮೂತ್ರವಿಸರ್ಜನೆ ಮಾಡಿಕೊಳ್ಳುವುದು, ಶಾಲೆಗೆ ಹೋಗುವುದರಲ್ಲಿ ನಿರಾಸಕ್ತಿ, ಇವೆಲ್ಲಾ ಎಳೆಯ ವಯಸ್ಸಿನ ಸಹಜವಾದ ನಡವಳಿಕೆ. ಪ್ರೀತಿ ಹರಿಸುವ ಮೂಲಕ ತಂದೆತಾಯಂದಿರು ಮಕ್ಕಳ ಮನಗೆದ್ದು ನಡವಳಿಕೆ ತಿದ್ದುವ ಕೆಲಸ ಮಾಡಬೇಕು. ಇಲ್ಲವೇ ಮನಃಶಾಸ್ತ್ರಜ್ಞರ ಜೊತೆ ಸಮಾಲೋಚನೆ ನಡೆಸುವ ಮೂಲಕ ಪುಟಾಣಿ ಮನಸ್ಸುಗಳನ್ನು ಅರಿಯುವ ಕೆಲಸ ಮಾಡಬೇಕು. ಆಂಧ್ರದ ದಂಪತಿ ಮಗನಿಗೆ ಶಿಸ್ತು ಕಲಿಸುವ ಉಮೇದಿನಲ್ಲಿ ನೆಲದ ಕಾನೂನಿನ ತೀವ್ರತೆಯನ್ನು ಮರೆತಿರುವ ಸಾಧ್ಯತೆ ಇದೆ. ವಿದೇಶದಲ್ಲಿ ನೆಲಸಿರುವ ಎಲ್ಲ ಭಾರತೀಯರ ನೆರವಿಗೆ ಭಾರತ ಸರ್ಕಾರ ಧಾವಿಸುವುದು ಮಾನವೀಯ ಕ್ರಮ.

ಓಸ್ಲೊದಲ್ಲಿನ ಸ್ಥಳೀಯರು ಯಾರೂ  ದಂಪತಿಯ ಸಹಾಯಕ್ಕೆ ಧಾವಿಸಲಿಲ್ಲ ಎನ್ನುವ ಸಂಗತಿಯೂ ಅಮಾನವೀಯ. “ಇದು ಖಾಸಗಿ ವ್ಯಕ್ತಿ ಹಾಗು ಆ ದೇಶದ ಕಾನೂನಿಗೆ ಸಂಬಂಧಿಸಿದ ವಿಷಯವೇ ಹೊರತು ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ” ಎಂದು ವಿದೇಶಾಂಗ ಸಚಿವರು ಹೇಳಿರುವುದು ಸಜ್ಜನಿಕೆ ಎನಿಸುವುದಿಲ್ಲ. ವಿದೇಶದಲ್ಲಿ ಅನಾಥಪ್ರಜ್ಞೆಯಿಂದ ತೊಳಲುವ ಭಾರತೀಯರಿಗೆ ರಾಯಭಾರ ನೆರವನ್ನು ನೀಡುವುದು ಸರ್ಕಾರದ ಕರ್ತವ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT