ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಅರಿಯಲು ತನಿಖೆ ಅಗತ್ಯ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಪತ್ನಿ ಲೂಯಿಸ್ ಖುರ್ಷಿದ್ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಇತರ ಹಗರಣಗಳಷ್ಟು ಸರಳವಾಗಿಲ್ಲ. ದಿನಕ್ಕೊಂದು ತಿರುವು ಪಡೆಯುತ್ತಿರುವ ಈ ಹಗರಣದಲ್ಲಿ ಕಾನೂನು ಸಚಿವರು ಮತ್ತು ಅವರ ಪತ್ನಿ, `ಭ್ರಷ್ಟಾಚಾರ ವಿರೋಧಿ ಭಾರತ~ ಸಂಸ್ಥೆಯ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಹಾಗೂ ಆರೋಪಗಳನ್ನು ಕುಟುಕು ಕಾರ್ಯಾಚರಣೆಯ ಮೂಲಕ ಸಾಬೀತುಪಡಿಸಲು ಹೊರಟಿರುವ ಟಿವಿ ವಾಹಿನಿಯ ಪತ್ರಕರ್ತರು ಸೇರಿದಂತೆ ಹಲವಾರು ಪಾತ್ರಧಾರಿಗಳು ಸೇರಿಕೊಂಡಿದ್ದಾರೆ.

ಇದರಿಂದಾಗಿ ಹಗರಣ ಗೊಂದಲದ ಗೂಡಾಗಿ ಹೋಗಿದೆ. ಸಲ್ಮಾನ್ ಪತ್ನಿ ಲೂಯಿಸ್ ಯೋಜನಾ ನಿರ್ದೇಶಕರಾಗಿರುವ ಡಾ.ಝಕೀರ್ ಹುಸೇನ್ ಸ್ಮಾರಕ ಟ್ರಸ್ಟ್ ಹಗರಣದ ಕೇಂದ್ರಬಿಂದು. ಕೆಲವು ಅಧಿಕಾರಿಗಳ ಸಹಿಯನ್ನು ಪೋರ್ಜರಿ ಮಾಡಿರುವ ಪ್ರಮಾಣಪತ್ರ ಸಲ್ಲಿಸಿ ಆ ಮೂಲಕ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಟ್ರಸ್ಟ್ ಹಣ ಪಡೆದಿದೆ ಎನ್ನುವುದು ಮೊದಲನೆಯ ಆರೋಪ.

ಅಂಗವಿಕಲರಿಗೆ ತ್ರಿಚಕ್ರ ಸೈಕಲ್ ಮತ್ತು ಶ್ರವಣ ಸಾಧನಗಳನ್ನು ಟ್ರಸ್ಟ್ ನೀಡಿದೆ ಎಂದು ಸುಳ್ಳು ದಾಖಲೆಗಳನ್ನು ನೀಡಿದೆ ಎನ್ನುವುದು ಎರಡನೆಯ ಆರೋಪ. ಇದನ್ನು ಖುರ್ಷಿದ್ ದಂಪತಿ ತಮ್ಮಲ್ಲಿರುವ ದಾಖಲೆ ಮತ್ತು ಸಾಕ್ಷಿಗಳ ಮೂಲಕ ನಿರಾಕರಿಸಿದ್ದಾರೆ.
 
ಮೊದಲು ಈ ಆರೋಪ ಕೇಳಿಬಂದದ್ದು ಕಳೆದ ಮೇ ತಿಂಗಳಿನಲ್ಲಿ.  ಅರವಿಂದ್ ಕೇಜ್ರಿವಾಲ್ ಕಳೆದ ವಾರ ಈ ಆರೋಪಗಳನ್ನು ಪುನರುಚ್ಚರಿಸಿದ್ದರು. ಈ ಬಗ್ಗೆ ಇನ್ನಷ್ಟು ಆಳದ ತನಿಖೆಗಿಳಿದ ಸುದ್ದಿವಾಹಿನಿಯೊಂದು ಕುಟುಕು ಕಾರ್ಯಾಚರಣೆ ಮೂಲಕ ಆರೋಪಗಳನ್ನು ಸಾಬೀತುಪಡಿಸಲು ಕೆಲವು ಸಾಕ್ಷಿಗಳನ್ನು ಹಾಜರುಪಡಿಸಿತು. ಇದರ ನಂತರ ಮೂರೂ ಕಡೆಗಳಿಂದ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ.

ಅರವಿಂದ್ ಕೇಜ್ರಿವಾಲ್ ಈಗ ಕೇವಲ ಭ್ರಷ್ಟಾಚಾರ ವಿರೋಧಿ ಹೋರಾಟಗಾರರಲ್ಲ. ರಾಜಕೀಯ ಪಕ್ಷವೊಂದನ್ನು ಹುಟ್ಟುಹಾಕುವುದಾಗಿ ಘೋಷಿಸಿರುವ ಕಾರಣದಿಂದಾಗಿ ಅವರ ನಡೆ-ನುಡಿಯಲ್ಲಿ ರಾಜಕೀಯ ಉದ್ದೇಶವಿರುವುದನ್ನು ನಿರಾಕರಿಸಲಾಗದು.

ಜನಪ್ರಿಯತೆಯ ಗಿಮಿಕ್‌ಗಳು, ಅವಸರದ ತೀರ್ಮಾನಗಳು ಮತ್ತು ಪಕ್ಷಪಾತತನದಿಂದ ಕೂಡಿದ ನಿಲುವುಗಳು ಹಲವಾರು ಸಂದರ್ಭಗಳಲ್ಲಿ ಅವರ ಹೋರಾಟದ ಹಿಂದಿನ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಇದೇ ರೀತಿ `ಆಟವನ್ನಷ್ಟೇ ವರದಿ ಮಾಡಬೇಕಾದ ಮಾಧ್ಯಮಗಳು ತಮಗೆ ಅರಿವಿದ್ದೋ ಇಲ್ಲದೆಯೋ ತಾವೇ ಆಟಗಾರರಾಗಿ ಪರಿವರ್ತನೆಯಾಗುತ್ತಿರುವ ಬೆಳವಣಿಗೆ~ ಬಗ್ಗೆ ಕೂಡಾ ಆತ್ಮಾವಲೋಕನ ನಡೆಯಬೇಕಾಗಿದೆ.

ಸತ್ಯ ಅರಿಯಲು ನಿಷ್ಪಕ್ಷಪಾತ ತನಿಖೆಯೊಂದೇ ಮಾರ್ಗ. ತಮ್ಮ ವಿರುದ್ಧದ ಆರೋಪಗಳ ತನಿಖೆಗೆ ಸಿದ್ಧ ಎಂದು ಖುರ್ಷಿದ್ ದಂಪತಿ  ಹೇಳಿರುವುದು ಸ್ವಾಗತಾರ್ಹ.

ಆದರೆ ತನಿಖೆಯ ವ್ಯಾಪ್ತಿಯಲ್ಲಿ ಮಾಧ್ಯಮ ಸಂಸ್ಥೆಯನ್ನು ಕೂಡಾ ಸೇರಿಸಬೇಕೆನ್ನುವ ಸಚಿವರ ಬೇಡಿಕೆ ಅತಿರೇಕತನದ್ದು. ನೆಲದ ಕಾನೂನಿನಲ್ಲಿ ಮಾಧ್ಯಮಗಳಿಗೆ ವಿಶೇಷ ರಕ್ಷಣೆ ಇಲ್ಲ. ಈಗಾಗಲೇ ಲೂಯಿಸ್ ಖುರ್ಷಿದ್ ಮಾನನಷ್ಟ ಮೊಕದ್ದಮೆಯನ್ನು ಹೂಡಿರುವುದರಿಂದ ಮಾಧ್ಯಮ ಸಂಸ್ಥೆಯ ಬಗ್ಗೆ ಪ್ರತ್ಯೇಕ ತನಿಖೆಯ ಅಗತ್ಯ ಇರಲಾರದು. ಇಂತಹ ಅತಿರೇಕತನದ ಬೇಡಿಕೆಯನ್ನು ಕೈಬಿಟ್ಟು ಸಚಿವ ಸಲ್ಮಾನ್ ಖುರ್ಷಿದ್ ತಮ್ಮ ಕುಟುಂಬದ ವಿರುದ್ಧದ ಆರೋಪದ ಬಗ್ಗೆ ತನಿಖೆಗೆ ಅವಕಾಶ ಮಾಡಿಕೊಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT