ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಕಾರ್ಯವೇ ಸಮಾಜಸೇವೆ: ಮುರುಘಾಶ್ರೀ

Last Updated 6 ಫೆಬ್ರುವರಿ 2012, 10:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಾವು ಎನ್ನುವುದು ಯಾರನ್ನೂ ಬಿಟ್ಟಿಲ್ಲ. ಕೋಟಿ ವೀರರು, ಅತ್ಯಂತ ಮೇಲ್ಮಟ್ಟದ ಹುದ್ದೆ ಯಲ್ಲಿರುವವರರು ಎಂಬ ತಾರತಮ್ಯವನ್ನು ಸಾವು ಎಂದಿಗೂ ಮಾಡುವುದಿಲ್ಲ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾಶರಣರು ಸಾವು ಕುರಿತು ಬಣ್ಣಿಸಿದರು.

ಚಿತ್ರದುರ್ಗ ಮುರುಘಾಮಠದಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹ ಮಹೋತ್ಸವದ ನೇತೃತ್ವ ವಹಿಸಿ ಅವರು ಮಾತನಾಡಿದರು.

 ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ಬದುಕು ಗಾಳಿಗಿಟ್ಟ ದೀಪ ಎಂಬ ಮಾತನ್ನು ಹೇಳಿದ್ದರು. ಸಾವು ಇದೆ ಅದು ನಮಗೆ ಬರುವುದಿಲ್ಲ ಎನ್ನುವ ಭ್ರಮೆ ಬೇಡ. ಬದಲಿಗೆ ಇದರ ನಡುವೆ ಸತ್ಕಾರ್ಯ ಸಮಾಜ ಸೇವೆಗಳಲ್ಲಿ ತೊಡಗುವ ಮೂಲಕ ಸಾಧನೆ ಮಾಡಬೇಕಿದೆ ಎಂದರು.

ಸತ್ಕಾರ್ಯದಲ್ಲಿ ಸಂತೃಪ್ತಿ ಇದೆ. ನನಗೂ ಸಾವು ಇದೇ ಎನ್ನುವ ಅರಿವಿದ್ದೇ ನಾನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು. ನನ್ನ ಈ ಕೆಲಸಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಬಲ್ಲವು ಎಂದು ನುಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷಟಿ. ರವಿಕುಮಾರ್ ಮಾತನಾಡಿ, ಐತಿಹಾಸಿಕ ಮುರುಘಾಮಠ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸದಾ ಮುಂದು. ಬಡವರ ಪರವಾದ ಈ ಕಲ್ಯಾಣ ಮಹೋತ್ಸವ ಮಾದರಿಯಾದುದು. ಇದಲ್ಲದೇ ಮುರುಘಾ ಶರಣರು ಸಾಮಾಜಿಕ ತಾರತಮ್ಯ, ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಹಾಗೆಯೇ ನಾಡಿನ ಎಲ್ಲೆಡೆ ಹೋರಾಟ ನಡೆದರೂ ಅವುಗಳಲ್ಲಿ ಭಾಗವಹಿಸಿ ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ದಾಸೋಹ ಸೇವಾರ್ಥಿಗಳಾದ ಜಗಳೂರಿನ ಕಾಂಗ್ರೆಸ್ ಮುಖಂಡರಾದ ಎಚ್.ಪಿ. ರಾಜೇಶ್ ಮಾತನಾಡಿ,  ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗದಲ್ಲಿ ಬಡವರೇ ಹೆಚ್ಚು. ಅವರ ಪರವಾದ ವರ ಎನ್ನುವ ರೀತಿಯಲ್ಲಿ ಈ ಸಾಮೂಹಿಕ ಕಲ್ಯಾಣ ದಾರಿ ದೀಪವಾಗಿದೆ ಎಂದು ಹೇಳಿದರು.

ಸಾಮೂಹಿಕ ವಿವಾಹದಲ್ಲಿ ಅಂತರ್ಜಾತಿ ಕಲ್ಯಾಣವೂ ನಡೆಯಿತು. ರಾಣೇಬೆನ್ನೂರು ಸಮೀಪದ ಹಳ್ಳಿಯ ಶರಣಪ್ಪ ಬೆನಕನವಾಡಿ - ಕುರುಬ, ವಿಜಯಲಕ್ಷ್ಮೀ- ಕಮ್ಮಾರ ಜನಾಂಗದ ಇಬ್ಬರೂ ಪದವೀಧರರು. ಈ ಜೋಡಿ, ಜಾತಿ ಮೀರಿ ಅಂತರ್ಜಾತಿ ವಿವಾಹ ಮಾಡಿಕೊಳ್ಳುವ ಮೂಲಕ ಆದರ್ಶ ಮೆರೆದಿದ್ದಾರೆ ಎಂದು ಶರಣರು ಅವರಿಗೆ ಶುಭ ಕೋರಿದರು.

ದೊಡ್ಡಬಳ್ಳಾಪುರದ ಬೆಸ್ಕಾಂ ಸಲಹಾ ಸಮಿತಿ ಸದಸ್ಯ ಬದರಿನಾಥ್ ಸಂಗಡಿಗರು ನೂತನ ದಂಪತಿಗಳಿಗೆ ಬಟ್ಟೆ ವಿತರಿಸಿದರು. ವೇದಿಕೆಯಲ್ಲಿ ವೀರಶೈವ ಸಮಾಜದ ಅಧ್ಯಕ್ಷರಾದ ಕೆ.ಆರ್. ಶಿವಪ್ರಕಾಶ್, ಶ್ರಿಮತಿ ಟಿ. ರಂಜಿನಿ ರಾಜೇಶ್, ಬಿಜಾಪುರದ ರಾಜ್ಯ ಮಾನವಹಕ್ಕುಗಳ ಮಂಡಳಿ ಅಧ್ಯಕ್ಷ ಹಾಶಿಂಪೀರ್ ವಾಲಿಕಾರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ದ್ಯಾವೇಗೌಡ, ದಾದಾಪೀರ್, ಬಾಬು ಮತ್ತಿತರರು ಉಪಸ್ಥಿತರಿದ್ದರು.

`ಜಮುರಾ~ ಕಲಾಲೋಕದ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಪ್ರೊ.ಎಂ.ಎಸ್. ಕರಿಸಿದ್ದೇಶ್ವರಸ್ವಾಮಿ ಸ್ವಾಗತಿಸಿದರು. ಡಾ.ಜಯಣ್ಣ, ಪ್ರದೀಪ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಜ್ಞಾನಮೂರ್ತಿ ಅವರು ಮದುವೆ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT