ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 8 ಬಾರಿ ಖರ್ಗೆ ಗೆಲ್ಲಿಸಿದ ಗುರುಮಠಕಲ್

ಕ್ಷೇತ್ರ ವಿಶೇಷ
Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಯಾದಗಿರಿ:  ರಾಜ್ಯದ 30ನೇ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ಗುರುಮಠಕಲ್, ರಾಜಕೀಯವಾಗಿ ಸಾಕಷ್ಟು ಮಹತ್ವ ಪಡೆದ ಕ್ಷೇತ್ರ. ಕೇಂದ್ರ ಸಚಿವರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸತತ 8 ಬಾರಿ ಆಯ್ಕೆ ಮಾಡುವ ಮೂಲಕ ದಾಖಲೆ ಬರೆದ ಕ್ಷೇತ್ರವಿದು.

ಗುರುಮಠಕಲ್ ಮತಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿ ಕಾಂಗ್ರೆಸ್‌ಗೆ ಭದ್ರ ಬುನಾದಿ ಒದಗಿಸಿದ್ದಾರೆ. 1962 ರಿಂದ 2008 ರವರೆಗೆ ನಡೆದ ಚುನಾವಣೆಯಲ್ಲಿ ಒಂದು ಬಾರಿ ಮಾತ್ರ ಸ್ವತಂತ್ರ ಅಭ್ಯರ್ಥಿ ಜಯಗಳಿಸಿದ್ದು, ಉಳಿದ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಭೇರಿ ಬಾರಿಸಿದ್ದಾರೆ.

1962ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿದ್ಯಾಧರ ಗುರೂಜಿ ಸುಮಾರು 9,469 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿದ್ದರು. ಇದಾದ ನಂತರ 1967 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ಎಂಕಪ್ಪ ಜಯಗಳಿಸುವ ಮೂಲಕ ಕಾಂಗ್ರೆಸ್‌ನ ವಿಜಯ ಯಾತ್ರೆ ಆರಂಭಿಸಿದರು.

1972ರಿಂದ 2004 ರವರೆಗೆ ನಡೆದ 8 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಸತತವಾಗಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದರು. 2008ರಲ್ಲಿ  ಬಾಬುರಾವ ಚಿಂಚನಸೂರ ಗೆಲ್ಲುವ ಮೂಲಕ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಉಳಿಸಿಕೊಟ್ಟರು.

ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಭಾರಿ ಅಂತರದಿಂದಲೇ ಜಯ ಗಳಿಸಿರುವುದು ಇಲ್ಲಿ ವಿಶೇಷ. ಅದರಲ್ಲೂ ಮಲ್ಲಿಕಾರ್ಜುನ ಖರ್ಗೆ ಅವರು ಗರಿಷ್ಠ ಸುಮಾರು 47,124 ಮತಗಳ ಅಂತರದಿಂದ ಈ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಪ್ರತಿ ಬಾರಿಯೂ 10 ರಿಂದ 15 ಸಾವಿರ ಮತಗಳಿಂದ  ಖರ್ಗೆ ಜಯ ಗಳಿಸಿದ್ದಾರೆ. ಗುರುಮಠಕಲ್ ಮತಕ್ಷೇತ್ರದಲ್ಲಿ ಖಾತೆ ತೆರೆಯುವುದಕ್ಕಾಗಿ ಬೇರೆ ಪಕ್ಷಗಳು ಈಗಲೂ ಪ್ರಯತ್ನಿಸುತ್ತಲೇ ಇವೆ.

ಹೊರಗಿನವರಿಗೆ ಮಣೆ
ಈ ಕ್ಷೇತ್ರದ ಇನ್ನೊಂದು ವಿಶೇಷವೆಂದರೆ ಸ್ವತಂತ್ರ ಅಭ್ಯರ್ಥಿ ವಿದ್ಯಾಧರ ಗುರೂಜಿ ಅವರನ್ನು ಹೊರತುಪಡಿಸಿ, ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಎಲ್ಲ ಅಭ್ಯರ್ಥಿಗಳು ಬೇರೆ ಕ್ಷೇತ್ರದವರೇ.

ಮಲ್ಲಿಕಾರ್ಜುನ ಖರ್ಗೆ ಪಕ್ಕದ ಚಿತ್ತಾಪುರ ಕ್ಷೇತ್ರಕ್ಕೆ ಸೇರಿದವರು. ಹಾಲಿ ಶಾಸಕ ಬಾಬುರಾವ ಚಿಂಚನಸೂರ ಸಹ  ಚಿತ್ತಾಪುರ ಕ್ಷೇತ್ರದಿಂದ ಇಲ್ಲಿಗೆ ವಲಸೆ ಬಂದವರು. ಪ್ರತಿ ಚುನಾವಣೆಯಲ್ಲೂ ಮತದಾರರು ಸ್ಥಳೀಯರಿಗಿಂತ ಹೊರಗಿನವರಿಗೇ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಬಾರಿಯೂ ಹೊರಗಿನಿಂದ ಬಂದಿರುವ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವ ಗಿರೀಶ ಮಟ್ಟೆಣ್ಣವರ ಧಾರವಾಡದವರು. ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ ಚಿಂಚನಸೂರ ಗುಲ್ಬರ್ಗ ಜಿಲ್ಲೆಯವರು. ಜೆಡಿಎಸ್ ಅಭ್ಯರ್ಥಿ ನಾಗನಗೌಡ ಕಂದಕೂರ ಹಾಗೂ ಕೆಜೆಪಿ ಅಭ್ಯರ್ಥಿ ವೆಂಕಟರಡ್ಡಿ ಮುದ್ನಾಳ ಮಾತ್ರ ಇದೇ ಜಿಲ್ಲೆಯವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT