ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಸೋಲಿನ ಹಾದಿಯಲ್ಲಿ...

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್ ತಂಡದ ಸೋಲಿನ ಯಾತ್ರೆಯ ಹಾದಿ ಹಿಡಿದಿರುವ ಸಾನಿಯಾ ಮಿರ್ಜಾ ಇತ್ತೀಚಿನ ವರ್ಷಗಳಲ್ಲಿ ಸತತ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಈ ಆಟಗಾರ್ತಿ ಗೆಲುವು  ಪಡೆದು ಸುದ್ದಿ ಮಾಡಿದ್ದಕ್ಕಿಂತ ಸೋಲು ಕಂಡು ಪ್ರಚಾರ ಪಡೆದದ್ದೇ ಹೆಚ್ಚು. ಇದೇ ಹಾದಿಯನ್ನು ಸೋಮದೇವ್ ದೇವವರ್ಮನ್ ಸಹ ಅನುಸರಿಸುತ್ತಿದ್ದಾರೆ.

ಕತಾರ್‌ನ  ದೋಹಾದಲ್ಲಿ 2006ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಈ ಆಟಗಾರ್ತಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು. ಸಿಂಗಲ್ಸ್‌ನಲ್ಲಿನ ಸಾಧನೆಗಿಂತ ಮಿಶ್ರ ಡಬಲ್ಸ್ ವಿಭಾಗದಲ್ಲಿ ಇದುವರೆಗೂ ಮೂರು ಸಲ (2006, 2010 ಹಾಗೂ 2002ರ ಏಷ್ಯನ್ ಕ್ರೀಡಾಕೂಟ) ಪದಕ ಜಯಿಸಿದ್ದಾರೆ.

ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಸಿಂಗಲ್ಸ್‌ನಲ್ಲಿ ಬೆಳ್ಳಿ ಹಾಗೂ ಡಬಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದು ಮಾತ್ರ ಉತ್ತಮ ಸಾಧನೆ. ಆದರೆ  ಸಿಂಗಲ್ಸ್‌ನಲ್ಲಿ ಈ ಆಟಗಾರ್ತಿ ಲಯ ಕಳೆದುಕೊಳ್ಳುತ್ತಿದ್ದಾರೆ. ಆರಂಭಿಕ ಸುತ್ತುಗಳಲ್ಲಿ ಸೋಲು ಅನುಭವಿಸುತ್ತಿದ್ದಾರೆ.

ಈ ವರ್ಷದಲ್ಲಿ ಆಡಿರುವ ಒಟ್ಟು 20 ಟೂರ್ನಿಗಳಲ್ಲಿ ಕೇವಲ 9 ಪಂದ್ಯಗಳಲ್ಲಿ ಮಾತ್ರ ಗೆಲುವು ಪಡೆದಿದ್ದಾರೆ. ಸಾನಿಯಾ ಡಬಲ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ರಷ್ಯಾದ ಎಲೆನಾ ವೆಸ್ನಿನಾ ಜೊತೆ ಗೂಡಿ  ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು. ಆದರೆ ಸಿಂಗಲ್ಸ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿಲ್ಲ.

ಪದೇ ಪದೇ ಪಂದ್ಯಗಳನ್ನು ಆಡುತ್ತಿರುವುದರಿಂದ ಈ ಆಟಗಾರ್ತಿಗೆ    ಈಗ  ಗಾಯದ ಸಮಸ್ಯೆ  ಎದುರಾಗಿದೆ. ಆದ್ದರಿಂದ ಈ ವರ್ಷದಲ್ಲಿನ ಇನ್ನಷ್ಟು ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಸನಿಹಕ್ಕೂ ಸುಳಿಯದ ಸೋಮದೇವ್ ದೇವವರ್ಮನ್ ಸಹ ಸಾನಿಯಾ ಹಾದಿಯಲ್ಲಿ ಸಾಗಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಈ ಆಟಗಾರ ಮೊದಲ ಸುತ್ತಿನಲ್ಲಿಯೇ ಆ್ಯಂಡಿ ಮರ‌್ರೆ ಎದುರು ಸೋಲು ಕಂಡಿದ್ದು ಅದಕ್ಕೆ ಸಾಕ್ಷಿ. ಹಿಂದಿನ ಟೂರ್ನಿಗಳಲ್ಲಿ ಸೋಮದೇವ್ ಅಷ್ಟೇನೂ ಗಮನಾರ್ಹ ಪ್ರದರ್ಶನ ನೀಡಿಲ್ಲ. 

ಕಳೆದ 10 ಟೂರ್ನಿಗಳಲ್ಲಿ ಮೂರು ಸಲ ಎರಡನೇ ಸುತ್ತಿಗೆ ಹಾಗೂ ಒಂದು ಸಲ ಕ್ವಾರ್ಟರ್‌ಫೈನಲ್ ಹಂತಕ್ಕೆ ಪ್ರವೇಶಿಸಲು ಸಾಧ್ಯವಾಗಿದ್ದು ಮಾತ್ರ ಅವರ ಸಾಧನೆ.
ಯಾವುದೇ ಟೂರ್ನಿಯಲ್ಲಿ ಆಡಬೇಕಾದರೆ ಆಟಗಾರರ ಆಸಕ್ತಿ ಹಾಗೂ ಸಾಮರ್ಥ್ಯ ಎರಡೂ ಸಮ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಪದೇ ಪದೇ ಆಡುವುದರಿಂದ ಆಟಗಾರರ ಪ್ರದರ್ಶನ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಇದು ನಿರಂತರ ಸೋಲಿಗೆ ಕಾರಣ ಎಂದು ವಿಶ್ಲೇಷಿಸುತ್ತಾರೆ ಮೈಸೂರು ವಿಶ್ವವಿದ್ಯಾಲಯದ ಮನಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಹಾಗೂ ಯುಜಿಸಿ ಸಿಬ್ಬಂದಿ ಶೈಕ್ಷಣಿಕ ಕಾಲೇಜಿನ ನಿರ್ದೇಶಕ  ಡಾ. ಜಿ. ವೆಂಕಟೇಶ್ ಕುಮಾರ್.

`ಒಬ್ಬ ಆಟಗಾರ ಸಾಲು ಸಾಲಾಗಿ ಗೆಲುವು ಪಡೆಯುತ್ತಿದ್ದರೆ, ಅದೇ ಹುಮ್ಮಸ್ಸಿನಲ್ಲಿ ಸತತ ಟೂರ್ನಿ ಆಡುತ್ತಿದ್ದರೆ, ಅದು ಯಶಸ್ವಿ ಪ್ರದರ್ಶನ ಎನ್ನಲಾಗದು. ವಿಶ್ರಾಂತಿ ಅಗತ್ಯ.
 
ಇಲ್ಲವಾದರೆ, ಆಡುವ ಸಾಮರ್ಥ್ಯವನ್ನು ದಿನ ಕಳೆದಂತೆ ಆತ ಕಳೆದುಕೊಳ್ಳುತ್ತಾನೆ. ಆದ್ದರಿಂದಲೇ ಶಾಲೆಗಳಲ್ಲಿ ಪ್ರತಿ 40 ನಿಮಿಷ ಅಥವಾ ಒಂದು ಗಂಟೆಗೆ  ಕನಿಷ್ಠ 10 ನಿಮಿಷ ವಿಶ್ರಾಂತಿ ನೀಡುತ್ತಾರೆ~ ಎನ್ನುವುದು ಅವರ ಅಭಿಪ್ರಾಯ.

`ಇತರ ಆಟಗಾರರನ್ನು ಅನುಕರಿಸಬಾರದು. ಎಲ್ಲರೂ ಧ್ಯಾನಚಂದ್ ಸಚಿನ್ ತೆಂಡೂಲ್ಕರ್ ಆಗಬೇಕು ಎಂದು ಆಸೆ ಪಡುತ್ತಾರೆ. ಸಾಮರ್ಥ್ಯ ಮೀರಿ ಆಸೆ ಪಡುವುದು ಆಟಗಾರರನ್ನು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವಂತೆ ಮಾಡುತ್ತದೆ.

ಆದ್ದರಿಂದ ತಮ್ಮ ಪ್ರದರ್ಶನ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕು. ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಳ್ಳುವುದು ಸಹ ಸೋಲಿಗೆ ಕಾರಣವಾಗುತ್ತದೆ~ ಎನ್ನುವುದು ವೆಂಕಟೇಶ್ ಅವರ ಅನಿಸಿಕೆ.

ಅಮೆರಿಕ ಓಪನ್ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ತಮ್ಮ ಆಟವನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಇತ್ತೀಚಿಗೆ ಸಿನ್ಸಿನಾಟಿಯಲ್ಲಿ ನಡೆದ ಸದರ್ನ್ ಹಾಗೂ ವೆಸ್ಟರ್ನ್ ಟೂರ್ನಿಯಲ್ಲಿ ಇವರು ಚಾಂಪಿಯನ್ ಆಗಿದ್ದರು. ಈ ಜೋಡಿ ಹತ್ತು ವರ್ಷಗಳ ನಂತರ ಮತ್ತೆ ಈ ಪ್ರಶಸ್ತಿ ಜಯಿಸಿದೆ.

ಪೇಸ್ ಹಾಗೂ ಭೂಪತಿ ಅವರು ಉಳಿಸಿಕೊಂಡಿರುವ ಲಯವನ್ನು ಸಾನಿಯಾ ಹಾಗೂ ಸೋಮದೇವ್ ಉಳಿಸಿಕೊಂಡಿಲ್ಲ. ಇನ್ನೊಂದು ಅಚ್ಚರಿಯಂದರೆ ಪೇಸ್ ಹಾಗೂ ಭೂಪತಿ ಅವರು ಸಿನ್ಸಿನಾಟಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಅಮೆರಿಕದ ಮೈಕ್ ಹಾಗೂ ಬಾಬ್ ಬ್ರಯನ್ ಜೋಡಿಯನ್ನು ಸೋಲಿಸಿದ್ದರು.  ಇದು ಸಹಜವಾಗಿಯೇ ಅವರ ಆತ್ಮ ವಿಶ್ವಾಸ ಹೆಚ್ಚಿಸಿತ್ತು.

ನಿರಂತರವಾಗಿ ಟೂರ್ನಿ ಆಡುವುದು ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ.     ಅವರು    ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಆದ್ದರಿಂದ  ವಿಶ್ರಾಂತಿ ಆಟಗಾರರ ಪ್ರದರ್ಶನ ಮಟ್ಟವನ್ನು ಹೆಚ್ಚಿಸುವಲ್ಲಿ ನೆರವಾಗಬಹುದು. 
ಈ ನಿಟ್ಟಿನಲ್ಲಿ ಆಟಗಾರರು ಯೋಚಿಸುವುದು ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT