ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಮಳೆ: ವೇಗ ಪಡೆದ ಬಿತ್ತನೆ ಕಾರ್ಯ

Last Updated 9 ಆಗಸ್ಟ್ 2011, 8:10 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾದ್ಯಂತ ಮೂರ‌್ನಾಲ್ಕು ದಿನದಿಂದ ಸತತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ವೇಗ ಪಡೆದಿದೆ. ಬಿತ್ತನೆ ಮಾಡಲಾಗಿದ್ದ ಬೆಳೆಗಳು ಮೊಳಕೆಯೊಡೆದಿವೆ. ರೈತ ಸಮುದಾಯದಲ್ಲಿ ಸಮಾಧಾನ ಭಾವ ಮೂಡುತ್ತಿದೆ.ಈ ಬಾರಿ ಸುರಿಯುತ್ತಿರುವ ಸಾಧಾರಣ ಮಳೆಗೆ, ಜಿಲ್ಲೆಯ ಕೃಷಿ ವಲಯದ 1.02 ಲಕ್ಷ ಹೆಕ್ಟೇರ್ ಗುರಿಯ ಪೈಕಿ ಸೋಮವಾರದ ಹೊತ್ತಿಗೆ 59,185 ಹೆಕ್ಟೇರ್‌ನಷ್ಟು (ಶೇ 58) ಬಿತ್ತನೆ ಪೂರ್ಣಗೊಂಡಿದೆ. ಕಳೆ ತೆಗೆಯುವ ಕೆಲಸವೂ ಅಲ್ಲಲ್ಲಿ ಶುರುವಾಗಿದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆಶಾದಾಯಕವಾಗಿ ಸುರಿದಿದ್ದ ಮಳೆ ಜೂನ್ ಮತ್ತು ಜುಲೈ ತಿಂಗಳಲ್ಲಿ ನಿರೀಕ್ಷೆಯಂತೆ ಸುರಿಯಲಿಲ್ಲ. ನೆಲವನ್ನು ಹಸನುಗೊಳಿಸಿದ್ದ ರೈತರು ಜುಲೈ ಕೊನೇವರೆಗೂ  ಬಿತ್ತನೆಗೆ ಕಾಯುತ್ತಿದ್ದರು. ಜುಲೈ 25ರ ಹೊತ್ತಿಗೆ ಶೇ 24ರಷ್ಟು ಮಾತ್ರ ಬಿತ್ತನೆ ಆಗಿತ್ತು. ಅದಾಗಿ, 15 ದಿನದ ಅಂತರದಲ್ಲಿ ಅದರ ದುಪ್ಪಟ್ಟು ಬಿತ್ತನೆ ಆಗಿರುವುದು ಗಮನಾರ್ಹ.

ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ರಾಗಿಯನ್ನು ರೈತರು ಬೆಳೆಯುತ್ತಾರೆ. ಇದುವರೆಗೆ 38,824 ಹೆಕ್ಟೇರ್‌ನಷ್ಟು ರಾಗಿ ಬಿತ್ತನೆಯಾಗಿದೆ. ಅದೇ ರೀತಿ, ಜಿಲ್ಲೆಯ ಪ್ರಮುಖ ಬೆಳೆಯಾದ ನೆಲಗಡಲೆ 10,413 ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ. ತೊಗರಿ 2774 ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ.

ಈ ಬಾರಿ ಸಾಧಾರಣ ಮಳೆಯಾಗಿದೆ. ಕೆರೆ-ಕುಂಟೆಗಳಿಗೆ ಮಾತ್ರ ನೀರು ಬಂದಿಲ್ಲ. ರಾಗಿ ಬೆಳೆಗೆ ಅನುಕೂಲಕರವಾಗುವಂಥ ಹದವಾದ ಮಳೆ ಬಿದ್ದಿದೆ. ರಾಗಿ ಬಿತ್ತನೆ ಮಾಡಿರುವವರಿಗೆ ಅನುಕೂಲವಾಗಿದೆ ಎಂಬು ಬನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲುವಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ `ಪ್ರಜಾವಾಣಿ~ಗೆ ಸೋಮವಾರ ತಿಳಿಸಿದರು.

ಕಳೆದ ವರ್ಷ ಆಗಸ್ಟ್ ಹೊತ್ತಿಗೆ ನಮ್ಮ ಹೊಲದಲ್ಲಿ ರಾಗಿ ಬಿತ್ತನೆ ಪೂರ್ಣಗೊಂಡಿತ್ತು. ಆದರೆ ಈ ವರ್ಷ ಇನ್ನೂ ಬಿತ್ತನೆ ಪೂರ್ಣಗೊಂಡಿಲ್ಲ. ಇನ್ನೊಂದೆರಡು ಬಾರಿ ಮಳೆ ಸುರಿದರೆ, ತಡವಾಗಿ ಬಿತ್ತಲಿರುವ ನಮ್ಮಥ ರೈತರಿಗೆ ಅನುಕೂಲವಾಗಲಿದೆ ಎಂಬುದು ಅವರ ಮಾತು.

`15-20 ದಿನದ ಹಿಂದೆ ರಾಗಿ ಮತ್ತು ನೆಲಗಡಲೆಯನ್ನು ನಮ್ಮ ಗ್ರಾಮದ ರೈತರು ಬಿತ್ತಿದ್ದರು. ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆ ಬಾರದೇ ಹೋಗಿದ್ದರೆ ತೊಂದರೆಯಾಗುತ್ತಿತ್ತು. ಟ್ರ್ಯಾಕ್ಟರ್‌ನಲ್ಲಿ ಬಿತ್ತನೆ ಮಾಡುವ ಖರ್ಚು ದುಬಾರಿ. ಗೊಬ್ಬ ಹಾಗೂ ಕೃಷಿ ಕೂಲಿಯೂ ಹೆಚ್ಚು. ಹೀಗಾಗಿ ಬೆಳೆ ಕೈಕೊಟ್ಟರೆ ಲಕ್ಷಾಂತರ ರೂಪಾಯಿ ನಷ್ಟ ಖಚಿತ. ಆದರೆ ಆ ಆತಂಕ ಈಗಿಲ್ಲ. ರಾಗಿ ಪೈರು ಎದ್ದಿದೆ. ನೆಲಗೆಡಲೆ ಗಿಡಗಳು ನಗುತ್ತಿವೆ~ ಎಂಬುದು ಕೋಲಾರ ತಾಲ್ಲೂಕಿನ ಸೀಪೂರಿನ ರೈತ ದೇವರಾಜ್ ಅವರ ನುಡಿ.

ಸೀಪೂರಿನಲ್ಲಿ ಕಳೆ ತೆಗೆಯಲು ಮತ್ತು ಒತ್ತಾಗಿರುವ ಪೈರನ್ನು ಕಡಿಮೆ ಮಾಡುವ ಸಲುವಾಗಿ ಗೂಟೆ ಹೊಡೆಯುವ ಕೆಲಸ ನಡೆಯುತ್ತಿದೆ. ನೆಲಗಡಲೆಯಲ್ಲಿ ಕಳೆ ತೆಗೆಯುವ ಕೆಲಸ ನಡೆಯುತ್ತಿದೆ.

ರಾಗಿಗೇ ಆದ್ಯತೆ: ಸೀಪೂರಿನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಸಾಮಾನ್ಯವಾಗಿ ರೈತರು ಭತ್ತ ಬೆಳೆಯುತ್ತಿದ್ದರು. ಏಳು ವರ್ಷದಿಂದ ಮಳೆ ಸಮರ್ಪಕವಾಗಿ ಸುರಿಯದಿರುವುದರಿಂದ ಕೆರೆ ತುಂಬದ ಪರಿಣಾಮ ಭತ್ತ ಬೆಳೆಯುವುದನ್ನು ಕೈಬಿಟ್ಟು, ರಾಗಿ ಬೆಳೆಯಲು ಮುಂದಾಗಿದ್ದಾರೆ. ಉಪ ಬೆಳೆಗಳಾಗಿ ಅವರೆ, ತೊಗರಿ, ಜೋಳ, ಎಳ್ಳು ಕೂಡ ಬೆಳೆಯುತ್ತಿದ್ದಾರೆ.

ಬಿತ್ತನೆ ಮಾಡಿರುವವರಿಗೂ ಮತ್ತು ಬಿತ್ತನೆ ಶುರು ಮಾಡ ಲಿರುವವರಿಗೂ ಇತ್ತೀಚೆಗೆ ಸುರಿದ ಮಳೆಯಿಂದ ಅನುಕೂಲವೇ ಆಗಲಿದೆ. ಆಗಸ್ಟ್ ಅಂತ್ಯದವರೆಗೂ ಜಿಲ್ಲೆಯಲ್ಲಿ ರಾಗಿ, ನೆಲಗಡಲೆ ಬಿತ್ತನೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಮಳೆ ಸುರಿದರೆ ರೈತರಿಗೆ ಲಾಭವನ್ನು ತರಲಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT