ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಣ್ಣವರ ಮೇಲಷ್ಟೇ ಬಿಜೆಪಿ ಪ್ರತಾಪ'

ಈಶ್ವರಪ್ಪ ದೊಡ್ಡವರು: ಬಿಎಸ್‌ವೈ ವ್ಯಂಗ್ಯ
Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಬಹಳ ದೊಡ್ಡವರು. ಆದ್ದರಿಂದ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದರೂ ಆ ಪಕ್ಷದ ವರಿಷ್ಠರು ಯಾವುದೇ ಕ್ರಮ ಜರುಗಿಸಿಲ್ಲ' ಎಂದು ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದರು.

ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸೋಮವಾರ ಕೆಜೆಪಿ ಕಾರ್ಯಕರ್ತರ ಸಭೆ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, `ಬಿಜೆಪಿಯಲ್ಲಿ ಸಣ್ಣವರ ವಿರುದ್ಧ ಮಾತ್ರ ಶಿಸ್ತುಕ್ರಮ ಕೈಗೊಳ್ಳುವ ಪರಿಪಾಠ ಇದೆ. ದೊಡ್ಡವರ ವಿರುದ್ಧ ಕ್ರಮ ಜರುಗಿಸುವ ಪದ್ಧತಿ ಇಲ್ಲ. ಈಶ್ವರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರಿಂದ ತನಿಖೆಗೆ ಆದೇಶಿಸಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಹುದ್ದೆಗಳಲ್ಲಿ ಅವರನ್ನು ಮುಂದುವರಿಸಲಾಗಿದೆ' ಎಂದು ಲೇವಡಿ ಮಾಡಿದರು.

`ನನ್ನಂತಹ ಸಾಮಾನ್ಯ ವ್ಯಕ್ತಿಗಳ ವಿರುದ್ಧ ಆರೋಪ ಬಂದ ತಕ್ಷಣವೇ ಬಿಜೆಪಿ ವರಿಷ್ಠರು ಕ್ರಮ ಕೈಗೊಂಡರು. ಈಶ್ವರಪ್ಪ ಬಹಳ ದೊಡ್ಡ ವ್ಯಕ್ತಿ. ಅವರ ಕುರಿತು ನಾನು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ' ಎಂದರು.

ಕೆಜೆಪಿಯನ್ನು ಚುನಾವಣೆಗೆ ಸಜ್ಜುಗೊಳಿಸುವ ಕೆಲಸ ಭರದಿಂದ ನಡೆಯುತ್ತಿದೆ. ನಿತ್ಯವೂ ವಿವಿಧ ಜಿಲ್ಲೆಗಳ ಕಾರ್ಯಕರ್ತರ ಜೊತೆ ಸಭೆ ನಡೆಸಲಾಗುತ್ತಿದೆ. ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ಕೆಜೆಪಿ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಡಿ.30ರೊಳಗೆ ಪಕ್ಷದ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ ಎಂದರು.

`ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಬಿಜೆಪಿ ಸರ್ಕಾರ ಬಜೆಟ್ ಅಧಿವೇಶನ ನಡೆಸುತ್ತದೆಯೋ? ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಎಲ್ಲವೂ ಬಿಜೆಪಿ ಮುಖಂಡರ ನಡವಳಿಕೆ ಮೇಲೆ ನಿಂತಿದೆ. ನನ್ನನ್ನು ಬೆಂಬಲಿಸುವ ಸಚಿವರು ಮತ್ತು ಶಾಸಕರ ವಿರುದ್ಧ ಕ್ರಮ ಜರುಗಿಸುವುದು ಬಿಜೆಪಿ ಮುಖಂಡರಿಗೆ ಬಿಟ್ಟ ವಿಚಾರ' ಎಂದು ಬಿಎಸ್‌ವೈ ಸವಾಲು ಹಾಕಿದರು.

ಸಿಎಂ ತಾರತಮ್ಯ: `ಯಡಿಯೂರಪ್ಪ ಅವರ ಜೊತೆ ಗುರುತಿಸಿಕೊಂಡಿರುವ ಸಚಿವರು ಮತ್ತು ಶಾಸಕರಿಗೆ ಅನುದಾನ ಬಿಡುಗಡೆ ಮಾಡದೇ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ. ಕರ್ನಾಟಕ ಕೈಮಗ್ಗ ನಿಗಮಕ್ಕೆ ಬಜೆಟ್‌ನಲ್ಲಿ 60 ಕೋಟಿ ರೂ ಅನುದಾನ ಒದಗಿಸಲಾಗಿತ್ತು. ಈ ಪೈಕಿ 30 ಕೋಟಿ ರೂಪಾಯಿ ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದ ಕಡತವನ್ನು ತಮ್ಮ ಬಳಿಯೇ ಇರಿಸಿಕೊಳ್ಳುವ ಮೂಲಕ ಮುಖ್ಯಮಂತ್ರಿಯವರು ಅಡ್ಡಗಾಲು ಹಾಕಿದ್ದಾರೆ' ಎಂದು ಕೆಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಲಕ್ಷ್ಮೀನಾರಾಯಣ ದೂರಿದರು

ಭಿನ್ನಬಣ ಶಾಸಕರು ಸದ್ಯಕ್ಕೆ ಬಚಾವ್
ಬಾಗಲಕೋಟೆ:  ಹಾವೇರಿಯಲ್ಲಿ ನಡೆದ ಕೆಜಿಪಿ ಸಮಾವೇಶದಲ್ಲಿ ಪಾಲ್ಗೊಂಡ 14 ಜನ ಭಿನ್ನಮತೀಯ ಶಾಸಕರ ವಿರುದ್ಧ ಅವಸರದಲ್ಲಿ ಶಿಸ್ತುಕ್ರಮ ಕೈಗೊಳ್ಳುವುದಿಲ್ಲ. ಬಿಜೆಪಿಯಲ್ಲೇ ಉಳಿಯುವಂತೆ ಅವರೆಲ್ಲರ ಮನವೊಲಿಸಲು ಯತ್ನಿಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೋಮವಾರ ಇಲ್ಲಿ ತಿಳಿಸಿದರು.

`ಬಂಡಾಯ ಶಾಸಕರಲ್ಲಿ ಈಗಾಗಲೇ ಲಕ್ಷ್ಮೀನಾರಾಯಣ, ಸುರೇಶಗೌಡ ಮತ್ತು ವಿಶ್ವನಾಥ ಅವರು ಬಿಜೆಪಿಯಲ್ಲಿಯೇ ಉಳಿಯುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಅವರೆಲ್ಲರೂ ಕೆಜಿಪಿಗೆ ಹೋಗುವುದಾದರೆ ಯಡಿಯೂರಪ್ಪ ಅವರಂತೆ ರಾಜೀನಾಮೆ ನೀಡಿ ಹೋಗಲಿ' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT