ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಪತ್ರಿಕೆಗಳ ಅವಗಣನೆ ಸಲ್ಲ

Last Updated 6 ಜೂನ್ 2011, 6:00 IST
ಅಕ್ಷರ ಗಾತ್ರ

ದಾವಣಗೆರೆ: ಸಣ್ಣ ಪತ್ರಿಕೆಗಳ ಮಹತ್ವವನ್ನು ಕಡೆಗಣಿಸುವುದು ಸಲ್ಲದು ಎಂದು ಪತ್ರಕರ್ತ ಅಜಿತ್ ಘೋರ್ಪಡೆ ಹೇಳಿದರು.ನಗರದಲ್ಲಿ ಭಾನುವಾರ ನಡೆದ `ಬಸವ ಸಂಗಮ~ದಲ್ಲಿ ಪತ್ರಕರ್ತ ಎಚ್.ಎನ್. ಷಡಾಕ್ಷರಪ್ಪ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೊಡ್ಡ ಪತ್ರಿಕೆಗಳಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಜಿಲ್ಲಾಮಟ್ಟದ ಅಥವಾ ಸ್ಥಳೀಯ ಪತ್ರಿಕೆಗಳು ಸಮಾಜ ಸೇವೆ ಮಾಡುತ್ತವೆ. ಯಾಕೆಂದರೆ ಅವುಗಳ ಪತ್ರಕರ್ತರಿಗೆ ಸ್ಥಳೀಯ ನೋವು ನಲಿವುಗಳ ಅರಿವಿರುತ್ತದೆ. ದೊಡ್ಡ ಪತ್ರಿಕೆಗಳ ಪತ್ರಕರ್ತರ ವೃತ್ತಿಬದುಕು ಆರಂಭವಾಗುವುದು ಸಣ್ಣ ಪತ್ರಿಕೆಗಳಿಂದಲೇ ಎಂದು ನುಡಿದರು.

ಕನ್ನಡ ಪತ್ರಿಕೋದ್ಯಮಕ್ಕೆ ದಾವಣಗೆರೆ ಮತ್ತು ಕಾರವಾರದ ಕೊಡುಗೆ ಬಹಳಷ್ಟಿದೆ. ದಾವಣಗೆರೆಯಲ್ಲಿ 1886ರಿಂದಲೇ ಸಾಕಷ್ಟು ಪತ್ರಿಕೆಗಳು ಆರಂಭವಾಗಿವೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಪತ್ರಿಕೆಗಳು ಸಮಾಜ ಸೇವೆಯಲ್ಲಿ ತೊಡಗಿದ್ದವು. ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ, ಬಾಲಗಂಗಾಧರ ತಿಲಕ್ ಅವರು ಮೂಲತಃ ಪತ್ರಕರ್ತರೇ ಆಗಿದ್ದರು. ದೊಡ್ಡ ಪತ್ರಿಕೆ ಮತ್ತು ಸಣ್ಣ ಪತ್ರಿಕೆಗಳ ಪತ್ರಕರ್ತರ ಮಧ್ಯೆ ಭೇದವೆಣಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಪತ್ರಿಕೋದ್ಯಮ ಮುಳ್ಳಿನ ಹಾಸಿಗೆ. ದುಷ್ಟ ವ್ಯವಸ್ಥೆಯ ವಿರುದ್ಧ ನಿಶ್ಯಸ್ತ್ರಧಾರಿಯಾದ ಪತ್ರಕರ್ತ ಹೋರಾಡಬೇಕಾಗುತ್ತದೆ. ಆತನಿಗೆ ಯಾವುದೇ ಭದ್ರತೆ, ವಿಶೇಷ ಅಧಿಕಾರವಾಗಲಿ ಇಲ್ಲ. ಹಾಗಿದ್ದರೂ ಯಾವ ವ್ಯವಸ್ಥೆಯೂ ಇಂದಿನವರೆಗೂ ಪತ್ರಿಕಾಮಾಧ್ಯಮವನ್ನು ಮೆಟ್ಟಿ ನಿಂತಿಲ್ಲ. ಯಾಕೆಂದರೆ ನೈತಿಕತೆಯ ತಳಹದಿಯ ಮೇಲೆ ನಿಂತು ಪತ್ರಿಕೋದ್ಯಮ ಯಶಸ್ಸು ಕಂಡಿದೆ ಎಂದು ಹೇಳಿದರು.

ಪತ್ರಿಕೋದ್ಯಮದ ಇನ್ನೊಂದು ಮಜಲಿನ ಬಗ್ಗೆ ಮಾತನಾಡಿದ ಅವರು, ಪತ್ರಿಕೋದ್ಯಮದ ಧ್ಯೇಯ ಸಮಾಜ ಸೇವೆ ಆಗಿರುವಲ್ಲಿಯವರೆಗೆ ಶೇ. 99ರಷ್ಟು ಪ್ರಾಮಾಣಿಕತೆ, ನೈತಿಕತೆ ತುಂಬಿತ್ತು. ಆದರೆ, ಅದು ಬರೆಯಲು ಬಾರದ ಬಂಡವಾಳಶಾಹಿಗಳ ಕೈಗೆ ಸಿಲುಕಿ ಉದ್ಯಮ ಸ್ವರೂಪ ಪಡೆದಾಗ ಅದು ನೈತಿಕತೆ ಕಳೆದುಕೊಂಡಿತು. ನೀತಿ ನಿಯಮಗಳು ಕಡಿಮೆಯಾದವು. ಈ ಕ್ಷೇತ್ರವೂ ಭ್ರಷ್ಟಾಚಾರಕ್ಕೆ ಹೊರತಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಪತ್ರಿಕೋದ್ಯಮ ಮತ್ತು ರಾಜಕೀಯಕ್ಕೆ ಕನಿಷ್ಠ ವಿದ್ಯಾರ್ಹತೆ ಇಲ್ಲ. ಯಾಕೆಂದರೆ ತಮ್ಮ ಜವಾಬ್ದಾರಿಯನ್ನು ಸ್ವತಃ ಅರಿತು ಕೆಲಸ ಈ ಕ್ಷೇತ್ರದವರು ಕೆಲಸ ಮಾಡುತ್ತಾರೆ ಎಂಬ ನಂಬಿಕೆಯಿತ್ತು. ಆದರೆ, ಇಂದು ಈ ರಂಗವು ಪಾವಿತ್ರ್ಯತೆ ಕಳೆದುಕೊಳ್ಳುತ್ತಿದೆ. ಆದ್ದರಿಂದ ಪತ್ರಕರ್ತರು ಕನಿಷ್ಠ ಪ್ರಾಮಾಣಿಕತೆ, ನೈತಿಕತೆ ಉಳಿಸಿಕೊಂಡು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ರೋಟರಿ ಕ್ಲಬ್ ವಿಶೇಷ ಪ್ರತಿನಿಧಿ ಎಂ. ಬಸವರಾಜ್, ರಾಜಶೇಖರ ಸವಣೂರು ಚಿಂದೋಡಿ ಚಂದ್ರಧರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT