ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಸಿಐಡಿ ತನಿಖೆ

ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ
Last Updated 11 ಜನವರಿ 2014, 5:37 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳು ಕಳಪೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎಲ್ಲ ಕಾಮಗಾರಿಗಳನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ತಿಳಿಸಿದರು.
ಜಿಲ್ಲಾ ಪಂಚಾಯ್ತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಂಚಾಯ್ತಿ ಮುಂದುವರಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗಿರುವ ಕಾಮಗಾರಿಗಳು ಕಳಪೆಯಾಗಿರುವ ಸಂಬಂಧ ಹಿಂದಿನ ಸಭೆಯಲ್ಲಿ ಚರ್ಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿ.ಐ.ಡಿ. ವತಿಯಿಂದ ನಡೆಸುವಂತೆ ಶಿಫಾರಸು ಮಾಡಲಾಗುವುದು ಎಂದರು.

ಕಾಚಿನಕಟ್ಟೆ, ಬೂದಿಗೆರೆ, ಅಯ್ಯನಕೆರೆ ಮುಂತಾದ ಸಣ್ಣ ನೀರಾವರಿ ಇಲಾಖೆ ಕಾಮಗಾರಿಗಳು, ಏತ ನೀರಾವತಿ ಕಾಮಗಾರಿಗಳು ಈ ಹಿಂದೆಯೇ 2010ರಲ್ಲಿ ಪೂರ್ಣಗೊಳ್ಳಬೇಕಿತ್ತು. ಈ ಸಂಬಂಧ ಅಗತ್ಯ ಅನುದಾನ ಬಿಡುಗಡೆಯಾಗಿದ್ದರೂ ವಿಳಂಬ ನೀತಿ ಅನುಸರಿಸಲಾಯಿತು. ಅಲ್ಲದೇ ಕೈಗೊಂಡಿರುವ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ವ್ಯಾಪಕ ಅವ್ಯವಹಾರಗಳು ನಡೆದಿರುವ ಸಾಧ್ಯತೆಗಳಿವೆ ಎಂದು ಸದಸ್ಯರು ಆರೋಪಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆ ವಹಿಸುವುದಾಗಿ ಅವರು ತಿಳಿಸಿದರು.

ತೀರ್ಥಹಳ್ಳಿ ತಾಲ್ಲೂಕಿನ ನಿಸರ್ಗ ಖಾಸಗಿ ಶಾಲೆ ಹಾಗೂ ಶಿಕ್ಷಕ ಮಹಾಬಲ ಹೆಗಡೆ ಕುರಿತು ಇರುವ ಪ್ರಕರಣದ ಪೂರ್ಣ ವರದಿಯನ್ನು ಒದಗಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಸಿ.ಬಸವರಾಜಪ್ಪ ಅವರಿಗೆ ಸೂಚಿಸಿದರು.

ಸದಸ್ಯ ಸುಂದರೇಶ್ ಮಾತನಾಡಿ, ಶಿಕ್ಷಕರೊಬ್ಬರು ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಖಾಸಗಿ ವ್ಯವಹಾರಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಆರೋಪಿಸಿದ ಹಿನ್ನೆಲೆಯಲ್ಲಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಮಧ್ಯ ಪ್ರವೇಶಿಸಿದ ಸಿಇಒ, ಈ ಬಗ್ಗೆ ಸ್ಪಷ್ಟ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 ತೀರ್ಥಹಳ್ಳಿ ತಾಲ್ಲೂಕು ಆಗುಂಬೆಯಲ್ಲಿ ಸರ್ವಶಿಕ್ಷಣ ಅಭಿಯಾನದಡಿ ನಿರ್ಮಿಸುತ್ತಿರುವ ಶಾಲಾ ಕಟ್ಟಡ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಸದಸ್ಯ ಸುಂದರೇಶ್ ಆರೋಪಿಸಿದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಜಿಲ್ಲಾ ಪಂಚಾಯ್ತಿ ವತಿಯಿಂದ ತನಿಖೆ ನಡೆಸಲಾಗುವುದು ಎಂದು ಅಧ್ಯಕ್ಷೆ ಭರವಸೆ ನೀಡಿದರು.

ಕರ್ನಾಟಕ ಏಕೀಕರಣ ಹೋರಾಟ ಸಮಿತಿಯ ರೂವಾರಿ, ಗಾಂಧಿವಾದಿ ಸೊರಬ ತಾಲ್ಲೂಕು ಮಲ್ಲಿಕಾರ್ಜುನಗೌಡ್ರು ತಮ್ಮ ಎಣ್ಣೆಕೊಪ್ಪದ ವಾಸದ ಮನೆಯನ್ನು ಸರ್ಕಾರಿ ಆಸ್ಪತ್ರೆಗೆ ಹಾಗೂ ಆನವಟ್ಟಿಯ ತಮ್ಮ ಸ್ವಂತ ಕಟ್ಟಡವನ್ನು ಸಾರ್ವಜನಿಕ ಹಾಸ್ಟೆಲ್‌ಗೆ ದಾನವಾಗಿ ನೀಡಿರುವ ಹಿನ್ನೆಲೆಯಲ್ಲಿ ಈ ಎರಡೂ ಕಟ್ಟಡಗಳಿಗೆ ಅವರ ಹೆಸರಿಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದಲ್ಲದೆ, ಅರಣ್ಯ ಹಕ್ಕು ಸಮಿತಿಗೆ ಹಳೆಯ ಸದಸ್ಯರನ್ನೇ ಮುಂದುವರಿಸುವ, ಬಿಸಿ ಊಟ ಯೋಜನೆ ಗೊಂದಲ ನಿವಾರಿಸುವುದೂ ಸೇರಿದಂತೆ ವಿವಿಧ ವಿಷಯಗಳು ಸಭೆಯಲ್ಲಿ ಚರ್ಚೆಯಾದವು. ಸಭೆಯಲ್ಲಿ ಉಪಾಧ್ಯಕ್ಷೆ ಹೇಮಾಪಾವನಿ ಉಪಸ್ಥಿತರಿದ್ದರು.

ಎಫ್‌ಐಆರ್‌ನಲ್ಲಿ ಹೆಸರು; ಕೈಬಿಡಲು ಪಟ್ಟು
ಜೆಡಿಎಸ್ ಸದಸ್ಯ ಕುಮಾರ್ ವಿರುದ್ಧ ಅರಣ್ಯ ಇಲಾಖೆ ದೂರಿನ ಆಧಾರದ ಮೇಲೆ ಭದ್ರಾವತಿಯ ಪೊಲೀಸ್ ಠಾಣೆಯಲ್ಲಿ  ದಾಖಲಾದ ಎಫ್ಐಆರ್ ಕುರಿತಂತೆ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಯಿತು.

ಜಿ. ಪಂ ಸಿಇಒ ಸಸಿಕಾಂತ್ ಸೆಂಥಿಲ್, ಕಾನೂನಿನ ಪ್ರಕಾರ ಇದು ಸಾಧ್ಯವೇ ಇಲ್ಲ. ತಾವು ಯಾರೊಂದಿಗೂ ಚರ್ಚೆ ನಡೆಸುವುದಿಲ್ಲ. ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

 ಇದು ಗದ್ದಲ, ಗೊಂದಲದ ವಾತಾವರಣ ಸೃಷ್ಟಿಸಿತು. ಸದಸ್ಯ ಕುಮಾರ್‌ ಅವರು ಸಭಾತ್ಯಾಗಕ್ಕೆ ಮುಂದಾದರು. ಮತ್ತೆ ಕೆಲ ಸದಸ್ಯರು ಸಭೆಯ ಬಾವಿಗಿಳಿದರು. ಒಂದಿಬ್ಬರು ಸದಸ್ಯರು ಸಿಇಒ ಅವರ ಮನವೊಲಿಕೆಗೆ ಮುಂದಾದರು. ಆದರೂ ಸಿಇಒ ಅವರು ತಾವು ಕಾನೂನು ವ್ಯಾಪ್ತಿ ಬಿಟ್ಟು ಕೆಲಸ ಮಾಡುವುದಿಲ್ಲ ಎಂದರು. ಅಂತಿಮವಾಗಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಕಲಾಪವನ್ನು ಅರ್ಧ ಗಂಟೆಯ ಕಾಲ ಮುಂದೂಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT