ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಮೇವ ಜಯತೆ:ಮಿಂಚಿದ ಶ್ರೀದೇವಿ

Last Updated 13 ಮೇ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ):  ಬಾಲಿವುಡ್ ನಟ ಅಮೀರ್‌ಖಾನ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ `ಸತ್ಯಮೇವ ಜಯತೆ~ ಯ ಎರಡನೇ ಸಂಚಿಕೆಯಲ್ಲಿ ಖ್ಯಾತ ನಟಿ ಶ್ರೀದೇವಿ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರೊಬ್ಬರಲ್ಲಿ ವಿಶ್ವಾಸ ತುಂಬಿದರು.

ತಮ್ಮ ಬಾಲ್ಯ ಹಾಗೂ ಹರೆಯದಲ್ಲಿ ಸಂಬಂಧಿಕರೊಬ್ಬರಿಂದ 11 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದ ಮುಂಬೈನ ಹರೀಶ್ ಅಯ್ಯರ್ ಭಾನುವಾರ ಪ್ರಸಾರವಾದ ಕಾರ್ಯಕ್ರಮದ ಎರಡನೇ ಸಂಚಿಕೆಯಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಬಿಚ್ಚಿಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಹರೀಶ್, ತಮ್ಮ ಕಷ್ಟದ ದಿನಗಳಲ್ಲಿ ದುಃಖದಿಂದ ಹೊರಬರಲು ಶ್ರೀದೇವಿ ಅವರು ನಟಿಸಿರುವ ಚಿತ್ರಗಳು ನೆರವು ನೀಡಿವೆ. ಅಲ್ಲದೇ ತಮ್ಮ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ಸ್ಫೂರ್ತಿಯನ್ನು ನೀಡಿದೆ ಎಂದು ಹೇಳಿದರು.

ತಕ್ಷಣ ಪ್ರತಿಕ್ರಿಯಿಸಿದ ಶ್ರೀದೇವಿ, `ನಿಮ್ಮ ಕಷ್ಟದ ದಿನಗಳಲ್ಲಿ ನನ್ನ ಚಿತ್ರ ನಿಮಗೆ ಬಲ ನೀಡಿರುವುದನ್ನು ತಿಳಿದು ಸಂತೋಷವಾಯಿತು. ನಿಮ್ಮ ಹಿಂದಿನ ಕಥೆಗಳನ್ನು ಎಲ್ಲರೊಂದಿಗೂ ಹಂಚಿಕೊಂಡಿದ್ದೀರಿ. ಇಂತಹ ದೌರ್ಜನ್ಯಕ್ಕೆ ಒಳಗಾಗಿರುವವರೆಲ್ಲರಿಗೂ ಇದು ಪ್ರೇರಣೆ ನೀಡಲಿದೆ. ಅದು ನಿಮ್ಮನ್ನು ನಿಜವಾದ ಹೀರೊವನ್ನಾಗಿ ಮಾಡಲಿದೆ~ ಎಂದು ಶ್ರೀದೇವಿ ಮೆಚ್ಚುಗೆಯ ಮಾತನಾಡಿದರು.

ಭಾನುವಾರ ಪ್ರಸಾರವಾದ ಸಂಚಿಕೆಯಲ್ಲಿ ಅಮೀರ್‌ಖಾನ್ ಅವರು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಹಲವರ ಜೊತೆ ಮಾತನಾಡಿದರು.

ಭಾರತದಲ್ಲಿ ಶೇ 53ರಷ್ಟು ಮಕ್ಕಳು ಒಂದಲ್ಲ ಒಂದು ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ ಎಂಬ ಅಂಕಿ ಅಂಶಗಳನ್ನು ಒಳಗೊಂಡ ಸಮೀಕ್ಷಾ ವಿವರಗಳನ್ನು ಖಾನ್ ಅವರು ಕಾರ್ಯಕ್ರಮದಲ್ಲಿ ಮುಂದಿಟ್ಟರು.

ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸುವ ಪತ್ರವೊಂದಕ್ಕೆ ಸಹಿ ಹಾಕುವುದರ ಮೂಲಕ ಶ್ರೀದೇವಿ ಅವರು   ಕಾರ್ಯಕ್ರಮದ ಉದ್ದೇಶಕ್ಕೆ ಬೆಂಬಲ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT