ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣಕಾರ್ ಲೋಕಕ್ಕೆ ಹಿಂದೂಸ್ತಾನ್ ಮೋಟಾರ್ಸ್ ಲಗ್ಗೆ

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ದೊಡ್ಡ ಕಾರ್‌ಗಳನ್ನೇ ತಯಾರಿಸುವ ಇತಿಹಾಸ ಇರುವ ಹಿಂದೂಸ್ತಾನ್ ಮೋಟಾರ್ಸ್ (ಎಚ್‌ಎಂ) ಇದೀಗ ಸಣ್ಣ ಕಾರ್ ತಯಾರಿಸುವತ್ತ ಚಿಂತನೆ ನಡೆಸಿದೆ. ಅದೂ ಅಲ್ಲದೇ 6 ದಶಕಗಳಿಗೂ ಹೆಚ್ಚಿನ ಇತಿಹಾಸ ಇರುವ ಅಂಬಾಸಿಡರ್ ಕಾರ್ ಅನ್ನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಬದಲಾವಣೆ ತರುವ ಮೂಲಕ ಹೊಸ ಭವಿಷ್ಯವನ್ನು ಕಟ್ಟಿಕೊಳ್ಳಲು ಸಿದ್ಧತೆ ನಡೆಸಿದೆ.

ಹೌದು ಎಚ್‌ಎಂ ಈಗ ಹೊಸ ಹೆಜ್ಜೆ ಇಡಲು ಸಜ್ಜಾಗಿದೆ. ಇತ್ತೀಚೆಗಷ್ಟೇ ಅಂಬಾಸಿಡರ್ ಕಾರ್‌ಗಳ ಮಾರಾಟ ಹೆಚ್ಚಾಗಿ ಕಂಪೆನಿಗೆ ಲಾಭ ಬಂದ ಕಾರಣ, ಅದನ್ನೇ ಬಳಸಿಕೊಂಡು ಕಂಪೆನಿಯನ್ನು ಉಳಿಸಿಕೊಳ್ಳುವ ಹಾಗೂ ಮತ್ತಷ್ಟು ಲಾಭ ಪಡೆಯುವ ನಿಟ್ಟಿನಲ್ಲಿ ಸಾಗಿದೆ. ಅಂಬಾಸಿಡರ್ ಕಾರ್ ಅನ್ನೇ ಸಣ್ಣದಾಗಿ ಪುನರ್ ರಚಿಸಿ ಅದನ್ನು ಹೊಸತಾಗಿ ಮಾರುಕಟ್ಟೆಗೆ ಪರಿಚಯ ಮಾಡುವ ಹೊಸ ಪ್ರಯತ್ನ ಇದಾಗಿದೆ.

ಜುಲೈ ತಿಂಗಳಲ್ಲಿ ಹೊಸ ರೂಪದ ಅಂಬಾಸಿಡರ್ ಕಾರ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಈಗಾಗಲೇ ತನ್ನ ಪ್ಲಾಂಟ್‌ಗಳಲ್ಲಿ ಕಾರ್‌ನ ನಿರ್ಮಾಣವೂ ಆರಂಭವಾಗಿದೆ. ಅಂಬಾಸಿಡರ್ ಅನ್ನು ಹೋಲುವ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಎರಡೂ ಮಾದರಿಯ ಆಧುನಿಕ ವಿನ್ಯಾಸದ ಕಾರ್‌ಗಳು ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿ ನಿಂತಿವೆ. ಕಂಪೆನಿಯ ಪಶ್ಚಿಮ ಬಂಗಾಳದ ಉತ್ತರದ ಪ್ಲಾಂಟ್‌ನಲ್ಲಿ ಹೊಸ ಕಾರ್‌ಗಳು ಉತ್ಪನ್ನಗೊಳ್ಳಲಿವೆ.

ಫೇಸ್‌ಬುಕ್ ಕಾರಣ!
ಈ ಹೊಸ ಹೆಜ್ಜೆಗೆ ಕಾರಣವಾದದ್ದು ಫೇಸ್‌ಬುಕ್ ಎಂಬುದು ಇಲ್ಲಿನ ಅಚ್ಚರಿಯ ವಿಚಾರ. ಫೇಸ್‌ಬುಕ್‌ನ ಎಚ್‌ಎಂ ಪುಟದಲ್ಲಿ ಮಾಡರ್ನ್ ಕಾರ್‌ಗಳನ್ನು ಹೊರಬಿಡಬೇಕು ಎಂಬ ಗ್ರಾಹಕರ ಬೇಡಿಕೆ ಈ ಹೊಸ ಹೆಜ್ಜೆಗೆ ಸ್ಫೂರ್ತಿಯಾಗಿದೆ. ಗ್ರಾಹಕರ ಬೇಡಿಕೆಗೆ ಕೊನೆಗೂ ಸ್ಪಂದಿಸಿದ ಎಚ್‌ಎಂ ಶ್ರೇಷ್ಠ ಗುಣಮಟ್ಟದ ಕಾರ್‌ಗಳನ್ನು ತಯಾರಿಸಲು ಮುಂದಾಗಿದೆ. ಜತೆಗೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವೂ ತುಂಬಿಕೊಂಡಿದೆ. ಆದರೆ ಕಾರ್‌ನ ಹೆಸರುಗಳನ್ನು ಮಾತ್ರ ಗೌಪ್ಯವಾಗಿ ಕಂಪೆನಿ ಇಟ್ಟಿದೆ. ತನ್ನ ಹಿರಿಮೆಗೆ ತಕ್ಕಂತೆ ಕ್ಲಾಸಿಕ್ ಹೆಸರನ್ನೇ ಎಚ್‌ಎಂ ಇಡುತ್ತದೆ ಎಂಬುದು ನಿರೀಕ್ಷೆ.

ಎಚ್‌ಎಂ ಕಾರ್‌ಗಳು ಗಟ್ಟಿತನಕ್ಕೆ ಹೆಸರುವಾಸಿ. ಜತೆಗೆ ಕಡಿಮೆ ಬೆಲೆಗೂ ಸಿಗುವುದರಿಂದ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದು ಮಾರುಕಟ್ಟೆ ತಜ್ಞರ ಅಭಿಮತವಾಗಿದೆ.

ಮಿನಿ ಆರಿಯಾ ಸಿದ್ಧ
ಇದರ ಜತೆಗೇ ಟಾಟಾ ಮೋಟಾರ್ಸ್ ತನ್ನ ಪ್ರಸಿದ್ಧ ಆರಿಯಾ ಎಸ್‌ಯುವಿಯನ್ನು ಮರುವಿನ್ಯಾಸಗೊಳಿಸಿ ಮಿನಿ ಆರಿಯಾ ಬಿಡುಗಡೆ ಮಾಡುತ್ತಿದೆ. ಬೆಲೆಯನ್ನು ಕನಿಷ್ಠ 2 ಲಕ್ಷ ಕಡಿಮೆ ಆಗುವ ನಿರೀಕ್ಷೆ ಇದೆ.

ಕಾರ್‌ನ ಒಟ್ಟು ಉದ್ದವೇ 4 ಮೀಟರ್‌ಗೂ ಕಡಿಮೆಯಿದ್ದು, ಬಲಶಾಲಿ ಎಂಜಿನ್ ಹೊಂದಲಿದೆ. ಈಗಷ್ಟೇ ಬಿಡುಗಡೆ ಆಗಿರುವ ಫೋರ್ಡ್‌ನ ಎಕೆಸ್ಪೋರ್ಟ್ ಎಸ್‌ಯುವಿಗೆ ಇದು ಪ್ರತಿಸ್ಪರ್ಧಿ ಆಗಲಿರುವುದು ವಿಶೇಷವಾಗಿದೆ. ಅದಕ್ಕಾಗೇ ವಿಶೇಷವಾಗಿ ಹೆಚ್ಚು ಐಷಾರಾಮಿ ಸೌಲಭ್ಯಗಳನ್ನು ಕಾರ್‌ಗೆ ನೀಡಿದೆ. ಮಾರುತಿಯ ಎರ್ಟಿಗಾ, ಮಹಿಂದ್ರಾ ಕ್ವಾಂಟೊ, ರೆನೊ ಡಸ್ಟರ್‌ಗೆ ಸ್ಪರ್ಧೆ ನೀಡಲು ಟಾಟಾ ನಡೆಸಿರುವ ಕಸರತ್ತು ಇದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT