ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣಾಟ- ದೊಡ್ಡಾಟಕ್ಕೆ ಮನ್ನಣೆ ಬೇಕು

Last Updated 10 ಅಕ್ಟೋಬರ್ 2011, 6:20 IST
ಅಕ್ಷರ ಗಾತ್ರ

ಹಾವೇರಿ: `ಯಕ್ಷಗಾನಕ್ಕೆ ದೊರೆತ ಮಾನ್ಯತೆ ಉತ್ತರ ಕರ್ನಾಟಕದ ಜನಪದ ರಂಗಕಲೆಗಳಾದ ದೊಡ್ಡಾಟ-ಸಣ್ಣಾಟಗಳಿಗೆ ಸಿಗಬೇಕಾದ ಅಗತ್ಯವಿದೆ ಎಂದು ಜನಪದ ರಂಗಭೂಮಿ ತಜ್ಞ ಪ್ರೊ. ಶ್ರೀಶೈಲ ಹುದ್ದಾರ ಹೇಳಿದರು.

ನಗರದ ಗೆಳೆಯರ ಬಳಗದ ಲೋಡಾಯಿ ಸಭಾಂಗಣದಲ್ಲಿ ಗೆಳೆಯರ ಬಳಗ, ಜ್ಞಾನಗಂಗಾ ಶಿಕ್ಷಣ ಸಮಿತಿ ಹಾಗೂ ಭಗನಿಯರ ಬಳಗದ ಆಶ್ರಯದಲ್ಲಿ ಶನಿವಾರ ನಡೆದ ರಂಗ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಕ್ಷಗಾನಕ್ಕಿಂತ ಪ್ರಾಚೀನ ಕಲೆಗಳಾದ ಸಣ್ಣಾಟ-ದೊಡ್ಡಾಟಗಳು ದುಡಿಯುವ ಜನರ ಬೆವರಿನ ಕಲೆಗಳಾಗಿವೆ. ಜನರ ಒಟ್ಟು ಜನಜೀವನದ ಸಮೃದ್ಧ ಸಂಸ್ಕೃತಿಯನ್ನು ಅನಾವರಣಗೊಳಿಸಿವೆ. ಇಂತಹ ಕಲೆಗೆ ಸೂಕ್ತ ಮಾನ್ಯತೆ ಸಿಗುವಂತಾಗಬೇಕು. ಆಗ ಮಾತ್ರ ಕಲೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಖ್ಯಾತ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಮಾತನಾಡಿ, ನಿಜದ ನೆಲೆಯನ್ನು ಸದಾ ಹುಡುಕುವ ರಂಗಭೂಮಿಯು, ಜನಪದದ ಕಡೆಗೆ ತನ್ನ ಪಯಣ ಬೆಳೆಸಬೇಕಿದೆ. ಸ್ವಾತಂತ್ರ್ಯದ ಕಿಡಿಯನ್ನು ತನ್ನೊಳಗಿಟ್ಟುಕೊಂಡು ಬದುಕುವ ರಂಗಭೂಮಿ 6 ದಶಕಗಳಲ್ಲಿ ಎಲ್ಲ ಸಮಸ್ಯೆಗಳಿಗೆ ತನ್ನದೇ ಆದ ಶೈಲಿಯಲ್ಲಿ ಉತ್ತರ ಕಂಡುಕೊಂಡ ಏಕೈಕ ಕಲೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಗೆಳೆಯರ ಬಳಗದ ಅಧ್ಯಕ್ಷ ಕೃಷ್ಣ ಮಂಗಳೂರು ಮಾತನಾಡಿ, ಸಾಂಸ್ಕೃತಿಕ ಕಾಳಜಿಯನ್ನಿಟ್ಟುಕೊಂಡು ಗೆಳೆಯರ ಬಳಗವು ಇಂತಹ ಸಂವಾದದ ಮೂಲಕ ಜನರಲ್ಲಿ ರಂಗಕಲೆಗಳ ಬಗ್ಗೆ ಸದಭಿರುಚಿ ಮೂಡಿಸಲು ಪ್ರಯತ್ನಿಸುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಸತೀಶ ಕುಲಕರ್ಣಿ ಮತ್ತು ಪತ್ನಿ ಕಾಂಚನಾ ಅವರನ್ನು ಸನ್ಮಾನಿಸಲಾಯಿತು.

ನಂತರ ನಡೆದ ರಂಗಭೂಮಿ ಕುರಿತ ಸಂವಾದದಲ್ಲಿ ಟಿ.ವಿ. ಕಬಾಡಿ, ಪರಿಮಳಾ ಜೈನ್, ಕೆ.ಆರ್. ಹಿರೇಮಠ ಹಾಗೂ ಶಂಕರ ತಮ್ಮಣ್ಣವರ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಹಾವೇರಿ ಕಲಾ ತಂಡ ಮತ್ತು ಬಿ.ಜೆ.ವಿ.ಎಸ್. ಸಮತಾ ಕಲಾ ತಂಡದ ಕಲಾವಿದರಾದ ಕುಮಾರದಾಸ ಹೂಗಾರ, ರೇಣುಕಾ ಗುಡಿಮನಿ, ಶಿವಯೋಗಿ ಮರಡೂರ, ಮುತ್ತುರಾಜ, ಆರ್.ಸಿ. ನಂದಿಹಳ್ಳಿ, ಮಮತಾ ಪಾಟೀಲ, ಶಶಿಕಲಾ ಅಕ್ಕಿ, ಭಾರತಿ ಯಾವಗಲ್, ಸುರೇಖಾ ನೇರಳೆಕರ, ರಾಜು ಹಿರೇಮಠ, ಮಧುಮತಿ ಚಿಕ್ಕೆಗೌಡ್ರ ಮುಂತಾದವರು ರಂಗ ಗೀತೆಗಳನ್ನು ಹಾಡಿದರು.

ಡಾ.ಸುದೀಪ ಪಂಡಿತ, ಸಂಜೀವ ಬಂಕಾಪೂರ, ಗೀತಾ ಮಂಗಳೂರ, ಕಾಂಚನಾ ಕುಲಕರ್ಣಿ ಹಾಜರಿದ್ದರು.
ಪ್ರೋ. ಕೋರಗಲ್ ವಿರುಪಾಕ್ಷಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಬಂಕಾಪೂರ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಪಟ್ಟಣಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT