ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ನೀರಾವರಿ ಇಲಾಖೆ ಕರ್ಮಕಾಂಡ:ಜಮೀನಿಗೆ ಹರಿಯದ ನೀರು

Last Updated 31 ಜನವರಿ 2011, 8:20 IST
ಅಕ್ಷರ ಗಾತ್ರ

ದೇವದುರ್ಗ: ಕಳೆದ ದಶಕದ ಹಿಂದೇ ಯೋಜನೆ ರೂಪಿಸುವಲ್ಲಿ ಸಣ್ಣ ನೀರಾವರಿ ಇಲಾಖೆ ಮಾಡಿದ ತಪ್ಪು ಮತ್ತು ಕಳಪೆ ಕಾಮಗಾರಿಯಿಂದಾಗಿ ಇಂದಿಗೂ ತಾಲ್ಲೂಕಿನ ಕರಿಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಿಲವಂಜಿ ಏತ ನೀರಾವರಿ ಯೋಜನೆ ರೈತರ ಜಮೀನಿಗೆ ನೀರುಣಿಸಲು ಸಾಧ್ಯವಾಗಿಲ್ಲ.

ತಾಲ್ಲೂಕಿನ ನಿಲವಂಜಿ ಹಾಗೂ ಕರಿಗುಡ್ಡ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ 242.40 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಮಹತ್ವದ ಯೋಜನೆ ರೂಪಿಸಲಾಗಿತ್ತು. ನಿಲವಂಜಿ ಗ್ರಾಮದ ಪಕ್ಕಲ್ಲಿಯೇ ಕೃಷ್ಣಾ ನದಿ ಹಾದೂ ಹೋಗುವುದರಿಂದ ಈ ಪ್ರದೇಶ ಏತ ನೀರಾವರಿಗೆ ಸೂಕ್ತವಾದ ಸ್ಥಳವೆಂದು ಗುರುತಿಸಿ ಯೋಜನೆಯನ್ನು1994-95ನೇ ಸಾಲಿನಲ್ಲಿ 57. ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಮುಗಿಸಲಾಗಿದ್ದರೂ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ಕಾಮಗಾರಿ ನಿರ್ವಹಣೆ ವೇಳೆ ಸಣ್ಣ ನೀರಾವರಿ ಇಲಾಖೆಯ ಪ್ರಮಾದಗಳು ಹಾಗೂ ಗುಣಮಟ್ಟ ಇಲ್ಲದ ಕಾಮಗಾರಿಯಿಂದಾಗಿ ಜಮೀನುಗಳಿಗೆ ನೀರು ಹರಿಸಿಕೊಳ್ಳವ ರೈತರ ಕನಸು ಮಾತ್ರ ಸಾಕಾರಗೊಂಡಿಲ್ಲ. 

ಮೊದಲ ಹಂತದಲ್ಲಿ ಜಾಕ್‌ವೆಲ್, ಪಂಪಹೌಸ್ ನಿರ್ಮಾಣ, ಎರಡನೇ ಹಂತದಲ್ಲಿ ಪೈಪ ಲೈನ್ ಅಳವಡಿಸುವ ಕಾರ್ಯ ನಡೆದಿತ್ತು. ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಿದ ಸಣ್ಣ ನೀರಾವರಿ ಇಲಾಖೆ ಇದೇ ಬಗೆಯ ಮುತುವರ್ಜಿಯನ್ನು ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವುದರೆಡೆಗೆ ಗಮನ ಹರಿಸಲಿಲ್ಲ ಎಂಬ ಆರೋಪ ಗ್ರಾಮಸ್ಥರದಾಗಿದೆ. ಕಳಪೆ ಪೈಪ್‌ಗಳನ್ನು ಅಳವಡಿಸಿದ್ದರಿಂದ ನೀರೆತ್ತುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ನೀರಿನ ಒತ್ತಡ ತಡೆಯಲಾರದೇ ಪೈಪ್‌ಗಳು ಒಡೆಯುತ್ತವೆ. ಕಳಪೆ ಕಾಮಗಾರಿ ಆಗಿರುವುದನ್ನು ಮುಚ್ಚಿಕೊಳ್ಳಲು ಏತ ನೀರಾವರಿ ಅಧಿಕಾರಿಗಳು ಯೋಜನೆಯ ಉದ್ಘಾಟನೆಯನ್ನು ಇಂದಿಗೂ ನಡೆಸದಿರುವದು ದುರದೃಷ್ಟ ರಂಬುದು ರೈತರ ಅನಿಸಿಕೆ.

ಪಂಪ್‌ಹೌಸ್‌ನಿಂದ ಆರಂಭಗೊಂಡಿದ್ದ ಪೈಪ್‌ಗಳ ಜೋಡಣೆ ತೀವ್ರ ಕಳಪೆಯಾಗಿದೆ ಎಂದು ರೈತರು ಆರಂಭದಲ್ಲಿಯೇ ತಕರಾರು ಮಾಡಿದರೂ ಅದಕ್ಕೆ ಕ್ರಮ ಇಲ್ಲದಿರುವುದರಿಂದ ಎರಡು ಪೈಪಗಳ ನಡುವೆ ಗುಣಮಟ್ಟದ ಕಾಲರ್ ಬಳಸದ ಕಾರಣ ಬಿರುಕು ಕಾಣಿಸಿಕೊಂಡು ಅದರಿಂದ ನೀರು ಹರಿದು ಪೋಲಾಗತೊಡಗಿವೆ. ಯೋಜನೆಯಲ್ಲಿ ತಿಳಿಸಿದಂತೆ ನೆಲವನ್ನು ಆಳವಾಗಿ ಅಗೆದು ಪೈಪ್‌ಗಳನ್ನು ಊಳದ ಕಾರಣ ಈಗ ಹೊರಗೆ ತೇಲಿ ನಿಂತಿವೆ. ಯೋಜನೆಗೆ ತಗುಲಿದ ನಿಗದಿತ ವೆಚ್ಚಕ್ಕಿಂತ ಎರಡು ಪಟ್ಟು ಹಣವನ್ನು ಖರ್ಚು ಮಾಡಲಾಗಿದ್ದರೂ ರೈತರ ಜಮೀನುಗಳಿಗೆ ಮಾತ್ರ ನೀರು ಹರಿಯಲೇ ಇಲ್ಲ.

ಯೋಜನೆ ಪ್ರಕಾರ ಎಲ್ಲ ಜಮೀನುಗಳಿಗೆ ಹೊಲಕಾಲುವೆಗಳನ್ನು ನಿರ್ಮಿಸಿ ಕೊಡಬೇಕು, ನೆಲದಲ್ಲಿ ಹಾಕಿರುವ ಕಳಪೆ ಗುಣಮಟ್ಟದ ಪೈಪ್‌ಗಳನ್ನು ಹೊರತೆಗೆದು ಪುನ: ಒಳ್ಳೆಯ ಗುಣಮಟ್ಟದ ಪೈಪ್‌ಗಳನ್ನು ಅಳವಡಿಸುವದು ಈಗ ಅಗತ್ಯವಿದೆ.

ರೈತನೇ ಮೇಕಾನಿಕ್: ಅನಿವಾರ್ಯ ಎಂಬುವಂತೆ ಕಳೆದ ನಾಲ್ಕು ವರ್ಷದಿಂದ ನಿಲವಂಜಿ ಗ್ರಾಮದ ಕೆಲವು ರೈತರು ಇಲಾಖೆಯ ದಾರಿ ನೋಡದೆ ತಮ್ಮ ಸ್ವಂತ ಖರ್ಚಿನಿಂದ ತುಕ್ಕು ಹಿಡಿದ ಪಂಪ್, ಪೈಪ್‌ಗಳು ಮತ್ತು ವಿದ್ಯುತ್‌ನ್ನು ದುರಸ್ತಿ ಮಾಡಿಕೊಂಡಿದ್ದಾರೆ. ಮೂರು ಪಂಪ್‌ಗಳಲ್ಲಿ ಈಗ ಒಂದು ಚಾಲನೆಯಲ್ಲಿ ಇದೆ. ಇದರಿಂದ ಪಂಪ್‌ಹೌಸ್ ಅಕ್ಕಪಕ್ಕದ ಸುಮಾರು 40 ಎಕರೆ ಜಮೀನುಗಳು ಒಂದು ಬೆಳೆಗೆ ನೀರು ಕಾಣುವಂತಾಗಿದೆ. ಸಣ್ಣ ಪುಟ್ಟ ದುರಸ್ತಿ ಇದ್ದರೆ ರೈತರೆ ಕೆಲವೊಂದು ಬಾರಿ ಮೇಕಾನಿಕ್‌ಗಳಾಗುವದು ಅನಿವಾರ್ಯವಾಗಿದೆ ಎಂದು ಗ್ರಾಮದ ಭೀಮಪ್ಪ ಎಂಬ ರೈತ ‘ಪ್ರಜಾವಾಣಿ’ ಮುಂದೆ ತನ್ನ ಅಳಲನ್ನು ತೊಡಿಕೊಂಡನು.

ಹಣ ಖರ್ಚು: ಸಣ್ಣ ನೀರಾವರಿ ಇಲಾಖೆಯ ಜುಲೈ 2010ರವರೆಗಿನ ದಾಖಲಾತಿಗಳ ಪ್ರಕಾರ 2009-10ನೇ ಸಾಲಿನ ತುಕ್ಕು ಹಿಡಿದ ನಿಲವಂಜಿ ಏತಾ ನೀರಾವರಿ ಸುಧಾರಣೆಗಾಗಿ 30 ಲಕ್ಷ ರೂಪಾಯಿ, ಮತ್ತು 2010-11ನೇ ಸಾಲಿನಲ್ಲಿ ಪುನ ಅದೇ ಸುಧಾರಣೆಗಾಗಿ 20.30 ಲಕ್ಷ ರೂಪಾಯಿ ಒಟ್ಟು 50.30 ಲಕ್ಷ ಹಣದಲ್ಲಿ  ಈಗಾಗಲೇ ಅರ್ಧಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಿರುವ ಬಗ್ಗೆ ತಿಳಿಸಲಾಗಿದೆ.                                                                       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT