ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 6 ಗಂಟೆ ಹೆದ್ದಾರಿ ತಡೆ, ಆಕ್ರೋಶ

ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಹಿಳೆ ಸಾವು
Last Updated 11 ಡಿಸೆಂಬರ್ 2012, 11:04 IST
ಅಕ್ಷರ ಗಾತ್ರ

ಭರಮಸಾಗರ: ಕಾರು ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಸಾವನ್ನಪ್ಪಿದ ಕಾರಣ ಆಕ್ರೋಶಗೊಂಡ ಸಾರ್ವಜನಿಕರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಜರುಗಿದೆ.ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೆಲಸದ ಗೌರಮ್ಮ (33) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.

ಕಡ್ಲೇಬಾಳ್ ಗ್ರಾಮದಲ್ಲಿನ ತವರು ಮನೆಗೆ ತೆರಳಿದ್ದ ಗೌರಮ್ಮ ಸೋಮವಾರ ಕರ್ತವ್ಯಕ್ಕೆ ಹಾಜರಾಗಲು ಹಿಂದಿರುಗುತ್ತಿದ್ದು, ಹಂಪನೂರು ಗೇಟ್ ಬಳಿ ವಾಹನದಿಂದ ಇಳಿದು ಗ್ರಾಮಕ್ಕೆ ಹೋಗುವ ರಸ್ತೆ ಸೇರಲು ಹೆದ್ದಾರಿ ದಾಟುತ್ತಿದ್ದ ಸಮಯದಲ್ಲಿ ಕಾರು ಡಿಕ್ಕಿ ಹೊಡೆದಿದೆ. ಘಟನೆ ನಡೆದ ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದ ವಾಹನ ಚಾಲಕನ್ನು ಸ್ಥಳದಲ್ಲಿದ್ದವರು ಹಿಂಬಾಲಿಸಿ ಹೆಬ್ಬಾಳಿನ ಟೋಲ್ ಬಳಿ ಹಿಡಿದು ಕರೆತಂದು ಥಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಚಾಲಕನ್ನು ಸಾರ್ವಜನಿಕರಿಂದ ಪಾರುಮಾಡಿ ತಮ್ಮ ವಾಹನದಲ್ಲಿ ಕೂರಿಸಿಕೊಂಡು ಠಾಣೆಗೆ ಕರೆದೊಯ್ಯಲು ಮಾಡಿದ ಯತ್ನಕ್ಕೆ ಅಡ್ಡಿಪಡಿಸಿದ ಸ್ಥಳೀಯರು ಪೊಲೀಸ್ ವಾಹನಕ್ಕೆ ಮುತ್ತಿಗೆಹಾಕಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಡಿವೈಎಸ್‌ಪಿ ಗಂಗಯ್ಯ ಪ್ರತಿಭಟನಾಕಾರರ ಜತೆ ಮಾತುಕತೆ ನಡಿಸಿ ಹೆದ್ದಾರಿ ತಡೆ ತೆರವುಗೊಳಿಸಲು ನಡೆಸಿದ ಯತ್ನ ಫಲಿಸಲಿಲ್ಲ. ಸುಮಾರು 6 ಗಂಟೆ ಕಾಲ ನಡೆದ ಹೆದ್ದಾರಿ ತಡೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.  

ಜಿಲ್ಲಾಧಿಕಾರಿ ಇಕ್ಕೇರಿ, ಎಸ್‌ಪಿ ನಾಗರಾಜ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದರು.
ಭರಮಸಾರ, ಕೊಳಹಾಳ್, ಹಂಪನೂರು, ಎಮ್ಮೆಹಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ-4ರ ಸಮಸ್ಯೆಗಳ ನಿವಾರಣೆ ಆಗುವವರೆಗೆ ಹೆಬ್ಬಾಳ್ ಬಳಿ ಟೋಲ್ ಶುಲ್ಕ ವಸೂಲಿ ನಿಲ್ಲಿಸಬೇಕು. ಮೃತಳ ಕುಟುಂಬಕ್ಕೆ ಪರಿಹಾರ ನೀಡುಬೇಕು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷಎಚ್.ಎನ್. ತಿಪ್ಪೇಸ್ವಾಮಿ, ರೈತ ಸಂಘದ ಎಂ.ಎಸ್. ಮಂಜಣ್ಣ, ಬಸವರಾಜ್ ಒತ್ತಾಯಿಸಿದರು. ಡಿ.ಎಸ್. ಪ್ರದೀಪ್, ಗ್ರಾಮ ಪಂಚಾಯ್ತಿ ಸದಸ್ಯರಾದ ಕಲ್ಲೇಶ್, ಶಿವಶಂಕರ್, ಮಾಜಿ ಉಪಾಧ್ಯಕ್ಷ ರುದ್ರಪ್ಪ, ಈಶಪ್ಪ, ಹರೀಶ್ ಇದ್ದರು. ಈ ಸಂದರ್ಭದಲ್ಲಿ ಕೆಲವು ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.  

ಮೃತಳ ಕುಟುಂಬಕ್ಕೆ ತಕ್ಷಣ 11 ಸಾವಿರ ಪರಿಹಾರ ನೀಡಿ ಅವರ ಮಕ್ಕಳ ಶಿಕ್ಷಣಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಇಕ್ಕೇರಿ ಭರವಸೆನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT